Indian Railways: ರೈಲಿನಲ್ಲಿ ಈಗ ಉಚಿತ ಆಹಾರವೂ ಲಭ್ಯ, ಕಂಡೀಷನ್ಸ್ ಅಪ್ಲೈ
ಭಾರತೀಯರಲ್ಲಿ ಬಹುತೇಕರು ರೈಲಿನಲ್ಲಿ ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಇತರ ಸಾರಿಗೆ ವಿಧಾನಕ್ಕೆ ಹೋಲಿಸಿದರೆ ಟಿಕೆಟ್ ದರ ಕಡಿಮೆ ಮತ್ತು ಆರಾಮದಾಯಕ ಪ್ರಯಾಣ ಅನ್ನೋ ಕಾರಣಕ್ಕೆ ರೈಲು ಪ್ರಯಾಣವನ್ನು ಆಯ್ದುಕೊಳ್ಳುತ್ತಾರೆ. ಸದ್ಯ ಹೊಸ ನಿಯಮದ ಪ್ರಕಾರ ರೈಲಿನಲ್ಲಿ ಪ್ರಯಾಣಿಸುವಾಗ ಊಟಕ್ಕೆ ಹಣ ನೀಡಬೇಕಿಲ್ಲ. ಆದರೆ ಆ ಸೌಲಭ್ಯವನ್ನು ಪಡೆಯಲು ಕೆಲವು ನಿಯಮಗಳಿವೆ. ಅದೇನೆಂದು ತಿಳಿಯೋಣ.
ರೈಲಿನಲ್ಲಿ ಪ್ರಯಾಣಿಸುವುದು ಹಲವರ ಪಾಲಿಗೆ ತುಂಬಾ ಆರಾಮದಾಯಕ. ಹೀಗಾಗಿ ಹತ್ತಿರದ ಸ್ಥಳವೇ ಇರಲಿ, ದೂರದ ಪ್ರಯಾಣವೇ ಆಗಿರಲಿ ಟ್ರೈನ್ ಟ್ರಾವೆಲ್‌ನ್ನು ಇಷ್ಟಪಡುತ್ತಾರೆ. ಅದರಲ್ಲೂ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಪ್ರಯಾಣಿಸಲು ಟ್ರೈನ್ ತುಂಬಾ ಆರಾಮದಾಯಕವಾಗಿರುತ್ತದೆ. ಆದರೆ ಕೆಲವೊಮ್ಮೆ ಟ್ರೈನ್ ತಡವಾಗಿ ಬರುವುದರಿಂದ ಸಮಸ್ಯೆಯಾಗುತ್ತದೆ.
ಇಂಡಿಯನ್ ರೈಲ್ವೇ ತಡವಾಗಿ ಬರುವುದು ಹೊಸ ವಿಷಯವೇನಲ್ಲ. ನಿಗದಿತ ಸಮಯಕ್ಕೆ ಬರಬೇಕಾದ ರೈಲು ಅದೆಷ್ಟೋ ಕಾರಣಗಳಿಂದ ತಡವಾಗಿ ಬರುತ್ತದೆ. ಅತಿಯಾದ ಮಂಜಿನಿಂದ ಹಿಡಿದು ರೈಲು ಹಳಿಗಳ ಮೇಲಿನ ಕಾರ್ಯಾಚರಣೆಯ ಕೆಲಸಗಳವರೆಗೆ ಯಾವುದೇ ಕಾರಣದಿಂದ ರೈಲು ವಿಳಂಬಗಳು ಸಂಭವಿಸಬಹುದು. ಹೀಗೆ ರೈಲು ತಡವಾಗಿ ಬರುವುದರಿಂದ ಪ್ರಯಾಣಿಕರಿಗೆ ಹಲವು ರೀತಿಯಲ್ಲಿ ತೊಂದರೆಯಾಗುತ್ತದೆ.
ಊಟ, ನಿದ್ದೆಯ ಸಮಯದಲ್ಲಿ ಬದಲಾವಣೆಯಾಗುತ್ತೆ. ರೈಲು ತಡವಾಗಿ ಬರುವುದರಿಂದ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ಮನಗಂಡು ಇಂಡಿಯನ್ ರೈಲ್ವೇ ಹೊಸ ಸೌಲಭ್ಯವನ್ನು ಒದಗಿಸುತ್ತಿದೆ.
ಸದ್ಯ ರೈಲಿನಲ್ಲಿ ಪ್ರಯಾಣಿಸುವ ಕೋಟ್ಯಂತರ ಪ್ರಯಾಣಿಕರಿಗೆ ಸಂತಸದ ಸುದ್ದಿ ಸಿಕ್ಕಿದೆ. ನೀವೂ ಸಹ ಪದೇ ಪದೇ ರೈಲು ಪ್ರಯಾಣಿಸುವವರಾಗಿದ್ದರೆ, ಈ ಮಾಹಿತಿಯು ನಿಮಗೆ ಸಹ ಪ್ರಯೋಜನಕಾರಿಯಾಗಲಿದೆ. ಯಾಕಂದ್ರೆ, ಈಗ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲಿದೆ.
ಹೊಸ ನಿಯಮದ ಪ್ರಕಾರ ರೈಲು ತಡವಾಗಿ ಬಂದರೆ ಪ್ರಯಾಣಿಕರು ಊಟಕ್ಕೆ ಹಣ ನೀಡಬೇಕಿಲ್ಲ. ರೈಲ್ವೆಯು ಪ್ರಯಾಣಿಕರಿಗೆ ಉಚಿತ ಊಟವನ್ನು ಒದಗಿಸುವ ಅವಕಾಶವನ್ನು ಹೊಂದಿದೆ. ರಾಜಧಾನಿ ಎಕ್ಸ್‌ಪ್ರೆಸ್, ದುರಂತೋ ಎಕ್ಸ್‌ಪ್ರೆಸ್ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ಗಳಂತಹ ಎಕ್ಸ್‌ಪ್ರೆಸ್ ರೈಲುಗಳು ರೈಲು ಎರಡು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಪ್ರಯಾಣಿಕರಿಗೆ ಉಚಿತ ಊಟವನ್ನು ಒದಗಿಸುವ ಅವಕಾಶವಿದೆ.
IRCTC ನಿಯಮ ಏನು ಗೊತ್ತಾ?
IRCTC ನಿಯಮಗಳ ಪ್ರಕಾರ, ನಿಮ್ಮ ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದಾಗ ಊಟವನ್ನ ಒದಗಿಸಲಾಗುತ್ತದೆ. ಇಲ್ಲವಾದಲ್ಲಿ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗುವುದು. ಶತಾಬ್ದಿ, ರಾಜಧಾನಿ, ದುರಂತೋ ಮುಂತಾದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಈ ಮಾಹಿತಿಯು ತುಂಬಾ ಉಪಯುಕ್ತವಾಗಿದೆ.
ಇದಲ್ಲದೆ, ಪ್ರಯಾಣಿಕರು ಪ್ರಯಾಣಿಸುವ ದಿನದ ಸಮಯವನ್ನು ಅವಲಂಬಿಸಿ ಊಟವನ್ನು (ಉಪಹಾರ, ಮಧ್ಯಾಹ್ನದ ಊಟ, ಸಂಜೆ ಲಘು ಅಥವಾ ರಾತ್ರಿಯ ಊಟ) ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕೂಡ
ರೈಲ್ವೆ ಮಾಹಿತಿ ಪ್ರಕಾರ, ಆನ್‌ಲೈನ್ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸುವವರಿಗೂ ಈ ಸೌಲಭ್ಯವನ್ನ ಒದಗಿಸಲಾಗಿದೆ. ಇನ್ನು ಯಾವುದೇ ಕಾರಣಕ್ಕಾಗಿ ನೀವು ರೈಲು ತಪ್ಪಿಸಿಕೊಂಡರೆ, ಹಣವನ್ನು ಮರುಪಾವತಿ ಪಡೆಯಬಹುದು. ಇದಕ್ಕಾಗಿ ರೈಲು ನಿಲ್ದಾಣದಿಂದ ಹೊರಟ 1 ಗಂಟೆಯೊಳಗೆ ಟಿಡಿಆರ್ ಫಾರ್ಮ್ ಭರ್ತಿ ಮಾಡಿ ಟಿಕೆಟ್ ಕೌಂಟರ್ನಲ್ಲಿ ಸಲ್ಲಿಸಬೇಕಾಗುತ್ತದೆ.