ಚಟ್ನಿ ಮಾಡುವ ಮುನ್ನ ಇಷ್ಟು ಮಾಡಿ.. ಹಳಸುವುದಿಲ್ಲ, ರುಚಿಯಂತೂ ಬೇರೆ ಲೆವೆಲ್!
Perfect coconut chutney recipe: ದಕ್ಷಿಣ ಭಾರತೀಯರ ಮನೆಗಳಲ್ಲಿ ಇಡ್ಲಿ, ದೋಸೆ ಅಥವಾ ವಡೆಯ ರುಚಿಯನ್ನು ಇಮ್ಮಡಿಗೊಳಿಸುವುದು ಈ ಪರ್‌ಫೆಕ್ಟ್ ಕೊಬ್ಬರಿ ಚಟ್ನಿ. ಆದರೆ ಹೋಟೆಲ್‌ನಲ್ಲಿ ಸಿಗುವಂತಹ ಅದೇ ರುಚಿ, ಬಣ್ಣ ಮತ್ತು ಹದ ಮನೆಯಲ್ಲಿ ಬರಬೇಕೆಂದರೆ ಕೆಲವು ಸಣ್ಣ ರಹಸ್ಯಗಳನ್ನು ತಿಳಿದಿರಬೇಕು.

ಕೆಲವು ಕೌಶಲಗಳು ಅಗತ್ಯ
ದಕ್ಷಿಣ ಭಾರತೀಯರ ಉಪಾಹಾರದಲ್ಲಿ ವಿಶೇಷವಾಗಿ ಚಟ್ನಿ ಅದರಲ್ಲೂ ಕೊಬ್ಬರಿ ಚಟ್ನಿ ಇಲ್ಲದಿದ್ದರೆ ತುತ್ತು ಗಂಟಲಿಗಿಳಿಯದು. ಇಡ್ಲಿ, ದೋಸೆ, ವಡೆ.. ಹೀಗೆ ಯಾವುದಕ್ಕಾದರೂ ಈ ಚಟ್ನಿ ನೀಡುವ ರುಚಿಯೇ ಬೇರೆ. ಆದರೆ ಕೊಬ್ಬರಿ ಚಟ್ನಿ ಮಾಡುವುದು ನೋಡಲು ಸುಲಭವೆಂದು ಅನಿಸಿದರೂ, ಅದರ ರುಚಿ, ಬಣ್ಣ ಮತ್ತು ಘಮ ಸರಿಯಾಗಿ ಬರಲು ಕೆಲವು ಕೌಶಲಗಳು ಅಗತ್ಯ. ಕೊಬ್ಬರಿಯ ತಾಜಾತನದಿಂದ ಹಿಡಿದು ಹಸಿಮೆಣಸಿನಕಾಯಿಯ ಖಾರದವರೆಗೆ, ಒಗ್ಗರಣೆಯಲ್ಲಿ ಹಾಕುವ ಕರಿಬೇವಿನ ಚಿಟಪಟ ಸದ್ದಿನವರೆಗೆ ಪ್ರತಿಯೊಂದೂ ಒಂದು ಕಲೆ!
ಪರ್ಫೆಕ್ಟ್ ಚಟ್ನಿಯ ರಹಸ್ಯ
ಕೊಬ್ಬರಿ ಚಟ್ನಿ ಕೇವಲ ಒಂದು ರುಚಿ ಮಾತ್ರವಲ್ಲ, ಅದೊಂದು ಅನುಭೂತಿ. ಇದನ್ನು ತಯಾರಿಸುವಾಗ ಈ ಕೆಳಗಿನ ವಿಷಯಗಳನ್ನು ನೆನಪಿಟ್ಟುಕೊಂಡರೆ ನಿಮ್ಮ ಚಟ್ನಿಗೆ ಎಲ್ಲರೂ ಫಿದಾ ಆಗಲೇಬೇಕು. ಹಾಗಾದರೆ ಸಾಂಬಾರ್ ಜೊತೆ ಪೈಪೋಟಿ ನೀಡುವಂತೆ, ಬಿಸಿ ಬಿಸಿ ಇಡ್ಲಿಗಳನ್ನು ಕೈಯಾರೆ ಕಲಸಿ ತಿನ್ನುವಂತೆ ಮಾಡುವ ಆ ಪರ್ಫೆಕ್ಟ್ ಕೊಬ್ಬರಿ ಚಟ್ನಿಯ ರಹಸ್ಯಗಳನ್ನು ಈಗ ತಿಳಿದುಕೊಳ್ಳೋಣ.
ಕೊಬ್ಬರಿ ಆಯ್ಕೆ ಮತ್ತು ಅನುಪಾತ
ಚಟ್ನಿಗೆ ಬಳಸುವ ಕೊಬ್ಬರಿ ಅತಿಯಾಗಿ ಬಲಿತಿರಬಾರದು. ಕೊಬ್ಬರಿ ಹಾಲು ಸಮೃದ್ಧವಾಗಿರುವ ಎಳಸು ಕೊಬ್ಬರಿ ಬಳಸಿದರೆ ರುಚಿ ಅದ್ಭುತವಾಗಿರುತ್ತದೆ. ಮುಖ್ಯವಾಗಿ ಕಡಲೆಕಾಯಿ ಬೀಜ (ಶೇಂಗಾ) ಮತ್ತು ಕೊಬ್ಬರಿಯ ಅನುಪಾತ 1:1 ಇರಬೇಕು. ಈ ಅನುಪಾತ ಬದಲಾದರೆ ಚಟ್ನಿಯ ರುಚಿ ಸಂಪೂರ್ಣವಾಗಿ ಬದಲಾಗುತ್ತದೆ. ಹಾಗೆಯೇ, ತಿನ್ನುವ ಐದು ನಿಮಿಷಗಳ ಮೊದಲು ಚಟ್ನಿ ರುಬ್ಬಿಕೊಳ್ಳುವುದು ಉತ್ತಮ. ಏಕೆಂದರೆ ಇದು ಬೇಗನೆ ಹಾಳಾಗುವ ಸಾಧ್ಯತೆಯಿರುತ್ತದೆ.
ರುಬ್ಬುವ ವಿಧಾನ ಮತ್ತು ಹದ
ಚಟ್ನಿಯನ್ನು ಅತಿಯಾಗಿ ನುಣ್ಣಗಿನ ಪೇಸ್ಟ್‌ನಂತೆ ಮಾಡದೆ, ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇದರಿಂದ ತಿನ್ನುವಾಗ ಕೊಬ್ಬರಿಯ ಅಂಶಗಳು ಬಾಯಿಗೆ ಸಿಗುತ್ತಾ ರುಚಿ ನೀಡುತ್ತವೆ. ಕಲ್ಲುಪ್ಪು ಬಳಸುವುದರಿಂದ ಚಟ್ನಿಗೆ ನೈಸರ್ಗಿಕವಾದ ರುಚಿ ಬರುತ್ತದೆ. ಚಟ್ನಿ ಅತಿಯಾಗಿ ಗಟ್ಟಿಯಾಗಿಯೂ ಇರಬಾರದು, ಅತ್ತ ಅತಿಯಾಗಿ ನೀರಾಗಿಯೂ ಇರದೆ ಸರಿಯಾದ ಹದದಲ್ಲಿರಬೇಕು.
ಒಗ್ಗರಣೆ ಚಟ್ನಿಯ ಪ್ರಾಣ!
ಕಬ್ಬಿಣದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ತಾಜಾ ಕರಿಬೇವು ಹಾಕಬೇಕು. ಒಗ್ಗರಣೆ ಸೀದು ಹೋಗದಂತೆ ಜಾಗ್ರತೆ ವಹಿಸಬೇಕು. ಒಗ್ಗರಣೆ ಹಾಕಿದ ತಕ್ಷಣ ಚಟ್ನಿಯಲ್ಲಿ ಕಲಸದೆ, ತಿನ್ನುವ ಸಮಯದಲ್ಲಿ ಕಲಸಿದರೆ ಆ ಸುಗಂಧ ಹಾಗೆಯೇ ಇರುತ್ತದೆ. ಚಟ್ನಿಯಲ್ಲಿ ಶುಂಠಿ, ಬೆಳ್ಳುಳ್ಳಿ ಅಥವಾ ಪುದೀನಾ ಸೇರಿಸುವುದು ನಿಮ್ಮ ವೈಯಕ್ತಿಕ ಅಭಿರುಚಿಗೆ ಬಿಟ್ಟದ್ದು.
ವಿಶೇಷ ಟಿಪ್ಸ್ ಮತ್ತು ಕಾಂಬಿನೇಶನ್
ಕೊಬ್ಬರಿ ಸ್ವಲ್ಪ ಹಾಳಾಗಿದ್ದಾಗ ಆ ಭಾಗವನ್ನು ತೆಗೆದುಹಾಕಿ, ಹುರಿದು ಬಳಸುವುದು ಒಂದು ಪದ್ಧತಿಯಾದರೆ, ಕ್ಯಾರೆಟ್ ತುರಿಯನ್ನು ಫ್ರೈ ಮಾಡಿ ಕಲಸಿದರೆ ಅದು ‘ಹಾಲಿವುಡ್ ಚಟ್ನಿ’ಯಂತೆ ಬಣ್ಣ ಬದಲಿಸುತ್ತದೆ. ಚಟ್ನಿ ಮತ್ತು ಸಾಂಬಾರ್ ಪ್ಲೇಟ್‌ನಲ್ಲಿ ಗಂಗಾ-ಯಮುನಾ ಸಂಗಮದಂತೆ ಬೆರೆಯುವುದು ಒಂದು ಪ್ರತ್ಯೇಕ ಅನುಭೂತಿ. ಉಳಿದ ಚಟ್ನಿಯನ್ನು ಮೊಸರನ್ನದ ಜೊತೆ ಕಲಸಿ ತಿಂದರೂ ಕೂಡ ಬಹಳ ಚೆನ್ನಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
