ಟ್ರೆಂಡ್ ಆಯ್ತು "ಪಿರೀಯಡ್ ಫೇಸ್ ಮಾಸ್ಕ್".. ಇದೆಷ್ಟು ಡೇಂಜರ್ ಗೊತ್ತಾ?
Menstrual masking:ಅನೇಕ ಮಹಿಳೆಯರು ಇದನ್ನು ನೈಸರ್ಗಿಕ ಫೇಶಿಯಲ್ ಎಂದು ಕರೆಯುತ್ತಾರೆ. ಇದು ವ್ಯಾಂಪೈರ್ ಫೇಶಿಯಲ್ ಅಥವಾ ಪಿಆರ್‌ಪಿಯಂತೆಯೇ ಪರಿಣಾಮ ಬೀರುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದು ನಿಜವೇ?. ಪಿರಿಯಡ್ ಬ್ಲಡ್ ಅನ್ನು ಮುಖಕ್ಕೆ ಹಚ್ಚುವುದರಿಂದ ನಿಜವಾಗಿಯೂ ಚರ್ಮ ಆರೋಗ್ಯಕರವಾಗಿರುತ್ತಾ?.

ಇದು ನಿಜವೇ?
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಶಿಷ್ಟ ಟ್ರೆಂಡ್ ವೇಗವಾಗಿ ವೈರಲ್ ಆಗುತ್ತಿದೆ. ಮಹಿಳೆಯರು ತಮ್ಮ ಪಿರಿಯಡ್ ಬ್ಲಡ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ತ್ವಚೆ ಹೊಳೆಯುತ್ತದೆ ಮತ್ತು ಯಂಗ್ ಆಗಿರುತ್ತದೆ ಎಂದು ನಂಬಲಾಗಿದೆ. ಈ ಟ್ರೆಂಡ್ ಅನ್ನ ಪಿರೀಯಡ್ ಫೇಸ್ ಮಾಸ್ಕ್ ಎಂದು ಕರೆಯಲಾಗುತ್ತದೆ. ಅನೇಕ ಮಹಿಳೆಯರು ಇದನ್ನು ನೈಸರ್ಗಿಕ ಫೇಶಿಯಲ್ ಎಂದು ಕರೆಯುತ್ತಾರೆ. ಇದು ವ್ಯಾಂಪೈರ್ ಫೇಶಿಯಲ್ ಅಥವಾ ಪಿಆರ್‌ಪಿಯಂತೆಯೇ ಪರಿಣಾಮ ಬೀರುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದು ನಿಜವೇ? ಪಿರಿಯಡ್ ಬ್ಲಡ್ ಅನ್ನು ಮುಖಕ್ಕೆ ಹಚ್ಚುವುದರಿಂದ ನಿಜವಾಗಿಯೂ ಚರ್ಮ ಆರೋಗ್ಯಕರವಾಗಿರುತ್ತಾ ಮತ್ತು ಬೇಗನೆ ಹೊಳಪು ಬರುತ್ತಾ ಎಂದು ತಜ್ಞರಿಂದ ತಿಳಿದುಕೊಳ್ಳೋಣ.
ಹೀಗೆ ಮಾಡುವುದು ಎಷ್ಟು ಸರಿ?
ಡಾ. ಮಾನ್ಸಿ ನರಲ್ಕರ್ (drmanasinaralkar) ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಕುರಿತು ವಿಡಿಯೋವನ್ನ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವಿವರಿಸುವ ಪ್ರಕಾರ, "ಈ ಟ್ರೆಂಡ್ ಹಿಂದಿನ ತರ್ಕವೆಂದರೆ ಮುಟ್ಟಿನ ರಕ್ತವು ಕಾಂಡಕೋಶಗಳು ಮತ್ತು ಸೈಟೊಕಿನ್‌ಗಳನ್ನು ಹೊಂದಿರುತ್ತದೆ. ಇವು ಚರ್ಮವನ್ನು ಸರಿಪಡಿಸಬಹುದು ಮತ್ತು ಹೊಳಪನ್ನು ತರಬಹುದು ಎಂದು ನಂಬಲಾಗಿದೆ. ಆದರೆ ಇದು ಕೇವಲ ಒಂದು ಥಿಯರಿ ಮತ್ತು ಸಂಶೋಧನೆ ಇನ್ನೂ ನಡೆಯುತ್ತಿದೆ".
ಸೋಂಕಿನ ಅಪಾಯ ಹೆಚ್ಚು
ಡಾ. ಮಾನ್ಸಿ ಪ್ರಕಾರ, ಮುಟ್ಟಿನ ರಕ್ತವು ಕೇವಲ ಕಾಂಡಕೋಶಗಳಿಂದ ಮಾಡಲ್ಪಟ್ಟಿಲ್ಲ. ಇದು ಎಂಡೊಮೆಟ್ರಿಯಲ್ ಅಂಗಾಂಶ (ಗರ್ಭಾಶಯದ ಒಳಪದರ), ಯೋನಿ ಡಿಸ್ಚಾರ್ಜ್ ಮುಂತಾದ ಅನೇಕ ಇತರ ಘಟಕಗಳನ್ನು ಒಳಗೊಂಡಿದೆ. ಇದಲ್ಲದೆ ಈ ರಕ್ತವು ಯೋನಿಯ ಮೂಲಕ ಹಾದುಹೋಗುವುದರಿಂದ ಇದು ವಿವಿಧ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಸಹ ಹೊಂದಿರುತ್ತದೆ. ಆದ್ದರಿಂದ ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಸೋಂಕಿನ ಅಪಾಯ ಹೆಚ್ಚಿಸಬಹುದು.
ವೈದ್ಯರು ಹೇಳುವುದೇನು?
"ಪಿಆರ್‌ಪಿ ಅಥವಾ ವ್ಯಾಂಪೈರ್ ಫೇಶಿಯಲ್‌ನಂತೆಯೇ ಪಿರಿಯಡ್ ಬ್ಲಡ್ ಪರಿಣಾಮ ಬೀರುವುದಿಲ್ಲ. ಇದು ಕ್ರಿಮಿನಾಶಕವಾಗಿದೆ. ಆದರೆ ಪಿರಿಯಡ್ ಬ್ಲಡ್ ಹಾಗಲ್ಲ. ಇದು ಚರ್ಮಕ್ಕೆ ಪ್ರಯೋಜನಕಾರಿ ಎಂಬುದಕ್ಕೆ ಇನ್ನೂ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದಕ್ಕೆ ವಿರುದ್ಧವಾಗಿ ಇದು ಚರ್ಮಕ್ಕೆ ಹಾನಿಯನ್ನುಂಟುಮಾಡಬಹುದು" ಎಂದು ವೈದ್ಯರು ಹೇಳುತ್ತಾರೆ.
ಎಷ್ಟೆಲ್ಲಾ ಅಪಾಯವಿದೆ?
*ಇದು ನಿಮಗೆ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕನ್ನು ಉಂಟುಮಾಡಬಹುದು.
*ಚರ್ಮದ ಅಲರ್ಜಿ.
*ಮೊಡವೆಗಳು ಅಥವಾ ದದ್ದುಗಳು ಅಥವಾ ದೀರ್ಘಾವಧಿಯಲ್ಲಿ ಚರ್ಮಕ್ಕೆ ಹಾನಿಯಾಗುವ ಅಪಾಯವೂ ಹೆಚ್ಚಾಗಬಹುದು.
*ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ನಿಮ್ಮ ಮುಖಕ್ಕೆ ಯಾವುದೇ ಕ್ರಿಮಿನಾಶಕವಲ್ಲದ ಉತ್ಪನ್ನವನ್ನು ಹಚ್ಚುವುದು ಹಾನಿಕಾರಕವಾಗಿದೆ. ಆದ್ದರಿಂದ ಅಂತಹ ಟ್ರೆಂಡ್ ಅನುಸರಿಸುವುದನ್ನು ತಪ್ಪಿಸಿ.
ನೈಸರ್ಗಿಕ ಹೊಳಪು ಬೇಕೆಂದ್ರೆ
ಇದಲ್ಲದೆ ನೀವು ನೈಸರ್ಗಿಕ ಹೊಳಪನ್ನು ಬಯಸಿದರೆ ಮೊದಲು ಸಾಕಷ್ಟು ನೀರು ಕುಡಿಯಿರಿ. ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಿ. ಆರೋಗ್ಯಕರ ಆಹಾರ ಸೇವಿಸಿ ಮತ್ತು ಪ್ರತಿದಿನ ವ್ಯಾಯಾಮ ಮಾಡಿ. ಇದೆಲ್ಲವನ್ನೂ ಮೀರಿ ನಿಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ತಜ್ಞರು ಶಿಫಾರಸು ಮಾಡಿದ ಸೀರಮ್‌ಗಳು ಅಥವಾ ಇತರ ಚರ್ಮದ ಆರೈಕೆ ಉತ್ಪನ್ನಗಳನ್ನು ನೀವು ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

