ಮಳೆಗಾಲದಲ್ಲಿಯೂ ಉಷ್ಣ ಆಗಿದ್ಯಾ? ಮಾಡ್ಕೊಳ್ಳಿ ಜೋಳದ ಅಂಬಲಿ! ಒಂದೇ ದಿನ ಕೂಲ್ ಕೂಲ್ ಆಗ್ತೀರಿ!
ಉಷ್ಣತೆಯನ್ನು ತಣಿಸಲು ಉತ್ತರ ಕರ್ನಾಟಕ ಶೈಲಿಯ ಜೋಳದ ಅಂಬಲಿ ಪರಿಣಾಮಕಾರಿ. ಸುಲಭವಾಗಿ ತಯಾರಿಸಬಹುದಾದ ಈ ಅಂಬಲಿ, ದಿನವಿಡೀ ತಂಪು ನೀಡುತ್ತದೆ.

ಕೆಲವರಿಗೆ ಮಳೆಗಾಲದಲ್ಲಿಯೂ ಉಷ್ಣ ಆಗಿರುತ್ತದೆ. ಹೆಚ್ಚೆಚ್ಚು ನೀರು ಕುಡಿದರೂ ಉಷ್ಣ ಮಾತ್ರ ಕಡಿಮೆಯಾಗಲ್ಲ. ಉತ್ತರ ಕರ್ನಾಟಕ ಶೈಲಿಯ ಜೋಳದ ಅಂಬಲಿ ಮಾಡಿಕೊಂಡು ಕುಡಿದ್ರೆ ಒಂದೇ ದಿನದಲ್ಲಿ ಉಷ್ಣ ಕಡಿಮೆಯಾಗುತ್ತದೆ.
ಕೆಲವೇ ಪದಾರ್ಥ ಬಳಸಿ 10 ರಿಂದ 15 ನಿಮಿಷದಲ್ಲಿ ಈ ಜೋಳದ ಅಂಬಲಿ ತಯಾರಿಸಬಹುದು. ಬೆಳಗ್ಗೆ ಮಾಡಿಕೊಂಡು ಬಾಟೆಲ್‌ನಲ್ಲಿ ತುಂಬಿಟ್ಟುಕೊಳ್ಳಬಹುದು. ಬಾಯಾರಿಕೆ ಆದಾಗೆಲ್ಲಾ ಇದನ್ನ ಕುಡಿದ್ರೆ ಉಷ್ಣ ಕಡಿಮೆಯಾಗುತ್ತದೆ. ಈ ಜೋಳದ ಅಂಬಲಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ
ಬೇಕಾಗುವ ಸಾಮಾಗ್ರಿಗಳು!
ಜೋಳದ ಹಿಟ್ಟು: 2 ಟೀ ಸ್ಪೂನ್, ಬೆಳ್ಳುಳ್ಳಿ: 8 ರಿಂದ 10 ಎಸಳು, ಜೀರಿಗೆ: 1/2 ಟೀ ಸ್ಪೂನ್, ಮಜ್ಜಿಗೆ: 1 ಗ್ಲಾಸ್, ಎಣ್ಣೆ: 1/2 ಟೀ ಸ್ಪೂನ್, ನೀರು: 3 ಗ್ಲಾಸ್ ಮತ್ತು ಉಪ್ಪು ರುಚಿಗೆ ತಕ್ಕಷ್ಟು.
ಜೋಳದ ಅಂಬಲಿ ಮಾಡುವ ವಿಧಾನ
ಮೊದಲಿಗೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿಕೊಂಡು ತರಿತರಿಯಾಗಿ ಜಜ್ಜಿಕೊಂಡು ಎತ್ತಿಟ್ಟುಕೊಳ್ಳಿ. ಈಗ ಒಲೆ ಆನ್ ಮಾಡ್ಕೊಂಡು ದೊಡ್ಡ ಪಾತ್ರೆಯನ್ನು ಇರಿಸಿಕೊಂಡು ಅಡುಗೆಎಣ್ಣೆ ಹಾಕಿಕೊಳ್ಳಿ. ನಂತರ ಇದಕ್ಕೆ ಜಜ್ಜಿಕೊಂಡಿರುವ ಬೆಳ್ಳುಳ್ಳಿ ಮತ್ತು ಜೀರಿಗೆ ಸೇರಿಸಿಕೊಳ್ಳಿ.
ಈಗ ಇದಕ್ಕೆ ಎರಡು ಗ್ಲಾಸ್ ನೀರು ಹಾಕಿಕೊಳ್ಳಬೇಕು. ಮತ್ತೊಂದು ಗ್ಲಾಸ್ ನಲ್ಲಿ ನೀರು ತೆಗೆದುಕೊಂಡು ಇದಕ್ಕೆ ಎರಡು ಟೀ ಸ್ಪೂನ್‌ನಷ್ಟು ಜೋಳದ ಹಿಟ್ಟು ಸೇರಿಸಿ ಗಂಟು ಆಗದಂತೆ ಚೆನ್ನಾಗಿ ಕಲಿಸಿಕೊಳ್ಳಬೇಕು. ನಂತರ ಈ ಜೋಳದ ಮಿಶ್ರಣವುಳ್ಳ ನೀರನ್ನು ಕುದಿಯುತ್ತಿರುವ ನೀರಿಗೆ ಸೇರಿಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಕುದಿಸಿಕೊಳ್ಳಬೇಕು.
ಬೆಳ್ಳುಳ್ಳಿ ಪರಿಮಳ ಬರೋವರೆಗೂ ಕುದಿಸಿಕೊಳ್ಳಬೇಕು. ನಂತರ ಒಲೆ ಆಪ್ ಮಾಡಿ ತಣ್ಣಗಾಗಲು ಬಿಡಿ. ನಂತರ ಇದಕ್ಕೆ ಮಜ್ಜಿಗೆ ಸೇರಿಸಿಕೊಳ್ಳಿ. ಜೋಳದ ಅಂಬಲಿಯೊಂದಿಗೆ ಮಜ್ಜಿಗೆ ಸೇರಿಸೋದರಿಂದ ರುಚಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಬೇಕಿದ್ರೆ ಉಪ್ಪು ಸೇರಿಸಿಕೊಳ್ಳಬಹುದು.