- Home
- Life
- Fashion
- ಮಿಸ್ ಇಂಡಿಯಾ ಕಿರೀಟ ಗೆದ್ದ ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ, ಕನ್ನಡತಿ ಸಾಧ್ವಿ ಸೌಂದರ್ಯಕ್ಕೆ ದೇಶದ ಮನ್ನಣೆ
ಮಿಸ್ ಇಂಡಿಯಾ ಕಿರೀಟ ಗೆದ್ದ ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ, ಕನ್ನಡತಿ ಸಾಧ್ವಿ ಸೌಂದರ್ಯಕ್ಕೆ ದೇಶದ ಮನ್ನಣೆ
ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಯಾರು?, 61ನೇ ಆವೃತ್ತಿ ಫೆಮಿನಾ ಮಿಸ್ ಇಂಡಿಯಾಗೆ ಹೊಸ ಬ್ಯೂಟಿ ಕ್ವೀನ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕಿರೀಟ ಗೆದ್ದ ಹೊಸ ಸುಂದರಿ ಯಾರು?

ಮಿಸ್ ಇಂಡಿಯಾ ಕಿರೀಟ ಗೆದ್ದ ಸಾಧ್ವಿ ಸೈಲ್
ಫೆಮಿನಾ ಮಿಸ್ ಇಂಡಿಯಾ ವರ್ಲ್ 2026 ಅದ್ಧೂರಿಯಾಗಿ ತೆರೆ ಕಂಡಿದೆ. ಈ ಬಾರಿಯ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಸಾಧ್ವಿ ಸತೀಶ್ ಸೈಲ್ ಮುಡಿಗೇರಿಸಿಕೊಂಡಿದ್ದಾರೆ. ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿ ಸತೀಶ್ ಸೈಲ್ ಭಾರತದ ಸುಂದರಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಐಶ್ವರ್ಯ ರೈ ಬಳಿಕ ಕರ್ನಾಟಕದಿಂದ ಸೌಂದರ್ಯ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಳ್ಳುವರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಸಾಧ್ವಿ ಸೈಲ್ ಪ್ರಶಸ್ತಿ ಮುಡಿಗೇರಿಸಿಕೊಂಡು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಯಾರು ಈ ಸಾಧ್ವಿ ಸೈಲ್?
ಸಾಧ್ವಿ ಸೈಲ್ ಗೋವಾದ ಮಾಡೆಲ್ ಹಾಗೂ ಉದ್ಯಮಿ. ನಿರ್ಮಾಣ ಕ್ಷೇತ್ರದಲ್ಲಿ ಕಂಪನಿ ಆರಂಭಿಸಿ ಯಶಸ್ವಿಯಾಗಿ ಉದ್ಯಮಿಯಾಗಿರುವ ಸಾಧ್ವಿ ಸೈಲ್ ಇದೀಗ ಭಾರತದ ಸುಂದರಿ ಅನ್ನೋ ಕಿರೀಟವನ್ನು ಗೆದ್ದುಕೊಂಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದಾರೆ.ಸಾಧ್ವಿ ಸೈಲ್ ನಿರ್ಮಾಣ ಕಂಪನಿ ಜೊತೆಗೆ ಹಲವು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಜೇನು ಸಾಕಾಣೆ, ಮಡಕೆ ತಯಾರಿಕೆ ಫೋಟೋಗ್ರಫಿಗಳನ್ನು ಮಾಡುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಈ ಹವ್ಯಾಸಗಳಲ್ಲಿ ಸಾಧ್ವಿ ಸತೀಶ್ ಸೈಲ್ ತೊಡಗಿಸಿಕೊಂಡಿದ್ದಾರೆ.
ಮಾಡೆಲಿಂಗ್ ಮೂಲಕ ಸಮಾಜ ಸೇವೆ
ಗೋವಾದ ಟಾಪ್ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಸಾಧ್ವಿ ಸೈಲ್, ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೌಷ್ಠಿಕ ಆಹಾರ ಕೊರತೆಯಿಂದ ಬಳಸುತ್ತಿರುವ ಮಕ್ಕಳಿಗೆ ಸೂಕ್ತ ಪೋಷಕಾಂಶಗಳ ಒದಗಿಸುವುದು, ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಾಧ್ವಿ ಸೈಲ್ ತೊಡಗಿಸಿಕೊಂಡಿದ್ದಾರೆ.ಕುಪೋಷಣೆ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ದೇಣಿಗೆ ಸಂಗ್ರಹಿಸಿ ಮಕ್ಕಳ ಆರೋಗ್ಯಕ್ಕೆ ನೆರವಾಗಿದ್ದಾರೆ. ಕುಗ್ರಾಮಗಳಲ್ಲಿ ಕುಪೋಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜನಂದಿನಿ ಪವಾರ್ ರನ್ನರ್ ಅಪ್
ಕಳಿಂಗಾ ಇನ್ಸ್‌ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2026 ಗ್ಯಾಂಡ್ ಫಿನಾಲೆಯಲ್ಲಿ ಗೋವಾದ ಸಾಧ್ವಿ ಸತೀಶ್ ಸೈಲ್‌ಗೆ ಅವರು ವಿಜೇತರಾದರೆ, ಮಹಾರಾಷ್ಟ್ರದ ರಾಜನಂದಿನಿ ಪವಾರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಶ್ರೀ ಅದ್ವೈತ ಜಿ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಆಫ್ ಆಗಿ ಹೊರ ಹೊಮ್ಮಿದರು.
ಅಂತಿಮವಾಗಿ ಮೂವರನ್ನು ಆಯ್ಕೆ
ಕೆಐಐಟಿಯ ಆವರಣದಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ವೇದಿಕೆಯಲ್ಲಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಯಿತು. ಸಾಧ್ವಿ ಅವರು ಮುಂದೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದಿನ ವಿಜೇತರಾದ ನಿಖಿತಾ ಪೋರ್ವಾಲ್, ರೇಖಾ ಪಾಂಡೆ ಹಾಗೂ ಆಯುಷಿ ಧೋಕಲಾ ಅವರು ನೂತನ ವಿಜೇತೆಗೆ ಕಿರೀಟ ಧಾರಣೆ ಮಾಡಿ ಶುಭ ಹಾರೈಸಿದರು.
ದೇಶದ 30 ರಾಜ್ಯಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮೊದಲ ಹಂತದಲ್ಲಿ 15 ಸ್ಪರ್ಧಿಗಳು ಹೊರಬಂದರು. ಮುಂದಿನ ಹಂತಕ್ಕೆ ಆಯ್ಕೆಯಾದ 15 ಸ್ಪರ್ಧಿಗಳಲ್ಲಿ ಕರ್ನಾಟಕದ ಖುಷಿ ರಮೇಶ್ ಕಲಕೇರಿ ಅವರೂ ಸೇರಿದ್ದರು. ಎರಡನೇ ಹಂತದಲ್ಲಿ 8 ಸ್ಪರ್ಧಿಗಳು ಆಯ್ಕೆ ಮಾಡಲಾಯಿತು. ಮೂರನೇ ಹಂತದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಅಂತಿಮವಾಗಿ ಮೂವರನ್ನು ಆಯ್ಕೆ ಮಾಡಲಾಯಿತು.
ಡಾ. ಸಮಂತಾ ಅಭಿನಂದನೆ
ಸ್ಪರ್ಧಾ ವಿಜೇತರನ್ನು ಅಭಿನಂದಿಸಿ ಮಾತನಾಡಿದ ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಡಾ. ಅಚ್ಯುತ ಸಮಂತಾ ಅವರು, ಇದೊಂದು ಐತಿಹಾಸಿಕ ದಿನ. ಇಂತಹ ಸ್ಪರ್ಧೆಯನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಿದ್ದು ಹೆಮ್ಮೆಯಾಗಿದೆ. ಇದರ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.
ನಗದು ಬಹುಮಾನ ವಿತರಣೆ
ನಗದು ಬಹುಮಾನ ವಿತರಣೆ: ಡಾ. ಅಚ್ಯುತ ಸಮಂತ ಅವರು, ವಿಜೇತೆ ಸಾಧ್ವಿ ಸೈಲ್ ಅವರಿಗೆ ರೂ.1 ಲಕ್ಷ, ಮೊದಲ ಮತ್ತು ಎರಡನೇ ರನ್ನರ್ ಅಪ್ ಆದವರಿಗೆ ತಲಾ 50 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ತಮ್ಮ ಸಂಸ್ಥೆಯ ಪರವಾಗಿ ವಿತರಿಸಿದರು.
ಸಮಾರಂಭದಲ್ಲಿ ಜವಳಿ ಸಚಿವಾಲಯದ ಪ್ರತಿನಿಧಿ ಎಂ ಭೀನಾ, ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, ಪಾಲಿಕೆ ಮೇಯರ್ ಸುಲೋಚನಾ ದಾಸ್, ಟೈಮ್ಸ್ ಸಮೂಹದ ವಿನೀತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

