ಸಂಡೇ ಯಾವಾಗ್ಲೂ ಬಿರಿಯಾನಿನೇ ಬಾರಿಸ್ಬೇಕು ಅಂತೇನಿಲ್ಲ, ಸ್ಪೆಷಲ್ ಚೆಟ್ಟಿನಾಡ್ ಚಿಕನ್ ಟ್ರೈ ಮಾಡಿ
ಸಂಡೇ ಬಂದ್ರೆ ಸಾಕು ನಾನ್‌ವೆಜ್ ಪ್ರಿಯರು ನಾನ್‌ವೆಜ್ ಬಾರಿಸೋದೆ ಅಂತ ಮನಸ್ಸಲ್ಲೇ ಫಿಕ್ಸ್ ಆಗಿರ್ತಾರೆ. ಆದ್ರೆ ಪ್ರತಿ ಭಾನುವಾರ ಬಂದಾಗ್ಲೂ ಬಿರಿಯಾನಿ ತಿನ್ನೋದು ಅಂದ್ರೆ ಎಷ್ಟಾದ್ರೂ ಬೇಜಾರು ಅಲ್ವಾ..ಹೀಗಾಗಿ ಈ ಬಾರಿ ಸ್ಪೆಷಲ್ ಚೆಟ್ಟಿನಾಡ್ ಚಿಕನ್ ಟ್ರೈ ಮಾಡಿ
ಭಾನುವಾರ ಬಂದ್ರೆ ಸಾಕು ಭರ್ಜರಿ ಬ್ಯಾಟಿಂಗ್ ಮಾಡೋ ಸಮಯ. ಅಂದ್ಮೇಲೆ ನಾನ್‌ವೆಜ್ ಇಲ್ಲಾಂದ್ರೆ ಆಗುತ್ತಾ? ಭರ್ಜರಿಯಾಗಿ ಬಾರಿಸೋಕೆ ಚಿಕನ್, ಮಟನ್ ಏನಾದ್ರೂ ಬೇಕೇ ಬೇಕು. ಅದ್ರೆ ಹೆಚ್ಚಿನವರು ಸಂಡೇ ಅಂದ್ರೆ ಬಿರಿಯಾನಿ ಅಂತ ಫಿಕ್ಸ್ ಆಗಿ ಬಿಡ್ತಾರೆ. ಆದ್ರೆ ಪ್ರತಿ ಭಾನುವಾರ ಬಂದಾಗ್ಲೂ ಬಿರಿಯಾನಿ ತಿನ್ನೋದು ಅಂದ್ರೆ ಎಷ್ಟಾದ್ರೂ ಬೇಜಾರು ಅಲ್ವಾ..ಹೀಗಾಗಿ ಈ ಬಾರಿ ಸ್ಪೆಷಲ್ ಚೆಟ್ಟಿನಾಡ್ ಚಿಕನ್ ಟ್ರೈ ಮಾಡಿ
ನಾನ್‌ವೆಜ್ ವೆರೈಟಿ ವಿಷಯಕ್ಕೆ ಬಂದ್ರೆ ಭಾರತದಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ವೈವಿಧ್ಯಮಯ ಆಹಾರಗಳನ್ನು ನೋಡಬಹುದು. ಬಿರಿಯಾನಿ, ಕರಿ, ಫ್ರೈ ಎಲ್ಲದರಲ್ಲೂ ವೆರೈಟಿಯಿರುತ್ತದೆ. ಇವತ್ತು ನಾವ್ ಹೇಳ್ತಿರೋದು ಚೆಟ್ಟಿನಾಡ್ ಚಿಕನ್ ಕರಿಯ ಬಗ್ಗೆ. ಇದು ದಕ್ಷಿಣ ಭಾರತದ ತಮಿಳುನಾಡಿನ ಚೆಟ್ಟಿನಾಡ್ ಪ್ರದೇಶದಿಂದ ಬಂದಿರುವ ಸ್ಪೆಷಲ್ ರೆಸಿಪಿ.
ಚೆಟ್ಟಿನಾಡ್ ಪಾಕಪದ್ಧತಿಯು ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಚೆಟ್ಟಿನಾಡ್ ಚಿಕನ್ ಕರಿ, ಚೆಟ್ಟಿನಾಡ್ ಚಿಕನ್ ಫ್ರೈ ಮಾಡಿ ಸವಿಯುತ್ತಾರೆ. ಹಾಗಿದ್ರೆ ಬನ್ನಿ ಇವತ್ತು ಸ್ಪೆಷಲ್ ಚೆಟ್ಟಿನಾಡ್ ಚಿಕನ್ ಮಾಡೋದು ಹೇಗೆ ತಿಳಿಯೋಣ.
ಬೇಕಾದ ಪದಾರ್ಥಗಳು
ಚಿಕನ್ 1/2 ಕೆಜಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಒಂದು ಚಮಚ, ಮೆಣಸು ಒಂದು ಚಮಚ, ಜೀರಿಗೆ ಒಂದು ಚಮಚ, ಫೆನ್ನೆಲ್ ಒಂದು ಚಮಚ, ದಾಲ್ಚಿನ್ನಿ ಕಡ್ಡಿ ಒಂದು ಇಂಚು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಕಪ್, ಒಂದು ಚಮಚ ಕರಿಯಲು ಎಣ್ಣೆ, ಒಂದು ಚಮಚ ಗರಂ ಮಸಾಲ, ಜೊತೆಗೆ ಒಂದು ಚಿಟಿಕೆ ಕರಿಬೇವಿನ ಪುಡಿ.
ಮಾಡುವ ವಿಧಾನ
ಮೊದಲು ಚಿಕನ್‌ನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಪಕ್ಕಕ್ಕೆ ಇಟ್ಟುಕೊಳ್ಳಿ. ನೀರು ಪೂರ್ತಿ ಆರಿದ ನಂತರ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಅರಿಶಿನ ಹಾಕಿ ಹುರಿದು ಪಕ್ಕಕ್ಕೆ ಇಡಿ. ಈಗ ಮೇಲೆ ಹೇಳಿದ ಮಸಾಲೆಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಹಾಕಿ ಹುರಿಯಿರಿ. ನಂತರ ರುಬ್ಬಿದ ಈ ಮಸಾಲೆಯನ್ನು ಸೇರಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಈಗ ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಮತ್ತು ಸ್ವಲ್ಪ ಅರಿಶಿನ ಸೇರಿಸಿ ಮಿಶ್ರಣ ಮಾಡಿ. ಆ ನಂತರ ಹುರಿದ ಚಿಕನ್‌ನ್ನು ಹಾಕಿ ಕಾಲು ಕಪ್ ನೀರು ಹಾಕಿ ಬೇಯಿಸಿ.
ಗ್ರೇವಿ ಹೆಚ್ಚು ನೀರಾಗಲು ಅಥವಾ ದಪ್ಪವಾಗದಂತೆ ಆಗಾಗ ಸೌಟು ಆಗಿ ಮಗುಚಿತ್ತಿರಿ. ಚಿಕನ್ ಮಸಾಲೆಯೊಂದಿಗೆ ಚೆನ್ನಾಗಿ ಮಿಕ್ಸ್ ಆಗಿದೆ ಎಂದು ತಿಳಿದಾಗ ಸ್ಟವ್ ಆಫ್ ಮಾಡಿ. ಈಗ ರುಚಿಕರವಾದ ಚೆಟ್ಟಿನಾಡು ಸ್ಪೆಷಲ್ ಚಿಕನ್ ಕರಿ ಸವಿಯಲು ಸಿದ್ಧವಾಗಿದೆ.
ಅನ್ನ ಚಪಾತಿ ಅಥವಾ ದೋಸೆಯೊಂದಿಗೆ ಸಹ ಇದನ್ನು ಸವಿಯಬಹುದು. ಗೆಸ್ಟ್‌ಗಳು ಬಂದಾಗ ತಕ್ಷಣ ಚೆಟ್ಟಿನಾಡು ಚಿಕನ್ ಕರಿ ಮಾಡಿ ಬಡಿಸಿದರೆ ಅವರು ಸಹ ಖುಷಿ ಪಡೋದು ಖಂಡಿತ.