ಊಟವಾದ್ಮೇಲೆ ಒಂದು ಪಾನ್ ಇದ್ರೆ ಅದ್ರ ಮಜವೇ ಬೇರೆ, ಹಾಗಂತ ಎಲ್ಲರೂ ತಿನ್ನೋದು ಒಳ್ಳೇದಲ್ಲ
ಭಾರತದಲ್ಲಿ ಪಾನ್ (paan) ತಿನ್ನೋದು ಹಳೆಯ ಸಂಪ್ರದಾಯ. ಅನೇಕರಿಗೆ ಇದು ಅಭ್ಯಾಸವಾದ್ರೆ ಮತ್ತೆ ಕೆಲವರಿಗೆ ಇದು ಚಟ. ಊಟ ಆದ್ಮೇಲೆ ನೀವು ತಿನ್ನುವ ಸ್ವೀಟ್ ಪಾನ್ ಕೂಡ ನಿಮ್ಮ ಆರೋಗ್ಯ ಹಾಳ್ಮಾಡ್ಬಹುದು ಜಾಗ್ರತೆ.

ಪಾನ್ ಸೇವನೆಯಿಂದಾಗುವ ಪ್ರಯೋಜನ
ಪಾನ್ ಗೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ವೀಳ್ಯದೆಲೆ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ರಿಬೋಫ್ಲಾವಿನ್, ಕ್ಯಾರೋಟಿನ್, ನಿಯಾಸಿನ್, ಕ್ಲೋರೊಫಿಲ್ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಸರಿಯಾಗಿ ಸೇವಿಸಿದರೆ, ಪಾನ್ ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ. ಪಾನ್ ಅನ್ನು ವೀಳ್ಯದೆಲೆ, ಅಡಿಕೆ, ಸುಣ್ಣ, ಸೋಂಪು ಸೇರಿದಂತೆ ಅನೇಕ ಪದಾರ್ಥಗಳನ್ನು ಸೇರಿಸಿ ತಿನ್ನಲಾಗುತ್ತದೆ.

ಮಧುಮೇಹಿಗಳು ತಿನ್ಬಾರದು
ತಂಬಾಕು ಸೇವನೆ ಯಾವುದೇ ವ್ಯಕ್ತಿಗೆ ಸೂಕ್ತವಲ್ಲ. ಸಿಹಿ ಪಾನ್ ಕೂಡ ಪ್ರತಿ ದಿನ ತಿನ್ನಬಾರದು. ಸ್ವೀಟ್ ಪಾನ್ ನಲ್ಲಿ ಬಹಳಷ್ಟು ಸಕ್ಕರೆ, ಗುಲ್ಕನ್ ಮತ್ತು ಸಿಹಿ ಪದಾರ್ಥಗಳಿರುತ್ತವೆ. ಸಿಹಿ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆಗೆ ಕಾರಣವಾಗಬಹುದು. ಹಾಗಾಗಿ ಮಧುಮೇಹ ರೋಗಿಗಳು ಇದನ್ನು ತಿನ್ನಬಾರದು.
ಗರ್ಭಧಾರಣೆಯಲ್ಲಿ ಪಾನ್
ಗರ್ಭಾವಸ್ಥೆಯಲ್ಲಿ ತಂಬಾಕು ಅಥವಾ ವೀಳ್ಯದೆಲೆ ಹೊಂದಿರುವ ಪಾನ್ ತಿನ್ನುವುದು ಉತ್ತಮವಲ್ಲ. ಇದು ತಾಯಿ ಮತ್ತು ಮಗು ಇಬ್ಬರಿಗೂ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ.
ಹಲ್ಲಿನ ಸಮಸ್ಯೆ
ಹಲ್ಲಿನ ಸಮಸ್ಯೆ ಇರುವವರು ಪಾನ್ ತಿನ್ನಬಾರದು. ಹಲ್ಲಿನಲ್ಲಿ ಹುಳು ಅಥವಾ ಹಲ್ಲು ಹಾಳಾಗಿದ್ದರೆ ಪಾನ್ ತಿನ್ನುವುದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. ಹಲ್ಲಿನ ನೋವು ಕಾಡುತ್ತದೆ.
ಆರೋಗ್ಯ ಸಮಸ್ಯೆ
ತಂಬಾಕು ಪಾನ್ ಅಥವಾ ಸಿಹಿ ಪಾನನ್ನು ನಿರಂತರ ಸೇವನೆ ಮಾಡೋದ್ರಿಂದ ಅಥವಾ ಬಾಯಲ್ಲಿ ತುಂಬಾ ಸಮಯ ಇಟ್ಟುಕೊಳ್ಳುವುದ್ರಿಂದ ಬಾಯಿ ಕ್ಯಾನ್ಸರ್ ಕಾಡುವ ಅಪಾಯ ಹೆಚ್ಚಿರುತ್ತದೆ. ಇಡೀ ದಿನ ಪಾನ್ ಸೇವನೆ ಮಾಡೋದ್ರಿಂದ ಜೀರ್ಣಕ್ರಿಯೆ ಸಮಸ್ಯೆ ಕೂಡ ಕಾಡಬಹುದು. ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಬೇರೆ ಬೇರೆ ಸಮಸ್ಯೆ ಕಾಣಿಸಿಕೊಳ್ಳಬಹುದು.
ಗ್ಯಾಸ್ಟ್ರಿಕ್
ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಕೂಡ ಪಾನ್ ತಿನ್ನಬೇಡಿ. ಪಾನ್ ತಿಂದ ತಕ್ಷಣ ನೀವು ನೀರು ಕುಡಿದ್ರೆ ತಲೆ ನೋವು, ಗ್ಯಾಸ್ಟ್ರಿಕ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಔಷಧಿ ಸೇವನೆ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ಪಾನ್ ತಿನ್ನಬೇಡಿ. ಇದು ಹೊಟ್ಟೆ ನೋವಿಗೆ ಕಾರಣ ಆಗ್ಬಹುದು.
ಮಕ್ಕಳಿಗೆ ಅಪಾಯ
ಪಾನ್ ಗೆ ಬಳಸುವ ವೀಳ್ಯದ ಎಲೆಯ ಕಟು ಮತ್ತು ತಣ್ಣನೆಯ ಪರಿಣಾಮ ಮಕ್ಕಳು ಮತ್ತು ವೃದ್ಧರಿಗೆ ಹಾನಿಕಾರಕ. ಪಾನ್ ಸೇವನೆಯಿಂದ ಮಕ್ಕಳ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ.
ಬಿಪಿಗೆ ಸೂಕ್ತವಲ್ಲ
ಬಿಪಿಯಿಂದ ಬಳಲುತ್ತಿರುವ ಜನರು ಎಂದಿಗೂ ಪಾನ್ ತಿನ್ನಬಾರದು. ಯಾರಿಗಾದರೂ ಅಧಿಕ ಬಿಪಿ ಸಮಸ್ಯೆ ಇದ್ದರೆ, ಅವರು ತಂಬಾಕು ಅಥವಾ ವೀಳ್ಯದೆಲೆಯೊಂದಿಗೆ ಪಾನ್ ತಿನ್ನಬೇಡಿ. ತಂಬಾಕು ಮತ್ತು ವೀಳ್ಯದೆಲೆ ಇವೆರಡೂ ರಕ್ತದೊತ್ತಡವನ್ನು ಹೆಚ್ಚಿಸಬಹುದು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

