8ರ ಪುಟಾಣಿ ಇನ್ನು ಮುಂದೆ ಸನ್ಯಾಸಿನಿ, ಇಲ್ಲಿದೆ ದೀಕ್ಷಾಧಾರಣೆಯ ವೈಭವದ ಫೋಟೋಗಳು
ಆಕೆ ಗುಜರಾತ್‌ನ ಶ್ರೀಮಂತ ವಜ್ರ ವ್ಯಾಪಾರಿಯ ಹಿರಿಮಗಳು. ವೈಭವದ ಜೀವನಕ್ಕೆ ಗುಡ್‌ಬೈ ಹೇಳಿ ಜೈನ ದೀಕ್ಷೆ ತೆಗೆದುಕೊಂಡಿದ್ದಾಳೆ 8 ವರ್ಷದ ಪುಟಾಣಿ ದೇವಾಂಶಿ ಸಾಂಘ್ವಿ.
ಇಲ್ಲಿ ಮುದ್ದು ಮುದ್ದಾಗಿ ನಗುತ್ತಿರುವ 8ರ ಹರೆಯದ ಪುಟಾಣಿ ಪೋರಿ ದೇವಾಂಶಿ ಸಾಂಘ್ವಿ. ಆಕೆ, 'ಸಾಂಘ್ವಿ ಅಂಡ್ ಸನ್ಸ್' ಎಂಬ ವಜ್ರದ ದೊಡ್ಡ ಕಂಪನಿಯ ಯುವರಾಣಿ.
ಆದರೆ, ಇನ್ನು ಮುಂದೆ ತಂದೆ, ತಾತರ ಈ ಪ್ರಸಿದ್ಧ ಕಂಪನಿಗೂ ಆಕೆಗೂ ಸಂಬಂಧವಿಲ್ಲ. ಅಷ್ಟೇ ಏಕೆ, ಹೆತ್ತ ತಂದೆ ತಾಯಿಯೊಡನೆಯೂ ಸಂಪರ್ಕವಿರೋಲ್ಲ.
ಏಕೆಂದರೆ, ಆಟ ಆಡಿಕೊಂಡು, ಓದಿಕೊಂಡು, ಕುಣಿದುಕೊಂಡಿರಬೇಕಾದ ದೇವಾಂಶಿ ಸಾಂಘ್ವಿ ಬುಧವಾರ ಜೈನ ಸನ್ಯಾಸತ್ವವನ್ನು ಸ್ವೀಕರಿಸಿದ್ದಾಳೆ.
ಆಕೆಯ ದೀಕ್ಷಾ ಕಾರ್ಯಕ್ರಮದ ಫೋಟೋಗಳು ಬುಧವಾರ ಇಂಟರ್ನೆಟ್‌ನಲ್ಲಿ ಸೆನ್ಸೇಶನ್ ಹುಟ್ಟು ಹಾಕಿವೆ. ಹಾಡು, ನೃತ್ಯ, ಡೋಲು, ನಗಾರಿಗಳ ಅದ್ಧೂರಿತನದೊಡನೆ, ಒಂಟೆ, ಆನೆ, ಕುದುರೆ, ಕಾರುಗಳ ಬಂಡಿಯೇರಿ ಭವ್ಯ ಸಮಾರಂಭದಲ್ಲಿ ದೇವಾಂಶಿಯನ್ನು ಮಗಳಾಗಿ ಬೀಳ್ಕೊಡಲಾಗಿದೆ.
ಆಕೆಯ ತಂದೆ ಸೂರತ್‌ನ ಧನೇಶ್ ಸಾಂಘ್ವಿ. 'ಸಾಂಘ್ವಿ ಅಂಡ್ ಸನ್ಸ್'ನ ಕುಲಪತಿಯಾದ ಮೋಹನ್ ಸಾಂಘ್ವಿಯವರ ಏಕೈಕ ಪುತ್ರ. ವಿಶ್ವದಾದ್ಯಂತ ಶಾಖೆಗಳನ್ನು ಹೊಂದಿರುವ ರಾಜ್ಯದ ಅತ್ಯಂತ ಹಳೆಯ ವಜ್ರ-ತಯಾರಿಸುವ ಕಂಪನಿಗಳಲ್ಲಿ ಇವರ ಸಂಸ್ಥೆ ಒಂದಾಗಿದೆ.
ಧನೇಶ್ ಅವರ ಇಬ್ಬರು ಪುತ್ರಿಯರಲ್ಲಿ ದೇವಾಂಶಿ ಹಿರಿಯವಳು. ಆಕೆಯ ತಂಗಿ ಕಾವ್ಯಗೆ 5 ವರ್ಷ.ಇಷ್ಟು ಚಿಕ್ಕ ವಯಸ್ಸಿಗೆ ದೇವಾಂಶಿ ದೀಕ್ಷೆ ಪಡೆಯುತ್ತಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಇದುವರೆಗೂ 367 ದೀಕ್ಷಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ದೇವಾಂಶಿ, ಸನ್ಯಾಸಿನಿಯಾಗುವತ್ತ ಒಲವು ತೋರಿದ್ದಾಳೆ. ತಾಯಿ ಅಮಿ ಶ್ರೀಮಂತೆಯೇ ಆದರೂ, ಮಕ್ಕಳಿಗೆ ಸರಳ, ಧಾರ್ಮಿಕ ಜೀವನಶೈಲಿಯನ್ನೇ ಬೋಧಿಸಿದ್ದರು.
ದೇವಾಂಶಿಯ ದೀಕ್ಷಾ ಪ್ರದಾನ ಕಾರ್ಯಕ್ರಮದಲ್ಲಿ ಜೈನಮುನಿಗಳು, ಜೈನ ಸನ್ಯಾಸಿನಿಯರು ಬಹಳ ಸಂಖ್ಯೆಯಲ್ಲಿ ನೆರೆದಿದ್ದರು. ಅಷ್ಟೇ ಏಕೆ, ಸಂಬಂಧಿಕರು, ಜೈನ ಬಾಂಧವರು ಸೇರಿ ರಸ್ತೆಯುದ್ದಗಲವೂ ಕಾರ್ಯಕ್ರಮಕ್ಕೆ ಬಂದವರಿಂದ ತುಂಬಿತ್ತು.
ಇನ್ನು ಮುಂದೆ ದೇವಾಂಶಿ ವಾಹನ ಬಳಸುವಂತಿಲ್ಲ, ಬರಿಗಾಲಲ್ಲೇ ನಡೆಯಬೇಕು. ಬೇಕಾದ ಆಹಾರ ತಿನ್ನುವಂತಿಲ್ಲ. ಭಿಕ್ಷೆ ಪಡೆದ ಆಹಾರವಷ್ಟೇ ಹೊಟ್ಟೆಗೆ. ಫ್ಯಾನ್ ಬಳಸುವಂತಿಲ್ಲ. ಫೋನ್ ಮುಟ್ಟುವಂತಿಲ್ಲ.
ಆಧುನಿಕ ಸೌಲಭ್ಯಗಳೆಲ್ಲದರಿಂದಲೂ ದೇವಾಂಶಿ ದೂರವಿದ್ದು, ಗುರುವಿನ ಮಾರ್ಗದರ್ಶನದಲ್ಲಿ ಆಧ್ಯಾತ್ಮ ಸಾಧನೆ ಮಾಡಬೇಕು. ಐಶಾರಾಮಿತನದಲ್ಲೇ ಹುಟ್ಟಿ ಬೆಳದ ಪೋರಿಯೊಬ್ಬಳು ಎಳೆಪ್ರಾಯದಲ್ಲೇ ಸನ್ಯಾಸತ್ವದಲ್ಲ ಒಲವು ತೋರಿದ್ದು ವಿಶೇಷ.
ಸುಮಾರು 10 ವರ್ಷದ ಹಿಂದೆ ವರ್ಷಕ್ಕೆ ಹತ್ತೋ ಇಪ್ಪತ್ತೋ ಮಕ್ಕಳು ದೀಕ್ಷೆ ಪಡೆಯುತ್ತಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ 400 ದಾಟಿರುವುದು ವಿಪರ್ಯಾಸ.