- Home
- Sports
- Football
- ಫಿಫಾ ವಿಶ್ವಕಪ್ ಆರಂಭದಲ್ಲೇ ಮೈದಾನದಲ್ಲಿ ಹೈಡ್ರಾಮಾ: ಗೋಲುಗಳಿಗಿಂತ ‘ರೆಡ್ ಕಾರ್ಡ್’ನಿಂದಲೇ ಇತಿಹಾಸ ಬರೆದ ಓಪನಿಂಗ್ ಮ್ಯಾಚ್!
ಫಿಫಾ ವಿಶ್ವಕಪ್ ಆರಂಭದಲ್ಲೇ ಮೈದಾನದಲ್ಲಿ ಹೈಡ್ರಾಮಾ: ಗೋಲುಗಳಿಗಿಂತ ‘ರೆಡ್ ಕಾರ್ಡ್’ನಿಂದಲೇ ಇತಿಹಾಸ ಬರೆದ ಓಪನಿಂಗ್ ಮ್ಯಾಚ್!
ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ದಕ್ಷಿಣ ಆಫ್ರಿಕಾವನ್ನು 2-0 ಅಂತರದಿಂದ ಮಣಿಸಿತು. ಆದರೆ, ಈ ಪಂದ್ಯವು ಗೋಲುಗಳಿಗಿಂತ ಹೆಚ್ಚಾಗಿ, ರೆಫರಿಗಳು ಮೂವರು ಆಟಗಾರರಿಗೆ ರೆಡ್ ಕಾರ್ಡ್ ನೀಡಿದ ಕಾರಣದಿಂದಾಗಿ ಸುದ್ದಿಯಾಯಿತು.

85 ಸಾವಿರ ಅಭಿಮಾನಿಗಳ ಸಮ್ಮುಖದಲ್ಲಿ ಆರಂಭ
ಫಿಫಾ ಫುಟ್‌ಬಾಲ್ ವಿಶ್ವಕಪ್ 2026ರ ಟ್ರೋಫಿ ಯಾರ ಮುಡಿಗೇರಲಿದೆ ಎಂಬುದು ಟೂರ್ನಿ ಮುಂದುವರಿದಂತೆ ತಿಳಿಯಲಿದೆ. ಆದರೆ, ಈ ಮಹಾಸಮರದ ಮೊದಲ ಪಂದ್ಯದಲ್ಲೇ ಅಚ್ಚರಿಯ ದಾಖಲೆಯೊಂದು ನಿರ್ಮಾಣವಾಗಿದೆ. ಆತಿಥೇಯ ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಆರಂಭಿಕ ಪಂದ್ಯವನ್ನು ಕಣ್ಣುಂಬಿಕೊಳ್ಳಲು ಮೆಕ್ಸಿಕೋ ಸಿಟಿಯ ಪ್ರಸಿದ್ಧ 'ಅಜ್ಟೆಕಾ ಸ್ಟೇಡಿಯಂ'ನಲ್ಲಿ 85 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದರು. ಈ ರೋಮಾಂಚಕ ಪಂದ್ಯದಲ್ಲಿ ಮೆಕ್ಸಿಕೋ ತಂಡವು ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳಿಂದ ಸೋಲಿಸಿ ತವರಿನ ಅಭಿಮಾನಿಗಳನ್ನು ಸಂಭ್ರಮದಲ್ಲಿ ತೇಲಿಸಿತು.
ಗೋಲುಗಳಿಗಿಂತ ಮೈದಾನದಲ್ಲಿ ಶಿಸ್ತು ಉಲ್ಲಂಘನೆಯದ್ದೇ ಸದ್ದು
ಮೆಕ್ಸಿಕೋ ತಂಡವು ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದರೂ ಸಹ, ಈ ಪಂದ್ಯವು ಬೇರೆಯದೇ ಕಾರಣಕ್ಕಾಗಿ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಮೈದಾನದಲ್ಲಿ ಆಟಗಾರರು ತೋರಿದ ಅಶಿಸ್ತಿನ ನಡೆಗೆ ರೆಫರಿಗಳು ಬುದ್ದಿ ಕಲಿಸಿದ್ದಾರೆ. ಇಡೀ ಪಂದ್ಯದಲ್ಲಿ ಒಟ್ಟು 23 ಫೌಲ್‌ಗಳು (Fouls) ನಡೆದಿದ್ದು, ಈ ಪೈಕಿ ಮೆಕ್ಸಿಕೋ 12 ಮತ್ತು ದಕ್ಷಿಣ ಆಫ್ರಿಕಾ 11 ಫೌಲ್‌ಗಳನ್ನು ಮಾಡಿದವು. ನಿಯಮ ಉಲ್ಲಂಘಿಸಿದ ಆಟಗಾರರಿಗೆ ರೆಫರಿ ಕರುಣೆ ತೋರದೆ ನೇರವಾಗಿ ಮೈದಾನದಿಂದ ಹೊರಗಟ್ಟಿದರು.
ಮೊದಲ ಪಂದ್ಯದಲ್ಲೇ ಮೂರು ರೆಡ್ ಕಾರ್ಡ್‌ಗಳ ಬೇಡದ ದಾಖಲೆ
ಫುಟ್‌ಬಾಲ್ ಇತಿಹಾಸದಲ್ಲಿ ಅಪರೂಪ ಎನ್ನುವಂತೆ, ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ರೆಫರಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಮೂವರು ಆಟಗಾರರಿಗೆ ರೆಡ್ ಕಾರ್ಡ್ (Red Card) ತೋರಿಸಿ ಮೈದಾನದಿಂದ ಹೊರಗಟ್ಟುವ ಮೂಲಕ ದಾಖಲೆ ಬರೆದಿದ್ದಾರೆ. ಪಂದ್ಯದ 50ನೇ ನಿಮಿಷದಲ್ಲಿ ದಕ್ಷಿಣ ಆಫ್ರಿಕಾದ ಮಿಡ್‌ಫೀಲ್ಡರ್ 'ಯಾಯಾ ಸಿಥೋಲೆ' ಭೀಕರ ಫೌಲ್ ಮಾಡಿ ಈ ಬಾರಿಯ ವಿಶ್ವಕಪ್‌ನ ಮೊದಲ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು.
ದಕ್ಷಿಣ ಆಫ್ರಿಕಾ ಹಾಗೂ ಮೆಕ್ಸಿಕೋ ಆಟಗಾರರ ಸಸ್ಪೆನ್ಷನ್
ದಕ್ಷಿಣ ಆಫ್ರಿಕಾ ತಂಡದ ಪರವಾಗಿ 60ನೇ ನಿಮಿಷದ ನಂತರ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದ 'ಥೆಂಬಾ ಜ್ವಾನೆ', ಕೇವಲ 24 ನಿಮಿಷಗಳ ಆಟದ ಅವಧಿಯಲ್ಲಿ ಅಂದರೆ ಪಂದ್ಯದ 84ನೇ ನಿಮಿಷದಲ್ಲಿ ಮತ್ತೊಂದು ರೆಡ್ ಕಾರ್ಡ್ ಪಡೆದು ಹೊರಬಿದ್ದರು. ಇನ್ನು ಪಂದ್ಯ ಮುಗಿಯಲು ಕೆಲವೇ ನಿಮಿಷಗಳಿದ್ದಾಗ ಅಶಿಸ್ತು ತೋರಿದ ಮೆಕ್ಸಿಕೋದ ರಕ್ಷಣಾತ್ಮಕ ಆಟಗಾರ (ಡಿಫೆಂಡರ್) 'ಸೇಸರ್ ಮಾಂಟೆಸ್' ರೆಫರಿಯ ರಡಾರ್‌ಗೆ ಸಿಲುಕಿದರು. ಇಂಜುರಿ ಟೈಮ್‌ನಲ್ಲಿ (90+2 ನಿಮಿಷ) ಇವರಿಗೂ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರಗೆ ಕಳುಹಿಸಲಾಯಿತು.
ಮೆಕ್ಸಿಕೋ ತಂಡದ ಏಕಪಕ್ಷೀಯ ಜಯ
ಆತಿಥೇಯ ಮೆಕ್ಸಿಕೋ ಪಂದ್ಯದ ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿತು. ಪಂದ್ಯದ 9ನೇ ನಿಮಿಷದಲ್ಲೇ ಮೆಕ್ಸಿಕೋದ ಲೆಫ್ಟ್ ವಿಂಗರ್ 'ಜೂಲಿಯನ್ ಕ್ವಿನೋನೆಸ್', ಎರಿಕ್ ಲಿರಾ ನೀಡಿದ ಅದ್ಭುತ ಪಾಸ್ ಸಹಾಯದಿಂದ ಟೂರ್ನಿಯ ಅತ್ಯಂತ ಮೊದಲ ಗೋಲು ಬರೆದು ಇತಿಹಾಸ ನಿರ್ಮಿಸಿದರು. ಇದರಿಂದ ಮೊದಲಾರ್ಧದಲ್ಲಿ ಮೆಕ್ಸಿಕೋ 1-0 ಮುನ್ನಡೆ ಸಾಧಿಸಿತು. ನಂತರ ದ್ವಿತೀಯಾರ್ಧದ 67ನೇ ನಿಮಿಷದಲ್ಲಿ ಸ್ಟಾರ್ ಸ್ಟ್ರೈಕರ್ 'ರೌಲ್ ಹಿಮೆನೆಜ್' ಎರಡನೇ ಗೋಲು ಬಾರಿಸಿ ತಂಡಕ್ಕೆ 2-0 ಅಂತರದ ಜಯ ತಂದುಕೊಟ್ಟರು. ದಕ್ಷಿಣ ಆಫ್ರಿಕಾ ಗೋಲಿನ ಕಡೆಗೆ 16 ಶಾಟ್‌ಗಳನ್ನು ಹೊಡೆದರೂ ಸಹ, ಮೆಕ್ಸಿಕೋದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

