- Home
- Education
- ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ಟೀಚರ್: 1 ಮಿಲಿಯನ್ ಡಾಲರ್ ಮೊತ್ತದ ಜಾಗತಿಕ ಶಿಕ್ಷಕಿ ಪ್ರಶಸ್ತಿ ಗೆದ್ದ ರೂಬೆಲ್ ನಾಗಿ
ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ಟೀಚರ್: 1 ಮಿಲಿಯನ್ ಡಾಲರ್ ಮೊತ್ತದ ಜಾಗತಿಕ ಶಿಕ್ಷಕಿ ಪ್ರಶಸ್ತಿ ಗೆದ್ದ ರೂಬೆಲ್ ನಾಗಿ
ಭಾರತೀಯ ಚಿತ್ರಕಲಾವಿದೆ ಮತ್ತು ಸಮಾಜ ಸುಧಾರಕಿ ರೂಬಲ್ ನಾಗಿ ಅವರು, ಸ್ಲಮ್‌ಗಳನ್ನು ಕಲಾತ್ಮಕವಾಗಿ ಪರಿವರ್ತಿಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದ ಸೇವೆಗಾಗಿ ಪ್ರತಿಷ್ಠಿತ ಜಾಗತಿಕ ಶಿಕ್ಷಕ ಪ್ರಶಸ್ತಿ 2026 ಅನ್ನು ಪಡೆದಿದ್ದಾರೆ.

ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ರೂಬಲ್ ನಾಗಿ
ನವದೆಹಲಿ: ಭಾರತದ ಸ್ಲಮ್‌ಗಳನ್ನು ತಮ್ಮ ಕಲಾತ್ಮಕತೆಯ ಮೂಲಕ ತೆರೆದ ಶಾಲೆಗಳಾಗಿ ಪರಿವರ್ತಿಸಿ, ಅಲ್ಲಿನ ಮಕ್ಕಳಲ್ಲೂ ಕಲಿಕೆಯ ಆಸಕ್ತಿ ತುಂಬಿದ ಭಾರತೀಯ ಚಿತ್ರಕಲಾವಿದೆ ಮತ್ತು ಸಮಾಜ ಸುಧಾರಕಿ ರೂಬಲ್ ನಾಗಿ ಅವರಿಗೆ ಅವರು ಮಾಡಿರುವ ಸಮಾಜ ಸೇವೆಗಾಗಿ ಜಾಗತಿಕ ಶಿಕ್ಷಕಿ ಪ್ರಶಸ್ತಿ ಲಭ್ಯವಾಗಿದೆ. 1 ಮಿಲಿಯನ್ ಡಾಲರ್ ಬಹುಮಾನ ಮೊತ್ತದ ಈ ಪ್ರಶಸ್ತಿಯನ್ನು(GEMS Education Global Teacher Prize 2026) ಯುಎಇಯ ದುಬೈನಲ್ಲಿ ನಡೆದ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಅವರಿಗೆ ಪ್ರದಾನ ಮಾಡಲಾಯ್ತು.
ರೂಬಲ್ ನಾಗಿ ಅವರಿಗೆ 2026 ರ ಗ್ಲೋಬಲ್ ಟೀಚರ್ ಪ್ರಶಸ್ತಿ
2026 ರ ಗ್ಲೋಬಲ್ ಟೀಚರ್ ಪ್ರಶಸ್ತಿಯನ್ನು ದುಬೈನ ರಾಜಕುಮಾರ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮತ್ತು ವರ್ಕಿ ಫೌಂಡೇಶನ್‌ನ ಸಂಸ್ಥಾಪಕ ಸನ್ನಿ ವರ್ಕಿ ಅವರು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ( ಯುನೆಸ್ಕೋ) ಸಹಯೋಗದೊಂದಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿಗೆ 139 ದೇಶಗಳ 5,000 ಕ್ಕೂ ಹೆಚ್ಚು ಜನರ ನಾಮನಿರ್ದೇಶನ ಮಾಡಲಾಗಿತ್ತು. ಇಷ್ಟೊಂದು ಸಾಧಕರ ನಡುವೆ ರೂಬೆಲ್ ನಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ.
ಎರಡು ದಶಕಗಳಿಂದ ಭಾರತದ ನಗರಗಳ ಸ್ಲಮ್‌ಗಳನ್ನು ರೋಮಾಂಚಕವಾಗಿಸಿ, ಮುಕ್ತ ತರಗತಿ ಕೊಠಡಿಗಳಾಗಿ ಪರಿವರ್ತಿಸಿ ಅಲ್ಲಿನ ಮಕ್ಕಳಲ್ಲೂ ಹೊಸ ಭರವಸೆ ಬೆಳಕು ತುಂಬಿದ ಅವರ ಸಾಧನೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.
ರೂಬಲ್ ನಾಗಿ ಯಾರು?
ರೂಬಲ್ ನಾಗಿ ಅವರು ಮೂಲತಃ ಮುಂಬೈ ಮೂಲದ ಕಲಾವಿದೆ, ಭಿತ್ತಿಚಿತ್ರಕಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಅವರು ಲಂಡನ್‌ನ ಸ್ಲೇಡ್ ಸ್ಕೂಲ್ ಆಫ್ ಫೈನ್ ಆರ್ಟ್‌ನಲ್ಲಿ ತರಬೇತಿ ಪಡೆದಿದ್ದಾರೆ. ಆರಂಭದಲ್ಲಿ ನಾಗಿಯವರು ತಮ್ಮ ಶಿಲ್ಪಕಲಾಕೃತಿ ಮತ್ತು ಭಿತ್ತಿಚಿತ್ರಗಳಿಗೆ ಖ್ಯಾತಿಯನ್ನು ಗಳಿಸಿದರು, ತರಗತಿಯ ಕೋಣೆಯ ಪರಿಕಲ್ಪನೆಯನ್ನು ಬದಲಾಯಿಸಿದ ಅವರು ರೂಬಲ್ ನಾಗಿ ಕಲಾ ಪ್ರತಿಷ್ಠಾನ (RNAF)ವನ್ನು ಸ್ಥಾಪಿಸಿದ್ದಾರೆ.
ರೂಬಲ್ ನಾಗಿ ಕಲಾ ಪ್ರತಿಷ್ಠಾನದಡಿ ಅವರು ಮಿಸಾಲ್ ಮುಂಬೈ ಹೆಸರಿನಡಿ ಕೊಳೆಗೇರಿಗಳು ಮತ್ತು ಹಳ್ಳಿಗಳಲ್ಲಿ 155,000 ಕ್ಕೂ ಹೆಚ್ಚು ಮನೆಗಳಿಗೆ ಬಣ್ಣ ಬಳಿದು ದುರಸ್ತಿ ಮಾಡಿದ್ದಾರೆ., ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸಿದ್ದಾರೆ ಮತ್ತು 100 ಹಿಂದುಳಿದ ಸಮುದಾಯಗಳು ಮತ್ತು ಹಳ್ಳಿಗಳಲ್ಲಿ 800 ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ, ಭಾರತದಾದ್ಯಂತ ಮಸುಕಾದ ಬೇಡದ ಗೋಡೆಗಳನ್ನು ಬಳಸಿ ಕುತೂಹಲ, ಸೃಜನಶೀಲತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹುಟ್ಟುಹಾಕುವ ಸಂವಾದಾತ್ಮಕ ಶೈಕ್ಷಣಿಕ ಭಿತ್ತಿಚಿತ್ರಗಳಾಗಿ ಮರು ರೂಪಿಸಿದ್ದಾರೆ.
ಕಲಿಕೆಯ ಗೋಡೆಗಳನ್ನು ತಿರುಗಿಸುವುದು ಎಂಬ ಗೆಲುವಿನ ಪರಿಕಲ್ಪನೆ
ನಾಗಿ ಅವರ ಕೆಲಸವು ಹೊಸತನವೆನಿಸಿದ 'ಲಿವಿಂಗ್ ವಾಲ್ಸ್ ಆಫ್ ಲರ್ನಿಂಗ್‌ಗಾಗಿ((Turning Walls of Learning)' ಗುರುತಿಸಲ್ಪಟ್ಟಿದೆ. ಊರಿನ ಅಂಚಿನಲ್ಲಿರುವ ಅಥವಾ ನೆರೆಹೊರೆಗಳಲ್ಲಿ ಕೈಬಿಟ್ಟ ಅಥವಾ ಮುರಿದ ಗೋಡೆಗಳನ್ನು ಸಂವಾದಾತ್ಮಕ ಶೈಕ್ಷಣಿಕ ಭಿತ್ತಿಚಿತ್ರಗಳಾಗಿ ಪರಿವರ್ತಿಸುವ ಈ ಯೋಜನೆಯಲ್ಲಿ ಶಾಲೆಗೆ ಹೋಗದ ಮಕ್ಕಳು ರಚನಾತ್ಮಕ ಕಲಿಕೆಯ ಅನುಭವಗಳನ್ನು ಹೊಂದಲು ಸಹಕಾರಿಯಾಯ್ತು. ಅವರಿಗೆ ಸಾಕ್ಷರತೆ, ವಿಜ್ಞಾನ, ಇತಿಹಾಸ ಮತ್ತು ಗಣಿತವನ್ನು ಕಲಿಸುವ ಭಿತ್ತಿಚಿತ್ರಗಳನ್ನು ಚಿತ್ರಿಸುವ ಗುರಿಯನ್ನು ನಾಗಿಯವರ ಫೌಂಡೇಶನ್ ಹೊಂದಿದೆ. ಗೋಡೆಗಳ ಮೇಲಿರುವ ಇವರು ಕೇವಲ ಅಲಂಕಾರಗಳಲ್ಲ ಅವು ಶಾಶ್ವತ ಪಠ್ಯಪುಸ್ತಕಗಳು ಇವುಗಳು ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ, ವಿಜ್ಞಾನ ಮತ್ತು ಇತಿಹಾಸ, ನೈರ್ಮಲ್ಯ ಮತ್ತು ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಜಾಗೃತಿಯನ್ನು ಕಲಿಸುತ್ತವೆ.
ಆಟವಾಡುವ ಬೀದಿಗಳಲ್ಲೇ ಶಿಕ್ಷಣ
ನಾಗಿ ಮಕ್ಕಳು ವಾಸಿಸುವ ಮತ್ತು ಆಟವಾಡುವ ಬೀದಿಗಳಲ್ಲೇ ಶಿಕ್ಷಣವನ್ನು ನೇರವಾಗಿ ಕಲಿಸಲು ಬಯಸುತ್ತಾರೆ. ಮೂಲಸೌಕರ್ಯಗಳ ಕೊರತೆ, ಬಾಲ ಕಾರ್ಮಿಕ ಪದ್ಧತಿ ಮತ್ತು ಬಡತನದಂತಹ ಸಾಂಪ್ರದಾಯಿಕ ಅಡೆತಡೆಗಳನ್ನು ದಾಟಿ ಮಕ್ಕಳು ಯಶಸ್ಸಿನತ್ತ ಮುನ್ನುಗಲು ನೆರವಾಗಿದ್ದಾರೆ. ಇವರಿಂದಾಗಿ ಕೆಲ ಪ್ರದೇಶಗಳಲ್ಲಿ ಅರ್ಧದಲ್ಲೇ ಶಾಲೆ ಬಿಡುವ ಮಕ್ಕಳ ಪ್ರಮಾಣ ಶೇ.50ಕ್ಕಿಂತ ಕಡಿಮೆ ಆಗಿದೆ.
ನಾಗಿ ಈ ಪ್ರಶಸ್ತಿಯನ್ನು ಪಡೆದ ಹತ್ತನೇ ವ್ಯಕ್ತಿಯಾಗಿದ್ದಾರೆ. ಕೀನ್ಯಾ, ಪ್ಯಾಲೇಸ್ತೇನ್, ಕೆನಡಾ ಮತ್ತು ಸೌದಿ ಅರೇಬಿಯಾದಾದ್ಯಂತ ದೂರದ ಹಳ್ಳಿಗಳು, ಸಂಘರ್ಷ ವಲಯಗಳು ಮತ್ತು ಸೌಲಭ್ಯ ವಂಚಿತ ಸಮುದಾಯಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಈ ಹಿಂದೆ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಬಹುಮಾನದ ಹಣವನ್ನು ಏನ್ ಮಾಡ್ತಾರೆ?
ಉಚಿತ ವೃತ್ತಿಪರ ತರಬೇತಿಯನ್ನು ನೀಡುವ ಸಂಸ್ಥೆಯನ್ನು ನಿರ್ಮಿಸಲು ತಮಗೆ ಸಿಕ್ಕ ಈ ಬಹುಮಾನದ ಹಣವನ್ನು ಬಳಸುವುದಾಗಿ ನಾಗಿ ಹೇಳಿದ್ದಾರೆ. ವಿಶೇಷವಾಗಿ ಸಾಂಪ್ರದಾಯಿಕ ಶೈಕ್ಷಣಿಕ ಮಾರ್ಗಗಳಿಂದ ಹೊರಗಿರುವ ಯುವಜನರಿಗೆ ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಬೆಂಬಲಿಸುವ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು. ಇದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿವೆ ಎಂದು ಅವರು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು 2022 ರಲ್ಲಿ ಪ್ರಕಟವಾದ ದಿ ಸ್ಲಮ್ ಕ್ವೀನ್ ಎಂಬ ಪುಸ್ತಕದ ಲೇಖಕಿಯೂ ಆಗಿದ್ದಾರೆ. ಇದು ಭಾರತದಾದ್ಯಂತ ಕೊಳೆಗೇರಿಗಳು ಮತ್ತು ಹಳ್ಳಿಗಳಲ್ಲಿ ಅವರ ಕೆಲಸವನ್ನು ಆಧರಿಸಿದ ಪುಸ್ತಕವಾಗಿದೆ.
