ಫ್ರಿಡ್ಜ್‌ನಲ್ಲಿ ಬಹಳ ಕಾಲ ಹಣ್ಣು, ತರಕಾರಿ ತಾಜಾ ಆಗಿರಿಸುವುದು ಹೇಗೆ?
ಅನೇಕರು ಫ್ರಿಡ್ಜ್‌ನಲ್ಲಿ ಹಣ್ಣು ತರಕಾರಿ ಮಾತ್ರವಲ್ಲದೇ ಏನೋ ಸಾಧ್ಯವೋ ಅದೆಲ್ಲವನ್ನೂ ತುಂಬಿಡುತ್ತಾರೆ. ಆದ್ರೆ ಫ್ರಿಡ್ಜ್‌ನಲ್ಲಿ ತುಂಬಿಟ್ಟ ಈ ಹಣ್ಣು ತರಕಾರಿಗಳು ಸುಧೀರ್ಘ ಕಾಲ ತಾಜಾ ಆಗಿರುವಂತೆ ಇಡುವುದು ಹೇಗೆ ಇಲ್ಲಿದೆ ಮಾಹಿತಿ.
ಏರುತ್ತಿರುವ ತಾಪಮಾನದಿಂದಾಗಿ ಈಗ ಫ್ರಿಡ್ಜ್ ಕೂಡ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದೆ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಇದ್ದೇ ಇರುತ್ತೆ. ಫ್ರಿಡ್ಜ್‌ನಲ್ಲಿ ಕೆಲವರು ಹಣ್ಣು-ತರಕಾರಿಗಳ ಜೊತೆಗೆ ಉಳಿದ ಅನ್ನ, ಸಾರು, ಚಪಾತಿಗಳನ್ನೂ ಕೂಡ ಇಡ್ತಾರೆ. ಆದರೆ ಕೆಲವರಿಗೆ ಫ್ರಿಡ್ಜ್‌ನಲ್ಲಿ ಯಾವ ವಸ್ತುಗಳನ್ನು ಹೇಗೆ ಇಡಬೇಕು ಎಂದು ಗೊತ್ತಿರಲ್ಲ. ಇದರಿಂದಲೇ ಫ್ರಿಡ್ಜ್‌ನಲ್ಲಿರುವ ಹಣ್ಣು-ತರಕಾರಿ ಬೇಗ ಹಾಳಾಗುತ್ತದೆ. ಹಾಗಾಗಿ ಎಲ್ಲಿ, ಹೇಗೆ ಇಟ್ಟರೆ ಫ್ರಿಡ್ಜ್‌ನಲ್ಲಿರು ಹಣ್ಣು-ತರಕಾರಿ ಹೆಚ್ಚು ದಿನ ಉಳಿಯುತ್ತೆ ಅಂತ ಈಗ ತಿಳಿದುಕೊಳ್ಳೋಣ ಬನ್ನಿ.
ಫ್ರಿಡ್ಜ್‌ನಲ್ಲಿ ವಸ್ತುಗಳನ್ನು ಇಡುವ ಮುನ್ನ ಕಾಲಕ್ಕೆ ತಕ್ಕಂತೆ ಜಾಗ್ರತೆ ವಹಿಸಬೇಕು. ಫ್ರೀಜರ್‌ನಲ್ಲಿ ಐಸ್ ಹೆಚ್ಚಾಗಿ ರೂಪುಗೊಂಡ್ರೆ ಫ್ರಿಡ್ಜ್ ಮಧ್ಯದಲ್ಲಿರುವ ಬಟನ್ ಒತ್ತಿ. ಹೀಗೆ ಮಾಡಿದ್ರೆ ಮಂಜುಗಡ್ಡೆ ರೂಪುಗೊಳ್ಳಲ್ಲ ಫ್ರೀಜರ್ ಬಾಗಿಲು ಕೂಡ ಮುರಿಯಲ್ಲ. ಹಣ್ಣು-ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವಾಗ ಪ್ಲಾಸ್ಟಿಕ್ ಚೀಲಗಳನ್ನು ಉಪಯೋಗಿಸಬೇಡಿ. ಯಾಕಂದ್ರೆ ಇವುಗಳಲ್ಲಿಟ್ಟರೆ ಹಣ್ಣು-ತರಕಾರಿ ಬೇಗ ಹಾಳಾಗುತ್ತೆ. ಪ್ಲಾಸ್ಟಿಕ್ ಚೀಲಗಳ ಬದಲು ಹತ್ತಿ ಚೀಲ ಅಥವಾ ಮೃದುವಾದ ಹತ್ತಿ ಬಟ್ಟೆಯಲ್ಲಿ ಹಣ್ಣು-ತರಕಾರಿಗಳನ್ನು ಬೇರೆ ಬೇರೆಯಾಗಿ ಇಟ್ಟು ಸಂಗ್ರಹಿಸಿ. ಹತ್ತಿ ತೇವಾಂಶವನ್ನು ಹೀರಿಕೊಳ್ಳುತ್ತೆ. ಹೀಗಾಗಿ ಅವು ಹಲವು ದಿನಗಳವರೆಗೆ ಹಾಳಾಗದೆ ಉಳಿಯುತ್ತವೆ.
ಕೊತ್ತಂಬರಿ, ಹಸಿಮೆಣಸಿನಕಾಯಿ, ಕರಿಬೇವು ಹೆಚ್ಚು ದಿನ ಉಳಿಯಬೇಕಂದ್ರೆ ಅವುಗಳ ಕಾಂಡಗಳನ್ನು ತೆಗೆದು ಹತ್ತಿ ಚೀಲದಲ್ಲಿಡಿ. ಅವು ಹೆಚ್ಚು ಕಾಲ ತಾಜಾವಾಗಿರುತ್ತವೆ. ಅವುಗಳ ಘಮ ಕೂಡ ಹೋಗುವುದಿಲ್ಲ. ಶುಂಠಿಯಲ್ಲಿ ಮಣ್ಣಿರುತ್ತೆ, ಅದನ್ನು ನೀರಿನಿಂದ ಚೆನ್ನಾಗಿ ತೊಳೆದು ತೆರೆದಿಡಿ. ಮುಚ್ಚಿಟ್ಟರೆ ಅದರ ಮೇಲೆ ಶಿಲೀಂಧ್ರ ಬೆಳೆಯುತ್ತೆ. ತೆಂಗಿನಕಾಯಿಯನ್ನು ಫ್ರಿಡ್ಜ್‌ನಲ್ಲಿ ಹಾಗೆಯೇ ಇಟ್ಟರೆ ಹಾಳಾಗುತ್ತೆ. ಹಾಗಾಗಿ ತೆಂಗಿನಕಾಯಿ ತುರಿದು ಒಂದು ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿ. ಅಡುಗೆ ಮಾಡುವಾಗ ತುರ್ತು ಸಮಯದಲ್ಲೂ ಇದನ್ನು ಉಪಯೋಗಿಸಬಹುದು. ಚೀಸ್, ಬೆಣ್ಣೆ ಮುಂತಾದ ಹಾಲಿನ ಉತ್ಪನ್ನಗಳನ್ನು ಹಾಗೆಯೇ ಫ್ರಿಡ್ಜ್‌ನಲ್ಲಿಡಬಾರದು. ಇವುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಒಂದು ಡಬ್ಬದಲ್ಲಿಡಿ.
ಇಡ್ಲಿ, ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿಡುವಾಗ ಮುಚ್ಚಳವಿಲ್ಲದೆ ಇಡಬೇಡಿ. ಅದಕ್ಕೆ ಸಂಬಂಧಿಸಿದ ಡಬ್ಬದಲ್ಲಿ ಹಾಕಿ ಚೆನ್ನಾಗಿ ಮುಚ್ಚಳ ಮುಚ್ಚಿ. ಫ್ರಿಡ್ಜ್‌ನಲ್ಲಿ ಉಳಿದ ಆಹಾರವನ್ನು ಇಡುವಾಗ ಮುಚ್ಚಳ ಮುಚ್ಚಿಡುವುದನ್ನು ರೂಢಿಸಿಕೊಳ್ಳಿ. ಮರುದಿನವೇ ಅದನ್ನು ಉಪಯೋಗಿಸುವಂತೆ ಮಾಡಿ.
ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುವಾಗ ಮುಚ್ಚಿಟ್ಟರೆ ಬೇಗ ಹಾಳಾಗುತ್ತವೆ. ಹಾಗಾಗಿ ಗಾಳಿ ಆಡುವಂತೆ ಇಡಿ. ಅಥವಾ ರಂಧ್ರಗಳಿರುವ ಡಬ್ಬದಲ್ಲಿಯೂ ಹಾಕಬಹುದು. ಮಲ್ಲಿಗೆ ಮುಂತಾದ ಯಾವುದೇ ಹೂವುಗಳನ್ನು ಫ್ರಿಡ್ಜ್‌ನಲ್ಲಿಡುವಾಗ ಹಾಗೆಯೇ ಇಡಬಾರದು. ಇವುಗಳನ್ನು ಒಂದು ಕವರ್‌ನಲ್ಲಿ ಅಥವಾ ಗಾಳಿ ಹೊರಗೆ ಹೋಗದ ಡಬ್ಬದಲ್ಲಿಡಿ. ಇಲ್ಲದಿದ್ರೆ ಅವುಗಳ ಘಮ ಫ್ರಿಡ್ಜ್‌ನಲ್ಲಿರುವ ಎಲ್ಲ ಆಹಾರ ಪದಾರ್ಥಗಳಿಗೂ ಹರಡುತ್ತೆ.
ಫ್ರಿಡ್ಜ್‌ನಲ್ಲಿ ಸ್ಟೀಲ್ ಪಾತ್ರೆಗಳನ್ನು ಇಡಬಾರದು. ಹಾಗೆಯೇ ಪ್ಲಾಸ್ಟಿಕ್ ಡಬ್ಬಗಳನ್ನು ಜೋಡಿಸಿಡಬೇಡಿ. ಫ್ರಿಡ್ಜ್‌ನಲ್ಲಿ ಹೆಚ್ಚು ಜಾಗ ಇದೆ ಅಂತ ಅನಗತ್ಯ ವಸ್ತುಗಳನ್ನು ಇಡಬೇಡಿ ಫ್ರಿಡ್ಜ್ ಸುತ್ತ ಸಾಕಷ್ಟು ಖಾಲಿ ಜಾಗ ಇರುವಂತೆ ನೋಡಿಕೊಳ್ಳಿ. ಗಾಳಿ ಆಡುವ ಜಾಗದಲ್ಲಿ ಫ್ರಿಡ್ಜ್ ಇಡುವುದು ಒಳ್ಳೆಯದು.
ಫ್ರಿಡ್ಜ್ ಅನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ. ಆಗ ಮಾತ್ರ ನಿಮ್ಮ ಫ್ರಿಡ್ಜ್ ಹಾಳಾಗದೆ ಹೆಚ್ಚು ಕಾಲ ಚೆನ್ನಾಗಿರುತ್ತೆ. ಅನಗತ್ಯ ವಸ್ತುಗಳು ಅಥವಾ ಹೆಚ್ಚು ದಿನಗಳಿಂದಿರುವ ವಸ್ತುಗಳನ್ನು ತೆಗೆದು ಹೊರಗೆ ಹಾಕಿ. ಫ್ರಿಡ್ಜ್ ಹಿಂಭಾಗದಲ್ಲಿ ಡಬ್ಬದಲ್ಲಿರುವ ನೀರನ್ನು ಆಗಾಗ್ಗೆ ಖಾಲಿ ಮಾಡಿ ಸ್ವಚ್ಛಗೊಳಿಸಿ. ಇಲ್ಲದಿದ್ರೆ ಅದರಲ್ಲಿ ಸೊಳ್ಳೆಗಳು ಸೇರುತ್ತವೆ. ಇದರಿಂದ ರೋಗಗಳು ಹರಡುವ ಸಾಧ್ಯತೆ ಇರುತ್ತೆ. ನಿಂಬೆಹಣ್ಣನ್ನು ಒಂದು ಡಬ್ಬದಲ್ಲಿ ಹಾಕಿ ಫ್ರಿಡ್ಜ್ ಮೂಲೆಯಲ್ಲಿಟ್ಟರೆ ನಿಮ್ಮ ಫ್ರಿಡ್ಜ್ ಯಾವಾಗಲೂ ಪರಿಮಳಯುಕ್ತವಾಗಿರುತ್ತೆ.