ಮನೆಯಲ್ಲೇ ತಯಾರಿಸಿದ ಈ ಕರಿಬೇವಿನ ಎಣ್ಣೆ ಹಚ್ಚಿ, ಕೂದಲು ಒಂಚೂರು ಉದರಲ್ಲ
ಕೂದಲು ಉದುರುವಿಕೆ ಇಂದಿನ ಕಾಲದಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆ. ಹೆಣ್ಣುಮಕ್ಕಳಷ್ಟೇ ಅಲ್ಲ, ಗಂಡಸರು ಮತ್ತು ಮಕ್ಕಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಸಮಸ್ಯೆಗೆ ‘ಕರಿಬೇವು’ ರಾಮಬಾಣ ಎನ್ನಲಾಗಿದೆ.

ಕೂದಲು ಉದುರುವಿಕೆ ತಗ್ಗಬೇಕಾ?
ಹೆಣ್ಣುಮಕ್ಕಳಿಗೆ ಕೂದಲೆಂದರೆ ಅಂದದ ಕಿರೀಟ ಇದ್ದಂತೆ. ಕಪ್ಪಗೆ, ಹೊಳೆಯುತ್ತಾ ಇರಬೇಕು ಅಂತ ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಮಾರ್ಕೆಟ್ ನಲ್ಲಿ ಸಿಗುವ ಎಣ್ಣೆ, ಶಾಂಪೂ ಗಳನ್ನು ಉಪಯೋಗಿಸುತ್ತಾರೆ. ಆದರೆ ಇವುಗಳಲ್ಲಿರುವ ರಾಸಾಯನಿಕಗಳು ಕೂದಲನ್ನು ಹಾಳು ಮಾಡುತ್ತವೆ. ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ಯಾವ ಎಣ್ಣೆಗಳನ್ನೂ ಉಪಯೋಗಿಸದೇನೆ ಉದ್ದನೆಯ, ದಟ್ಟವಾದ ಕೂದಲನ್ನು ಹೊಂದಿದ್ದರು. ಹಾಗಾದರೆ ಅವರು ಏನು ಮಾಡುತ್ತಿದ್ದರು? ನಾವೂ ಅದನ್ನೇ ಮಾಡಿದರೆ ಕೂದಲಿನ ಸಮಸ್ಯೆಗಳು ಬಗೆಹರಿಯುತ್ತವೆಯೇ?.
ಕೂದಲು ಬೆಳವಣಿಗೆಗೆ ಕರಿಬೇವು
ಕೂದಲು ಉದುರುವಿಕೆ ಇಂದಿನ ಕಾಲದಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆ. ಹೆಣ್ಣುಮಕ್ಕಳಷ್ಟೇ ಅಲ್ಲ, ಗಂಡಸರು ಮತ್ತು ಮಕ್ಕಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ದುಬಾರಿ ಎಣ್ಣೆ, ಶಾಂಪೂಗಳನ್ನು ಉಪಯೋಗಿಸಬೇಕಾಗಿಲ್ಲ. ಮನೆಯಲ್ಲೇ ಕರಿಬೇವಿನ ಎಣ್ಣೆ ತಯಾರಿಸಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಹೀಗೆಯೇ ಮಾಡುತ್ತಿದ್ದರು.
ಕರಿಬೇವಿನಲ್ಲಿ ರೋಗ ನಿರೋಧಕ ಶಕ್ತಿ ಇದೆ. ಕೂದಲು ಬೆಳವಣಿಗೆಗೂ ಸಹಾಯ ಮಾಡುತ್ತದೆ. ಕರಿಬೇವಿನಲ್ಲಿ ಪ್ರೋಟೀನ್, ಬೀಟಾ-ಕ್ಯಾರೋಟಿನ್ ಮತ್ತು ಆಲ್ಕಲಾಯ್ಡ್ಸ್ ಇವೆ. ಇವು ಕೂದಲಿಗೆ ತೇವಾಂಶ ನೀಡಿ, ಬುಡವನ್ನು ಬಲಪಡಿಸುತ್ತವೆ. ಕೂದಲಿನ ಬಣ್ಣವನ್ನು ಕಾಪಾಡುವುದರ ಜೊತೆಗೆ ಬೆಳೆಯಲು ಮತ್ತು ಉದುರುವಿಕೆ ತಡೆಯಲು ಸಹಾಯ ಮಾಡುತ್ತದೆ. ನಿತ್ಯ ಈ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಉದುರುವುದಿಲ್ಲ.
ಕರಿಬೇವಿನ ಎಣ್ಣೆ ತಯಾರಿಸುವುದು ಹೇಗೆ?
ಬೇಕಾಗುವ ಪದಾರ್ಥಗಳು
ಒಂದು ಕಪ್ ತೆಂಗಿನ ಎಣ್ಣೆ
1/4 ಕಪ್ ತೊಳೆದು ಒಣಗಿಸಿದ ಕರಿಬೇವು
1/4 ಕಪ್ ಹೆಚ್ಚಿದ ನೆಲ್ಲಿಕಾಯಿ
ಒಂದು ಚಮಚ ಮೆಂತ್ಯ
ಎಣ್ಣೆ, ನೆಲ್ಲಿಕಾಯಿ, ಮೆಂತ್ಯ ಮತ್ತು ಕರಿಬೇವನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ, ನೀರು ಆವಿಯಾಗುವವರೆಗೆ ಕುದಿಸಿ. ಎಣ್ಣೆ ಕಂದು ಬಣ್ಣಕ್ಕೆ ತಿರುಗುತ್ತದೆ. ಸ್ಟವ್ ಆಫ್ ಮಾಡಿ, ಎಣ್ಣೆಯನ್ನು ಸೋಸಿ, ಬಾಟಲಿಯಲ್ಲಿ ಶೇಖರಿಸಿ. ದಿನಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿ. ಹೀಗೆ ಮಾಡಿದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ ಮತ್ತು ಉದುರುವುದಿಲ್ಲ.
ತೆಂಗಿನ ಎಣ್ಣೆ ಬದಲು ಆಲಿವ್ ಎಣ್ಣೆ ಅಥವಾ ಎಳ್ಳೆಣ್ಣೆಯನ್ನೂ ಉಪಯೋಗಿಸಬಹುದು. ಕರಿಬೇವಿನ ಎಣ್ಣೆಯಲ್ಲದೆ, ಕರಿಬೇವಿನ ಹೇರ್ ಮಾಸ್ಕ್ ಕೂಡ ಕೂದಲಿಗೆ ಒಳ್ಳೆಯದು.
ಕರಿಬೇವಿನ ಹೇರ್ ಮಾಸ್ಕ್
ಕೂದಲು ಉದುರುವಿಕೆ ತಡೆಯಲು ಕರಿಬೇವು ಮತ್ತು ಮೆಂತ್ಯದ ಹೇರ್ ಮಾಸ್ಕ್ ತಯಾರಿಸಬಹುದು. ಒಂದು ಚಮಚ ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಳ್ಳಿ. ಒಂದು ಚಮಚ ಕರಿಬೇವಿನ ಪೇಸ್ಟ್ ಸೇರಿಸಿ. ಇದನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಹೀಗೆ ಮಾಡಿದರೆ ಕೂದಲು ಉದುರುವಿಕೆ ನಿಲ್ಲುತ್ತದೆ. ಜೊತೆಗೆ ಚೆನ್ನಾಗಿ ಬೆಳೆಯುತ್ತದೆ.
ಕರಿಬೇವಿನ ನೀರು
ಕೂದಲು ಉದುರುವಿಕೆ ತಡೆಯಲು ಕರಿಬೇವಿನ ನೀರಿನಿಂದ ಕೂದಲು ತೊಳೆಯಬಹುದು. ಒಂದು ಪಾತ್ರೆಯಲ್ಲಿ ನೀರು ಕಾಯಿಸಿ. 15-20 ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ. ನೀರು ತಣ್ಣಗಾದ ಮೇಲೆ ಕೂದಲು ತೊಳೆಯಿರಿ. ಹೀಗೆ ಮಾಡಿದರೆ ಕೂದಲು ಉದುರುವಿಕೆ ನಿಲ್ಲುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.