ಚಳಿಗಾಲದಲ್ಲಿ ಮಾಡಿದ ಈ ತಪ್ಪಿನಿಂದ ನಿದ್ರೆಯಲ್ಲಿಯೇ ಹೋಗಬಹುದು ಜೀವ, ಎಚ್ಚರ
ಚಳಿಗಾಲ ನವಜಾತ ಶಿಶುಗಳಿಗೆ ಸವಾಲಿನ ಸಮಯ. ಚಳಿಗಾಲದಲ್ಲಿ ಮಗು ಅನಾರೋಗ್ಯಕ್ಕೆ ತುತ್ತಾಗೋದು ಹೆಚ್ಚು. ಕೆಲವೊಮ್ಮೆ ಸಾವು ಸಂಭವಿಸಬಹುದು. ಮಗುವಿನ ಬಗ್ಗೆ ಪಾಲಕರು ಎಚ್ಚರವಿಸುವ ಅಗತ್ಯವಿದೆ.

ಚಳಿಯಿಂದ ಮಗು ರಕ್ಷಣೆ ಹೇಗೆ
ಚಳಿಗಾಲದಲ್ಲಿ ನವಜಾತ ಮಗುವನ್ನು ಬೆಚ್ಚಗಿಡುವುದು ಬಹಳ ಮುಖ್ಯ. ತಲೆಗೆ ಟೋಪಿ ಹಾಗೂ ಕಾಲಿಗೆ ಸಾಕ್ಸ್ ಅಗತ್ಯವಾಗಿ ಹಾಕಬೇಕು. ಕೋಣೆಯ ಉಷ್ಣತೆ ಬೆಚ್ಚಗಿರಬೇಕು. ಮಲಗುವಾಗ ನಿಮ್ಮ ಮಗುವನ್ನು ಕಂಬಳಿಯಿಂದ ಮುಚ್ಚಬೇಡಿ. ಇದು SIDS (ಹಠಾತ್ ಶಿಶು ಮರಣ ಸಿಂಡ್ರೋಮ್) ಅಪಾಯವನ್ನು ಹೆಚ್ಚಿಸುತ್ತದೆ. ಒಂದು ವರ್ಷದೊಳಗಿನ ಮಕ್ಕಳಲ್ಲಿ SIDS ಸಾವಿಗೆ ಸಾಮಾನ್ಯ ಕಾರಣವಾಗಿದೆ.
ಸ್ನಾನಕ್ಕೆ ಬೆಚ್ಚಗಿನ ನೀರು
ಚಳಿಗಾಲದಲ್ಲಿ ನವಜಾತ ಶಿಶುಗಳಿಗೆ ಸ್ನಾನ ಮಾಡಿಸುವ ಸಮಯದಲ್ಲಿ ಬೆಚ್ಚಗಿನ ನೀರನ್ನು ಬಳಸಬೇಕು. ಹಾಗೆಯೇ ದೀರ್ಘ ಸಮಯ ಮಗುವನ್ನು ಸ್ನಾನ ಮಾಡಿಸಬಾರದು. 2 ರಿಂದ 3 ನಿಮಿಷಗಳಲ್ಲಿ ಸ್ನಾನ ಮುಗಿಸಬೇಕು.
ಸೋಂಕಿನ ಅಪಾಯ
ಚಳಿಗಾಲದಲ್ಲಿ ಮಗುವಿಗೆ ಸೋಂಕು ತಗಲದಂತೆ ಕೆಲ ಮುನ್ನೆಚ್ಚರಿಕೆವಹಿಸಬೇಕು. ಮಗು ಹುಟ್ಟಿದಾಗ ಅನೇಕರು ಆಸ್ಪತ್ರೆ, ಮನೆಗೆ ಭೇಟಿ ನೀಡ್ತಾಋಎ. ಮಗುವನ್ನು ಮುಟ್ಟುತ್ತಾರೆ. ಇದರಿಂದ ಮಗು ಸೋಂಕಿಗೊಳಗಾಗುವ ಅಪಾಯವಿರುತ್ತದೆ. ಹಾಗಾಗಿ ಮಗು ಜನಿಸಿ ಕೆಲ ವಾರ ಮನೆಗೆ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಬೇಡಿ. ಹಾಗೆಯೇ ಶೀತ ಅಥವಾ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಜನರಿಂದ ಮಗುವನ್ನು ದೂರವಿಡಿ.
ಶುಚಿತ್ವದ ಬಗ್ಗೆ ಕಾಳಜಿ
ನವಜಾತ ಶಿಶು ಬಹಳ ಸೂಕ್ಷ್ಮ. ರೋಗನಿರೋಧಕ ಶಕ್ತಿ ನಿಧಾನವಾಗಿ ಅಭಿವೃದ್ಧಿಯಾಗ್ತಿರುತ್ತದೆ. ಹಾಗಾಗಿ ಅತ್ಯಂತ ಕಾಳಜಿಯಿಂದ ಮಗುವಿನ ಆರೈಕೆ ಮಾಡ್ಬೇಕು. ಮಗುವನ್ನು ಮುಟ್ಟುವ ಮುನ್ನ ನಿಮ್ಮ ಕೈಗಳನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಲು ಮರೆಯಬೇಡಿಮಗು ನಿದ್ರೆ ಮಾಡುವ ಸ್ಥಳ, ಆಟ ಆಡುವ ಜಾಗವನ್ನು ಸ್ವಚ್ಛವಾಗಿಡಿ. ಮಗು ಆರೋಗ್ಯವಾಗಿರಬೇಕೆಂದ್ರೆ ವ್ಯಾಕ್ಸಿನ್ ಬಗ್ಗೆ ಗಮನ ಹರಿಸಿ. ಎಲ್ಲಾ ವ್ಯಾಕ್ಸಿನೇಷನ್ಗಳನ್ನು ಸಮಯಕ್ಕೆ ಸರಿಯಾಗಿ ನೀಡಿ.
ಶುಷ್ಕತೆಯಿಂದ ಮಗು ರಕ್ಷಣೆ
ಚಳಿಗಾಲದಲ್ಲಿ ಶುಷ್ಕತೆಯಿಂದ ಮಗುವನ್ನು ರಕ್ಷಿಸಲು , ಹಗುರವಾದ, ಮಗುವಿಗೆ ಸುರಕ್ಷಿತವಾದ ಮಾಯಿಶ್ಚರೈಸರ್ ಹಚ್ಚಿ. ಪರಿಮಳಯುಕ್ತ ಸೋಪ್ ಬಳಸಬೇಡಿ. ಮಗುವಿಗೆ ಮೂಗು ಕಟ್ಟಿದ್ದರೆ, ವೈದ್ಯರ ಸಲಹೆ ಮೇರೆಗೆ ಸಲೈನ್ ಹನಿ ಬಳಸಿ.
ಇದು ಗಮನದಲ್ಲಿರಲಿ
ವೈದ್ಯರ ಪ್ರಕಾರ, ಸುಗಂಧ ದ್ರವ್ಯ, ಧೂಪದ್ರವ್ಯ, ಅಡುಗೆ ಹೊಗೆ, ಹೀಟರ್ ಹೊಗೆ ಹಾಗೂ ವಾಹನಗಳ ಹೊಗೆಯಿಂದ ಮಗುವನ್ನು ದೂರವಿಡಬೇಕು. ಮಗುವಿಗೆ ಉಸಿರಾಟದ ತೊಂದರೆ, ಉಸಿರಾಡುವಾಗ ಅಸಾಮಾನ್ಯ ಶಬ್ದ ಕೇಳಿದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಯಾವಾಗ ಚಿಕಿತ್ಸೆ ?
ನವಜಾತ ಶಿಶುಗಳ ಸಮಸ್ಯೆ ಗುರುತಿಸೋದು ಸುಲಭವಲ್ಲ. ಪಾಲಕರು ಸದಾ ಜಾಗೃತರಾಗಿರಬೇಕು. ಶಿಶು ಕಡಿಮೆ ಹಾಲು ಸೇವನೆ ಮಾಡ್ತಿದ್ದರೆ, ಹಾಲನ್ನು ಸಂಪೂರ್ಣ ತ್ಯಜಿಸಿದ್ದರೆ, ಜ್ವರ ಅಥವಾ ಅತಿಯಾಗಿ ಮೈ ತಣ್ಣಗಾದಲ್ಲಿ, ಅಸಾಮಾನ್ಯ ಆಲಸ್ಯ, ಚರ್ಮದ ಬಣ್ಣ ನೀಲಿ ಅಥವಾ ತುಂಬಾ ಮಸುಕಾಗಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ತಕ್ಷಣದ ಚಿಕಿತ್ಸೆಯಿಂದ ಮಕ್ಕಳ ಆರೋಗ್ಯ ಸುಧಾರಿಸಬಹುದು. ಜೀವವನ್ನು ಉಳಿಸಬಹುದು. ಹಾಗಾಗಿ ಪಾಲಕರು ಚಳಿಗಾಲದಲ್ಲಿ ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿವಹಿಸುವ ಅಗತ್ಯವಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

