- Home
- Life
- Fashion
- ಮೆಟ್ ಗಾಲಾದಲ್ಲಿ ಬಾಲಿವುಡ್ ಮೀರಿಸಿದ ಇಶಾ ಅಂಬಾನಿ ಲುಕ್, ಬಟ್ಟೆ ತಯಾರಿಕೆಗೆ ಎಷ್ಟು ಗಂಟೆ ಗೊತ್ತಾ?
ಮೆಟ್ ಗಾಲಾದಲ್ಲಿ ಬಾಲಿವುಡ್ ಮೀರಿಸಿದ ಇಶಾ ಅಂಬಾನಿ ಲುಕ್, ಬಟ್ಟೆ ತಯಾರಿಕೆಗೆ ಎಷ್ಟು ಗಂಟೆ ಗೊತ್ತಾ?
ಇಶಾ ಅಂಬಾನಿ 2025 ರ ಮೆಟ್ ಗಾಲಾದಲ್ಲಿ ಭಾರತೀಯ ವಿನ್ಯಾಸಕಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ವಿಶಿಷ್ಟ ಉಡುಪನ್ನು ಧರಿಸಿದ್ದರು. ಈ ಉಡುಪು ಭಾರತೀಯ ಕರಕುಶಲತೆ ಮತ್ತು ಪಾಶ್ಚಾತ್ಯ ಫ್ಯಾಷನ್‌ನ ಸಮ್ಮಿಲನವನ್ನು ಪ್ರದರ್ಶಿಸಿತು, ಇದು ಈ ವರ್ಷದ 'ಬ್ಲ್ಯಾಕ್ ಡ್ಯಾಂಡಿಸಂ' ಥೀಮ್‌ಗೆ ಪೂರಕವಾಗಿದೆ.

ಈ ವರ್ಷ ನ್ಯೂಯಾರ್ಕ್‌ನಲ್ಲಿ ನಡೆದ ಪ್ರಸಿದ್ಧ ಮೆಟ್ ಗಾಲಾದಲ್ಲಿ ಭಾರತೀಯ ಉದ್ಯಮ ಪರಂಪರೆಯ ಪ್ರಮುಖ ವ್ಯಕ್ತಿಯಾದ ಮುಕೇಶ್ ಮತ್ತು ನೀತಾ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ತಮ್ಮ ವಿಶಿಷ್ಟ ಉಡುಪು ಮತ್ತು ಆಭರಣದಿಂದ ಎಲ್ಲರ ಗಮನ ಸೆಳೆದರು. ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿಯಾಗಿರುವ ಇಶಾ, ಭಾರತೀಯ ಸಂಸ್ಕೃತಿಯ ಪರಂಪರೆ ಹಾಗೆ ಪಾಶ್ಚಾತ್ಯ ಫ್ಯಾಷನ್‌ನ ಜೊತೆ ಅದ್ಭುತ ಸಂಯೋಜನೆ ಮಾಡಿದ ಉಡುಪನ್ನು ತೊಟ್ಟಿದ್ದರು.
ಅವರು ಧರಿಸಿದ್ದ ಉಡುಪನ್ನು ಖ್ಯಾತ ಭಾರತೀಯ ವಿನ್ಯಾಸಕಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದರು. ಇಶಾ ಧರಿಸಿದ್ದ ಬಿಳಿ ಬಣ್ಣದ ಕಾರ್ಸೆಟ್, ಕಪ್ಪು ಬಣ್ಣದ ಟೇಲರ್ಡ್ ಪ್ಯಾಂಟ್ ಹಾಗೂ ನೆಲಕ್ಕೆ ತಾಕುವಷ್ಟು ಉದ್ದದ ಅಲಂಕೃತ ಕೇಪ್, ಉಡುಪಿನ ಪ್ರಮುಖ ಆಕರ್ಷಣೆಯಾಯಿತು. ಈ ಉಡುಪಿನ ಮೇಲೆ ವಿಶೇಷವಾದ ಕಸೂತಿಯನ್ನು ಮಾಡಲಾಗಿದ್ದು, ಇದನ್ನು ತಯಾರಿಸಲು 20,000 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಯಿತು ಎಂಬ ಮಾಹಿತಿ ಲಭ್ಯವಿದೆ.
ಈ ವರ್ಷದ ಮೆಟ್ ಗಾಲಾದ ಥೀಮ್ "ಬ್ಲ್ಯಾಕ್ ಡ್ಯಾಂಡಿಸಂ" ಆಗಿದ್ದು, ಆಂಧ್ರೋಜಿನಸ್ ಲುಕ್ ಅಥವಾ ಲಿಂಗ ನಿರಪೇಕ್ಷ ಫ್ಯಾಷನ್‌ಗಾಗಿ ಈ ಉಡುಪು ತುಂಬಾ ಹೊಂದಿಕೆಯಾಗುತ್ತಿತ್ತು. ಈ ಉಡುಪಿನಲ್ಲಿ ಅಮೂಲ್ಯ ಸ್ಟೋನ್, ಮುತ್ತುಗಳು ಮತ್ತು ನುರಿತ ಕೈಗಾರಿಕೆಯಿಂದ ಮಾಡಿದ ಬಟ್ಟೆಗಳನ್ನು ಬಳಸಲಾಗಿದೆ. ಈ ಉಡುಪಿನಲ್ಲಿ ಬಳಸಲಾದ ಜವಳಿಗಳು ರಿಲಯನ್ಸ್‌ನ ಕೈಮಗ್ಗ ಅಂಗಡಿ "ಸ್ವದೇಶ್"ನಿಂದ ಆಯ್ದುಕೊಳ್ಳಲಾಗಿದೆ. ನಂತರ ಅದನ್ನು ಅನಾಮಿಕಾ ಖನ್ನಾ ಅವರು ವಿಶೇಷವಾಗಿ ಡಿಸೈನ್ ಮಾಡಿದ್ದಾರೆ ಎಂದು ಇಶಾ ಅವರ ಸ್ಟೈಲಿಸ್ಟ್ ಅನೈತಾ ಶ್ರಾಫ್ ಅಡಜಾನಿಯಾ ಹೇಳಿದರು. ಈ ಬಟ್ಟೆಯನ್ನು ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳ ಮೊದಲು ಮುಗಿಸಿದರು ಎಂದು ತಿಳಿದುಬಂದಿದೆ.
ಆಭರಣಗಳ ಆಯ್ಕೆ ಕೂಡಾ ಈ ಉಡುಪಿಗೆ ಹೆಚ್ಚಿನ ಲುಕ್ ನೀಡಿತು. ಇಶಾ ಅಂಬಾನಿ ಹಲವು ವಜ್ರ ಉಂಗುರಗಳು, ದೊಡ್ಡ ವಜ್ರದ ಹಾರಗಳು, ಮತ್ತು ಪ್ಯಾಂಟ್ ಮೇಲಿನ ಬ್ರೂಚ್ ಸಹಿತ ಅಪೂರ್ವವಾದ ಆಭರಣಗಳನ್ನು ಧರಿಸಿದ್ದರು. ಈ ಆಭರಣಗಳಲ್ಲಿ ಹೆಚ್ಚಿನವು ಅವರ ತಾಯಿ ನೀತಾ ಅಂಬಾನಿಯವರ ಖಾಸಗಿ ಸಂಗ್ರಹದಿಂದ ಬಂದವು ಎಂದು ಜೂಲಿಯಾ ಚಾಫೆ ಹೇಳಿದರು. ವಿಶೇಷವಾಗಿ, ಅವರ ಹಾರ ಪ್ರಸಿದ್ಧ ಕಾರ್ಟಿಯರ್ ಟೌಸೇಂಟ್‌ನಿಂದ ಪ್ರೇರಿತವಾಗಿದ್ದು, ಮೂಲವಾಗಿ 1931 ರಲ್ಲಿ ಮಹಾರಾಜರಿಗಾಗಿ ರೂಪಿಸಲಾಗಿದ್ದ ಡಿಸೈನ್ ಎನ್ನಲಾಗಿದೆ.
ಇನ್ನು ಹೆಚ್ಚಿನ ಆಕರ್ಷಕಣೆಗಾಗಿ ಇಶಾ ದಿವಾ ಟೋಪಿ ಧರಿಸಿದ್ದರು. ಅವರ ಕೂದಲುಗಳನ್ನು ಪೋಣಿಸಿ ಜಡೆ ಹಾಕಲಾಗಿತ್ತು ಮತ್ತು ಮೇಕಪ್ ಅತ್ಯಂತ ಸರಳವಾಗಿತ್ತು. ತಿಳಿ ಬಣ್ಣದ ತುಟಿಗಳು ಮತ್ತು ಮೃದುವಾದ ನೋಟದಿಂದ ಅದ್ಭುತವಾಗಿ ಕಾಣುತ್ತಿದ್ದರು.ಇಶಾ ಅಂಬಾನಿ ಇದುವರೆಗೆ ಹಲವಾರು ಬಾರಿ ಮೆಟ್ ಗಾಲಾದಲ್ಲಿ ಪಾಲ್ಗೊಂಡಿದ್ದಾರೆ. 2017 ರಲ್ಲಿ ಮೆಟ್ ಗಾಲಾಗೆ ಪಾದಾರ್ಪಣೆ ಮಾಡಿದರು ಮತ್ತು 2019 ರಲ್ಲಿ ಮತ್ತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. 2023ರಲ್ಲಿ ಅವರು ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿದ ಗೌನ್ ಧರಿಸಿದ್ದರು. ಕಳೆದ ವರ್ಷ ರಾಹುಲ್ ಮಿಶ್ರಾ ಅವರ ಹೂವಿನ ಗೌನ್ ಧರಿಸಿದ್ದರು.
ಈ ವರ್ಷದ ಗಾಲಾದಲ್ಲಿ ಭಾರತೀಯ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಕಿಯಾರಾ ಅಡ್ವಾಣಿ, ಪ್ರಿಯಾಂಕಾ ಚೋಪ್ರಾ, ದಿಲ್ಜಿತ್ ದೋಸಾಂಜ್ ಮತ್ತು ಉದ್ಯಮಿಯರಾದ ಮೋನಾ ಪಟೇಲ್, ನತಾಶಾ ಪೂನಾವಲ್ಲಾ ಭಾಗವಹಿಸಿದ್ದರು. ಇಶಾ ಅಂಬಾನಿಯ ಉಡುಪು ಮತ್ತು ಆಭರಣಗಳು ಭಾರತೀಯ ಪರಂಪರೆಯ ಶೈಲಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದ ವಿಶಿಷ್ಟ ಉದಾಹರಣೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.