Lord Shiva Temple: ಶಿವನ ಮಹಿಮೆ ಸಾರುವ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಿ..
ಶ್ರಾವಣ ಮಾಸ ಹತ್ತಿರ ಬರುತ್ತಿದೆ. ಶ್ರಾವಣವು ಶಿವನಿಗೆ ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಎಲ್ಲೆಲ್ಲಿವೆ, ಅವುಗಳ ವಿಶೇಷವೇನು ಎಂಬುದನ್ನು ಸರಣಿಯಲ್ಲಿ ನೋಡೋಣ.
ಸೋಮನಾಥ ದೇವಾಲಯ, ಗುಜರಾತ್
ಗುಜರಾತ್‌ನ ವೇರಾವಲ್‌ನಲ್ಲಿರುವ ಸೋಮನಾಥ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾಗಿದೆ. ಈ ದೇವಾಲಯ ಅತ್ಯಂತ ಸುಂದರವಾಗಿದ್ದು, ಜಗತ್ತಿನ ಶಿವ ದೇವಾಲಯಗಳಲ್ಲೇ ಅತಿ ಪ್ರಮುಖವೆನಿಸಿಕೊಂಡಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವು ಕತೆಗಳಿವೆ. ಮೊಹಮ್ಮದ್ ಘಜ್ನಿ ಈ ದೇವಾಲಯದ ಮೇಲೆ 6 ಬಾರಿ ದಾಳಿ ಮಾಡಿದರೂ ಜಗ್ಗದೆ ಬಲವಾಗಿ ನಿಂತಿದೆ.
ಶ್ರೀಶೈಲ, ಆಂಧ್ರಪ್ರದೇಶ
ಎರಡನೆಯ ಜ್ಯೋತಿರ್ಲಿಂಗವು ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಾಲಯದಲ್ಲಿದೆ. ಒಮ್ಮೆ ಗಣಪತಿ ತನಗಿಂತ ಮೊದಲು ವಿವಾಹವಾಗಲು ಸಜ್ಜಾಗಿದ್ದಾನೆಂದು ಕೋಪಗೊಂಡ ಸುಬ್ರಹ್ಮಣ್ಯನನ್ನು ಸಮಾಧಾನ ಪಡಿಸಲು ಶಿವ ಹಾಗೂ ಪಾರ್ವತಿ ಶ್ರೀಶೈಲಕ್ಕೆ ಬಂದ ಪುರಾಣಕತೆಯಿದೆ.
ಮಹಾಕಾಳೇಶ್ವರ ದೇವಾಲಯ, ಉಜ್ಜೈನಿ
ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ರುದ್ರಸಾಗರ್ ಕೆರೆಯ ತಟದಲ್ಲಿ ಮಹಾಕಾಳೇಶ್ವರ ದೇವಾಲಯವಿದೆ. ಇಲ್ಲಿ ಮೂರನೆಯ ಜ್ಯೋತಿರ್ಲಿಂಗವಿದೆ.
ಓಂಕಾರೇಶ್ವರ್, ಮಧ್ಯಪ್ರದೇಶ
ಮಧ್ಯಪ್ರದೇಶದ ಖಾಂಡ್ವಾದಲ್ಲಿರುವ ಓಂಕಾರೇಶ್ವರ ದೇವಾಲಯ ನರ್ಮದಾ ನದಿ ಮಧ್ಯದ ದ್ವೀಪ ಶಿವಪುರಿಯಲ್ಲಿದೆ. ಇಲ್ಲಿನ ಲಿಂಗವು ಓಂ ಆಕಾರದಲ್ಲಿರುವುದು ವಿಶೇಷವೆನಿಸಿಕೊಂಡಿದೆ.
ರಾಮೇಶ್ವರಂ ಜ್ಯೋತಿರ್ಲಿಂಗ, ತಮಿಳು ನಾಡು
ದೇಶದ ಅತಿ ದಕ್ಷಿಣ ಭಾಗವೆನಿಸಿದ ತಮಿಳುನಾಡಿನಲ್ಲಿ ಈ ಜ್ಯೋತಿರ್ಲಿಂಗವಿದೆ. ರಾಮನು ರಾವಣ ಸಂಹಾರಕ್ಕೆ ಹೋಗುವ ಮುಂಚೆ ರಾಮೇಶ್ವರಂನಲ್ಲಿ ಮರಳಲ್ಲಿ ಲಿಂಗ ನಿರ್ಮಿಸಿ ಗೆಲುವಿಗಾಗಿ ಆಶೀರ್ವಾದ ಕೇಳಿ ಶಿವನನ್ನು ಪೂಜಿಸಿದ್ದ. ಆಗ ಶಿವನು ರಾಮನಿಗೆ ಆಶೀರ್ವದಿಸಿ ಆ ಲಿಂಗವನ್ನು ಜ್ಯೋತಿರ್ಲಿಂಗವಾಗಿ ಬದಲಾಯಿಸಿದ.
ಕೇದಾರನಾಥ, ಉತ್ತರಾಖಂಡ್
ರುದ್ರಪ್ರಯಾಗದಲ್ಲಿರುವ ಪ್ರಸಿದ್ಧ ಕೇದಾರನಾಥವು ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆದಿರುತ್ತದೆ. ಇಲ್ಲಿರುವ ಜ್ಯೋತಿರ್ಲಿಂಗದ ದರ್ಶನಕ್ಕಾಗಿ ಭಕ್ತರು ಕಠಿಣ ಹಾದಿ ಸವೆಸುತ್ತಾರೆ.
ಭೀಮಶಂಕರ್, ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿರುವ ಭೀಮಶಂಕರದಲ್ಲಿ ಜ್ಯೋತಿರ್ಲಿಂಗವಿದ್ದು, ಈ ದೇವಾಲಯವು ಭೀಮಾ ನದಿ ತೀರದಲ್ಲಿದೆ.
ವಿಶ್ವನಾಥ, ವಾರಣಾಸಿ
ವಾರಣಾಸಿಯ ವಿಶ್ವನಾಥ ಯಾರಿಗೆ ತಾನೇ ಗೊತ್ತಿಲ್ಲ? ಜಗತ್ಪ್ರಸಿದ್ಧನಾದ ಕಾಶಿ ವಿಶ್ವನಾಥ ದೇವಾಲಯ ಕೂಡಾ 12 ಜ್ಯೋತಿರ್ಲಿಂಗಗಳಲ್ಲೊಂದು.
ತ್ರಯಂಬಕೇಶ್ವರ, ನಾಸಿಕ್
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಅತಿ ಪುರಾತನ ಹಿಂದೂ ತ್ರಯಂಬಕೇಶ್ವರ ಜ್ಯೋತಿರ್ಲಿಂಗ ದೇವಾಲಯವಿದೆ.
ಗೃಶ್ಣೇಶ್ವರ ಜ್ಯೋತಿರ್ಲಿಂಗ, ಔರಂಗಾಬಾದ್
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಗೃಷ್ಣೇಶ್ವರ ದೇವಾಲಯ ಬಳಿಯೇ ಜಗತ್ಪ್ರಸಿದ್ಧ ಅಜಂತಾ, ಎಲ್ಲೋರಾ ಗುಹೆಗಳಿರುವುದು. ಈ ಮೂಲಕ ಮಹಾರಾಷ್ಟ್ರದಲ್ಲಿಯೇ ಒಟ್ಟು 3 ಜ್ಯೋತಿರ್ಲಿಂಗ ದೇವಾಲಯಗಳಿವೆ.
ಬೈಜನಾಥ್, ಜಾರ್ಖಂಡ್
ಜಾರ್ಖಂಡ್‌ನ ಬೈಜನಾಥ್ ದೇವಾಲಯವು ಮತ್ತೊಂದು ಜ್ಯೋತಿರ್ಲಿಂಗ ಹೊಂದಿದೆ. ಇಲ್ಲಿ ರಾವಣನು ಶಿವನಿಗಾಗಿ ತಪಸ್ಸು ಮಾಡಿದ ಪ್ರತೀತಿ ಇದೆ.
ನಾಗೇಶ್ವರ, ದ್ವಾರಕೆ
ಗುಜರಾತ್‌ನ ದ್ವಾರಕೆಯಿಂದ 18 ಕಿಲೋಮೀಟರ್ ದೂರದಲ್ಲಿ ನಾಗೇಶ್ವರ ದೇವಾಲಯವಿದೆ. ಶಿವನು ತನ್ನ ಭಕ್ತೆ ಸುಪ್ರಿಯಾ ರಕ್ಷಣೆಗಾಗಿ ದಾರುಕಾ ಎಂಬ ರಾಕ್ಷಸನನ್ನು ಕೊಂದಿದ್ದ ಸ್ಥಳ ಇದಾಗಿದೆ ಎಂದು ಶಿವಪುರಾಣದಲ್ಲಿ ಉಲ್ಲೇಖಗೊಂಡಿದೆ.