ನಿವೇದಿತಾ ಜೊತೆ ನವಿಲು ಗರಿ ಡ್ಯಾನ್ಸ್ ವಿವಾದ: ಡ್ಯಾನ್ಸರ್ ಕಿಶನ್ ಮೊದಲ ಪ್ರತಿಕ್ರಿಯೆ
ನವಿಲು ಗರಿ ಇದ್ದ ಉಡುಪು ಧರಿಸಿ ರೀಲ್ಸ್ ಮಾಡಿದ್ದಕ್ಕಾಗಿ ನಟ ಕಿಶನ್ ಮತ್ತು ನಿವೇದಿತಾ ಗೌಡ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಾಗಿದೆ. ಈ ಬಗ್ಗೆ ನಟ ಕಿಶನ್ ಕ್ಷಮೆಯಾಚಿಸಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುವುದಾಗಿ ತಿಳಿಸಿದೆ.

ನವಿಲು ಗರಿ ವಿವಾದ
ನವಿಲು ಗರಿ ಇದ್ದಂಥ ಉಡುಪು ಧರಿಸಿ ರೀಲ್ಸ್ ಮಾಡಿದ ನಟ ಕಿಶನ್ ಮತ್ತು ನಟಿ ನಿವೇದಿತಾ ಗೌಡ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ದೂರು ದಾಖಲಾಗಿದೆ. ಈ ದೂರಿನ ಬೆನ್ನಲ್ಲೇ ನಟ, ಡ್ಯಾನ್ಸರ್ ಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ.
ಕಿಶನ್ ಸ್ಪಷ್ಟನೆ
ನಾನು ಚಿಕ್ಕವನಿದ್ದಾಗಿಂದಲೂ ನವಿಲು ಗರಿಯನ್ನ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್ ಹಾಗೂ ಕೃಷ್ಣ ಜನ್ಮಾಷ್ಟಮಿ, ದೇವಸ್ಥಾನ ದಲ್ಲಿ ಹಾಗೂ ದರ್ಗಾದಲ್ಲಿ ಧೂಪ ಹಾಕುವಾಗ ಬಳಕೆ ಮಾಡೋದನ್ನ ನೋಡಿಕೊಂಡು ಬಂದಿದ್ದೇನೆ. ನವಿಲು ಗರಿಯನ್ನ ಬಾಡಿಗೆ ತೆಗೆದುಕೊಂಡಿರೋದನ್ನು ಸೋಶಿಯಲ್ ಮೀಡಿಯಾದಲ್ಲಿ ಕೊಲ್ಯಾಬ್ ಮಾಡಿಕೊಳ್ಳಲಾಗಿತ್ತು.
ವನ್ಯ ಜೀವಿ 1972 ಆಕ್ಟ್
ನವಿಲುಗರಿಯನ್ನು ಬಾಡಿಗೆಗೆ ತೆಗೆದುಕೊಳ್ಳೋದು ಕೂಡ ವನ್ಯ ಜೀವಿ 1972 ಆಕ್ಟ್ ಪ್ರಕಾರ ತಪ್ಪು ಅಂತ ಹೇಳುತ್ತಿದ್ದಾರೆ. ಆದ್ರೆ ಇದು ನಮಗೆ ಗೊತ್ತಿರಲಿಲ್ಲ. ನವಿಲು ಗರಿ ಬಳಸಿ ಡಾನ್ಸ್ ಮಾಡಿದ್ದಕ್ಕೆ ನಾನು ಕ್ಷಮೆ ಕೇಳ್ತೀನಿ. ಇನ್ಮುಂದೆ ಈ ರೀತಿ ತಪ್ಪು ಆಗದಂತೆ ಜಾಗ್ರತೆ ವಹಿಸುತ್ತೇನೆ ಎಂದು ಕಿಶನ್ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು
ಕಿಶನ್ ಮತ್ತು ನಿವೇದಿತಾ ಗೌಡ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ದೂರು ನೀಡಿದ್ದಾರೆ. ಕಿಶನ್ ಮತ್ತು ನಿವೇದಿತಾ ಗೌಡ ಅವರು ನವಿಲುಗರಿಗಳು ಇದ್ದಂಥ ಉಡುಪು ಧರಿಸಿ ರೀಲ್ಸ್ ಮಾಡಿ, ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಏನಿದೆ?
ನವಿಲು ರಾಷ್ಟ್ರೀಯ ಪಕ್ಷಿಯಾಗಿದ್ದು, ಸಂರಕ್ಷಿತ ಪ್ರಭೇದವಾಗಿದೆ. ಅವುಗಳ ಗರಿಗಳನ್ನು ಉಡುಪಿನಲ್ಲಿ ಅಳವಡಿಸಿದ್ದು, ಅನುಮಾನಕ್ಕೆ ಕಾರಣವಾಗಿದೆ. ಅಷ್ಟು ದೊಡ್ಡ ಪ್ರಮಾಣದ ನವಿಲು ಗರಿ ಎಲ್ಲಿಂದ ಬಂತು, ಅವುಗಳನ್ನು ಕಾನೂನು ಬದ್ಧವಾಗಿ ಪಡೆಯಲಾಗಿದೆಯೇ? ಆ ಗರಿಗಳ ಮೂಲ ಯಾವುದು ಎಂಬ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಪಿಸಿಸಿಎಫ್ ಪ್ರತಿಕ್ರಿಯೆ
ದಾಖಲಾಗಿರುವ ದೂರಿನ ಕುರಿತು ಪ್ರತಿಕ್ರಿಯಿಸಿರುವ ಪಿಸಿಸಿಎಫ್ ಅವರು, ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಒಂದು ವೇಳೆ ನವಿಲು ಗರಿ ಬಳಕೆ ಕುರಿತಂತೆ ಸೂಕ್ತ ದಾಖಲೆ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ದೂರುದಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

