ಗಂಟೆಗಟ್ಟಲೇ ಕಾಯೋ ಬದಲು ಜಸ್ಟ್ 10-15 ನಿಮಿಷಗಳಲ್ಲಿ ಮಾಡ್ಕೊಳ್ಳಿ ಅವಲಕ್ಕಿ-ರವೆ ದೋಸೆ
ದೋಸೆ ಮಾಡಲು ಗಂಟೆಗಟ್ಟಲೆ ಕಾಯುವ ಬದಲು, ಕೇವಲ 10-15 ನಿಮಿಷಗಳಲ್ಲಿ ದೋಸೆ ಹಿಟ್ಟು ತಯಾರಿಸಬಹುದು. ರವೆ, ಅವಲಕ್ಕಿ ಮತ್ತು ಮೊಸರನ್ನು ಬಳಸಿ ಮಾಡುವ ಈ ದಿಢೀರ್ ದೋಸೆಯು ಮೃದುವಾಗಿದ್ದು, ಬೆಳಗಿನ ತಿಂಡಿಗೆ ಉತ್ತಮ ಆಯ್ಕೆಯಾಗಿದೆ.

ರುಚಿಯಾದ ದೋಸೆ
ದೋಸೆ ಬೇಕು ಅಂದ್ರೆ ಒಂದು ದಿನ ಮುಂಚಿತವಾಗಿ ಸಿದ್ಧತೆ ಆರಂಭಿಸಬೇಕು. ಅಕ್ಕಿ ಮತ್ತು ಉದ್ದಿನಬೇಳೆಯನ್ನು ಕನಿಷ್ಠ 7-8 ಗಂಟೆ ನೆನೆಸಿಟ್ಟುಕೊಂಡು ರುಬ್ಬಿಕೊಳ್ಳಬೇಕು. ನಂತರ ಈ ಹಿಟ್ಟನ್ನು ಮತ್ತೆ ಕನಿಷ್ಠವಾದ್ರೂ 6 ಗಂಟೆ ನೆನೆಸಬೇಕು. ಸಮಯಕ್ಕೆ ಸರಿಯಾಗಿ ಹಿಟ್ಟು ಹುದುಗಿದ್ರೆ ದೋಸೆ ಕಾವಲಿಯಿಂದ ಮೇಲೆ ಬರುತ್ತೆ. ಇಲ್ಲವಾದ್ರೆ ಕಾವಲಿಯಿಂದ ಬರೋದೇ ಇಲ್ಲ.
ಅವಲಕ್ಕಿ-ರವೆ ದೋಸೆ
ಇಂದು ನಾವು ನಿಮಗೆ ಕಡಿಮೆ ಸಮಯದಲ್ಲಿ ದೋಸೆ ಮಾಡೋದು ಹೇಗೆ ಎಂದು ಹೇಳುತ್ತಿದ್ದೇವೆ. 10 ರಿಂದ 15 ನಿಮಿಷಗಳಲ್ಲಿ ದೋಸೆ ಹಿಟ್ಟು ಸಿದ್ಧವಾಗುತ್ತದೆ. ನಂತರ ನಿಮಗೆ ಬೇಕಾದ ರೀತಿಯಲ್ಲಿ ದೋಸೆಯನ್ನು ಹಾಕಿಕೊಳ್ಳಬಹುದು. ಈ ದಿಢೀರ್ ದೋಸೆ ಮಾಡೋದು ಹೇಗೆ ಮತ್ತು ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಏನು ಎಂದು ನೋಡೋಣ ಬನ್ನಿ.
ಬೇಕಾಗುವ ಸಾಮಾಗ್ರಿಗಳು
ರವೆ: 200 ಗ್ರಾಂ, ಅವಲಕ್ಕಿ: 100 ಗ್ರಾಂ, ಮೊಸರು: 200 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ (ಬೇಕಿದ್ರೆ ಚಿಟಿಕೆಯಷ್ಟು ಅಡುಗೆ ಸೋಡಾ ಅಥವಾ ಇನೋ), ಮಕ್ಕಳಿಗಾಗಿ ದೋಸೆ ಮಾಡುತ್ತಿದ್ರೆ ಸಣ್ಣದಾಗಿ ಕತ್ತರಿಸಿದ ತರಕಾರಿಗಳನ್ನು (ಕ್ಯಾರಟ್, ಕೋತಂಬರಿ, ಕರೀಬೇವು, ಹಸಿಮೆಣಸಿನಕಾಯಿ) ಸೇರಿಸಿಕೊಳ್ಳಬಹುದು.
ದೋಸೆ ಮಾಡುವ ವಿಧಾನ
ಮೊದಲಿಗೆ ಅವಲಕ್ಕಿಯನ್ನು ಎರಡು ನೀರಿನಲ್ಲಿ ತೊಳೆದುಕೊಂಡು ಎತ್ತಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ರವೆ, ನೆನೆಸಿದ ಅವಲಕ್ಕಿ ಮತ್ತು ಮೊಸರು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈ ವೇಳೆ ಬೇಕಿದ್ರೆ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು. ರುಬ್ಬಿದ ನಂತ್ರ ಹಿಟ್ಟು ನೆನೆಯಲು 10 ರಿಂದ 15 ನಿಮಿಷ ಬಿಡಬೇಕು.
ತೆಂಗಿನಕಾಯಿ, ಟೊಮೆಟೋ ಚಟ್ನಿ ಈ ದೋಸೆಗೆ ಒಳ್ಳೆಯ ಕಾಂಬಿನೇಷನ್
ಈಗ ಒಲೆ ಆನ್ ಮಾಡ್ಕೊಂಡು ಕಾವಲಿ ಇಟ್ಕೊಳ್ಳಿ. ಈಗ ರುಬ್ಬಿಕೊಂಡಿರುವ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಕಿದ್ರೆ ಚಿಟಿಕೆಯಷ್ಟು ಅಡುಗೆಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕಾವಲಿ ಮೇಲೆ ಹಿಟ್ಟು ಹಾಕಿ ಎರಡೂ ಬದಿಯಲ್ಲಿ ಹದವಾಗಿ ಬೇಯಿಸಿಕೊಂಡ್ರೆ ಮೃದುವಾದ ದೋಸೆ ಸವಿಯಲು ಸಿದ್ಧವಾಗುತ್ತದೆ. ತೆಂಗಿನಕಾಯಿ, ಟೊಮೆಟೋ ಚಟ್ನಿ ಈ ದೋಸೆಗೆ ಒಳ್ಳೆಯ ಕಾಂಬಿನೇಷನ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

