Crime Round Up 2021 : ಅಪರಾಧ ಜಗತ್ತನ್ನೇ ಬೆಚ್ಚಿ ಬೀಳಿಸಿದ ಪ್ರಕರಣಗಳು.. ಸಿಡಿಯಿಂದ ಕಾಯಿನ್‌ವರೆಗೆ!
ಬೆಂಗಳೂರು(ಡಿ. 28) 2021 ರ ಅಂತ್ಯಕ್ಕೆ ಬಂದು ನಿಂತಿದ್ದೇವೆ. 2021 ರಲ್ಲಿ ಅಪರಾಧ ಜಗತ್ತು (Crime Round Up 2021) ಸುಮ್ಮನೆ ಕುಳಿತಿರಲಿಲ್ಲ. ಅತ್ಯಾಚಾರ(Rape), ಸೆಕ್ಸ್ ಸಿಡಿ (Sex CD Scandal) ಜನಪ್ರತಿನಿಧಿ ಹತ್ಯೆ(Murder), ಘೋರ ಅಪಘಾತಗಳು (Road Accident) ಈ ವರ್ಷವನ್ನು ಕಾಡಿದವು. ಸಾಮೂಹಿಕ ಆತ್ಮಹತ್ಯೆ (Mass suicide) ಪ್ರಕರಣಗಳು ಕಾಡಿದವು. ರಾಸಲೀಲೆ ಪ್ರಕರಣ ರಾಜಕಾರಣದ (Karnataka Politics) ವಲಯದ ಮೇಲೂ ಪರಿಣಾಮ ಬೀರಿತು. ಒಂದು ಹಿನ್ನೋಟ ಇಲ್ಲಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕರ್ನಾಟಕದ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ಆರೋಪ ಮಾಡಿದ್ದರು. ಯುವತೊಂದಿಗೆ ಸಚಿವರು ರಾಸಲೀಲೆಯಲ್ಲಿ ತೊಡಗಿದ್ದಾರೆ ಎಂಬ ವಿಡಿಯೋ ರಿಲೀಸ್ ಆಗಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಇದಾದ ನಂತರ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು ಆಯಿತು. ಪ್ರಕರಣ ಎಸ್‌ಐಟಿಯ ಮೂಲಕ ವಿಚಾರಣೆ ಹಂತದಲ್ಲಿಯೇ ಇದೆ.
ಬಿಟ್‌ಕಾಯಿನ್ ಕೇಸ್
ಡ್ರಗ್ಸ್ ಪ್ರಕರಣದಲ್ಲಿ ಸೆರೆಸಿಕ್ಕಿದ್ದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಾಯಿ ಬಿಟ್ಟ ಒಂದಷ್ಟು ಮಾಹಿತಿಗಳು ಸರ್ಕಾರದ ಮಟ್ಟದಲ್ಲಿಯೇ ಹಲ್ ಚಲ್ ಸೃಷ್ಟಿಸಿದವು. ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ ಅದರಲ್ಲಿನ ಹಣ ಲಪಟಾಯಿಸಿ ಅದನ್ನು ಬಿಟ್ ಕಾಯಿನ್ ಆಗಿ ಪರಿವರ್ತನೆ ಮಾಖಡಿದ್ದಾನೆ. ಇದರಲ್ಲಿ ಕೆಲ ರಾಜಕೀಯ ನಾಯಕರ ಕೈವಾಡವೂ ಇದೆ.. ಸಹಕಾರವೂ ಇದೆ ಎಂಬ ಆರೋಪಗಳು ಕೇಳಿಬಂದವು. ಬಿಜೆಪಿ ಮತ್ತು ಕಾಂಗ್ರೆಸ್ ಮಡುವಿನ ವಾಕ್ ಸಮರಕ್ಕೆ ದೊಡ್ಡ ವೇದಿಕೆ ಇದಾಗಿತ್ತು. ಕೊನೆಯಲ್ಲಿ ಬೆಂಗಳೂರು ಪೊಲೀಸರೆ ಸ್ಪಷ್ಟನೆಯೊಂದನ್ನು ಬಿಡುಗಡೆ ಮಾಡಿದರು. ಈ ಪ್ರಕರಣ ಸಹ ತಾರ್ಕಿಕ ಅಂತ್ಯ ಕಂಡಿಲ್ಲ.
ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ಐವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಮನೆ ಮಾಲೀಕ ಶಂಕರ್ ವಿರುದ್ಧವೇ ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬ ನೇಣಿಗೆ ಶರಣಾಗಿತ್ತು. ಪ್ರಕರಣದಲ್ಲಿ ಮಗುವೊಂದು ಸಾವನ್ನಪ್ಪಿದ್ದು ಮಗುವನ್ನು ಹತ್ಯೆ ಮಾಡಲಾಗಿದೆ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿತ್ತು. ಇಂಥದ್ಧೆ ಆತ್ಮಹತ್ಯೆ ಪ್ರಕರಣ ಉಡುಪಿಯಿಂದಲೂ ವರದಿಯಾಗಿತ್ತು.
20 ದಿನಗಳ ನಂತರ ಮಾಸ್ ಸುಸೈಡ್ ರಹಸ್ಯ ಬಹಿರಂಗ.. ಅಪ್ಪನ ಹತ್ಯೆಗೆ ಸ್ಕೆಚ್!
ರೇಖಾ ಕದಿರೇಶ್ ಮರ್ಡರ್: ವೈಯಕ್ತಿಕ ಹಗೆತನಕ್ಕೆ ಮೂರು ವರ್ಷಗಳ ಹಿಂದೆ ರೇಖಾ ಅವರ ಪತಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದ ಕದಿರೇಶ್ ಅವರು ಕೂಡ ಹಾಡಹಗಲೇ ಕೊಲೆಯಾಗಿದ್ದರು. ಇದಾದ ಮೇಲೆ ಕಳೆದ ಜೂನ್ ನಲ್ಲಿ ರೇಖಾ ಕದಿರೇಶ್ ಹತ್ಯೆ ಅವರನ್ನು ಹತ್ಯೆ ಮಾಡಲಾಗಿತ್ತು. ಸಂಬಂಧಿಕರಿಂದಲೇ ಕೃತ್ಯ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಛಲವಾದಿಪಾಳ್ಯದ ಫ್ಲವರ್ ಗಾರ್ಡನ್‌ನಲ್ಲಿ ನೆಲೆಸಿದ್ದ ರೇಖಾ ಅವರು, ತಮ್ಮ ಮನೆ ಹತ್ತಿರದ ಗೃಹ ಕಚೇರಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆಗೆ ಸಿದ್ಧತೆ ನಡೆಸಿದ್ದರು. ಎಲ್ಲರ ಎದುರಿನಲ್ಲೇ ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದರು. ರೌಡಿಶೀಟರ್ ಮಾಲಾ, ಸೂರ್ಯ, ಪೀಟರ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಕಾಟನ್‌ಪೇಟೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ರೌಡಿಗಳ ಮೇಲೆ ದಾಳಿ: ಅಪರಾಧ ಪ್ರಕರಣಗಳ ತಡೆಗೆ ದಿಟ್ಟ ಕ್ರಮ ತೆಗೆದುಕೊಂಡಿದ್ದ ಬೆಂಗಳೂರು ಪೊಲೀಸರು ನಗರದ 8 ವಿಭಾಗಗಳಲ್ಲಿ ಕಳೆದ ಜುಲೈನಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿಶೀಟರ್ಗಳ ಮೇಲೆ ದಾಳಿ ಮಾಡಿದ್ದರು. ಮಾರಕಾಸ್ತ್ರಗಳು, ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದರು.
ಬಾಂಗ್ಲಾ ಯುವತಿ ಮೇಲೆ ಆತ್ಯಾಚಾರ: ಘೋರ ವಿಡಿಯೋವಂದು ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಬಾಂಗ್ಲಾದೇಶದಿಂದ ಯುವತಿಯರನ್ನು ಕರೆತಂದು ಅವರನ್ನು ವೇಶ್ಯಾವಾಟಿಕೆಗೆ ದೂಡುವ ಜಾಲ ಬಹಿರಂಗವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ರಾಮಮೂರ್ತಿನಗರ ಪೊಲೀಸರು 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಈ ಸುದ್ದಿ ಪ್ರತಿಧ್ವನಿಸಿತ್ತು. ಯುವತಿ ಮೇಲೆ ದೌರ್ಜನ್ಯ ಎಸಗಿದ್ದು ಅಲ್ಲದೇ ಆಕೆಯ ಗುಪ್ತಾಂಗಕ್ಕೆ ಹಾನಿ ಮಾಡಿದ್ದರು.
ಭೀಕರ ಅಪಘಾತಗಳು: ಗೋವಾ ಪ್ರವಾಸ ಹೋಗಲು ದಾವಣಗೆರೆಯಿಂದ ಹೊರಟಿದ್ದ ಸ್ನೇಹಿತೆಯರು ಸೆಲ್ಪೀ ತೆಗೆದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಧಾರವಾಡದಲ್ಲಿರುವ ಸ್ನೇಹಿತೆಯ ಮನೆಗೆ ತೆರಳಬೇಕಿದ್ದವರು ತಲುಪಲು ಕೆಲವೇ ಕಿಲೋಮೀಟರ್ ಇರುವಾಗ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಉದ್ಯಮಿಯರು, ಗೃಹಿಣಿಯರು, ವೈದ್ಯರು ಈ ಘೋರ ಅವಘಡದಲ್ಲಿ ಮೃತರಾಗಿದ್ದರು.
ಬೆಂಗಳೂರಿಗೆ ಅಪಘಾತದ ಆಘಾತ: ರಾಜಧಾನಿ ಬೆಂಗಳೂರನ್ನು ಭೀಕರ ಅಪಘಾತಗಳು ಕಾಡಿದವು. ಐಷಾರಾಮಿ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿತ್ತು. ಕೋರಮಂಗಲದಲ್ಲಿ ಆಡಿ ಕ್ಯೂ 3 ಕಾರು ಅಪಘಾತದಲ್ಲಿ ಹೊಸೂರು ಶಾಸಕರ ಮಗ ಸೇರಿ 7 ಜನ ಸಾವನ್ನಪ್ಪಿದ್ದರು. ಇದಾದ ಕೆಲವೇ ದಿನದಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ವೈಟ್ ಫೀಲ್ಡ್ ಮೇತ್ಸೇತುವೆ ಮೇಲೆ ನಿಂತಿದ್ದ ಇಬ್ಬರನ್ನು ಕಾರು ಬಲಿಪಡೆದಿತ್ತು.
ಸೆಪ್ಟೆಂಬರ್ ಅಗ್ನಿ ಅವಘಡ: ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ನಲ್ಲಾದ ಅಗ್ನಿ ಅವಘಡದಲ್ಲಿ ನೋಡನೋಡುತ್ತಿದ್ದಂತೆ ಮಹಿಳೆಯೊಬ್ಬರು ಭಸ್ಮವಾಗಿದ್ದರು. ಇದಾದ ಮೇಲೆ ಬಿಬಿಎಂಪಿ ನಿಯಮಗಳನ್ನು ಬಿಗಿ ಮಾಡಿತ್ತು.ವಿದೇಶದಿಂದ ಎರಡು ದಿನದ ಹಿಂದೆ ವಾಪಸ್ ಆಗಿದ್ದ ತಾಯಿ ಲಕ್ಷ್ಮೀದೇವಿ, ಪುತ್ರಿ ಭಾಗ್ಯರೇಖಾ ಪ್ರಾಣ ಕಳೆದುಕೊಂಡಿದ್ದರು. ವಿವಿ ಪುರಂ ಬಳಿಯ ಶ್ರೀ ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ ನಡೆದಿದ್ದ ಪಟಾಕಿ ಸ್ಫೋಟ ಪ್ರಕರಣದಲ್ಲಿ ಐವರು ಮೃತರಾಗಿದ್ದರು. ಹತ್ತಾರು ಮನೆಗಳು ಹಾಗೂ ಬೈಕ್‌ಗಳು ಹಾನಿಗೊಳಗಾಗಿದ್ದವು. ಬ್ಯಾಟರಾಯನಪುರ ವ್ಯಾಪ್ತಿಯ ಕಾರ್ಖಾನೆಯೊಂದರಲ್ಲಿ ನಡೆದ ಸಿಲಿಂಡರ್ ಸ್ಫೋಟ ಐವರು ಕಾರ್ಮಿಕರನ್ನು ಬಲಿ ಪಡೆದಿತ್ತು.
ಡ್ರಗ್ಸ್ ಪ್ರಕರಣಗಳು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಮತ್ತು ಸಂಜನಾ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಇನ್ನೊಂದು ಕಡೆ ಡ್ರಗ್ಸ್ ಜಾಲದ ಹಿಂದೆ ಬಿದ್ದ ಬೆಂಗಳೂರು ಪೊಲೀಸರು ಕೋಟ್ಯಂತರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದು ಅಲ್ಲದೇ ವಿದೇಶಿ ಪೆಡ್ಲರ್ ಗಳನ್ನು ಹೆಡೆಮುರಿ ಕಟ್ಟಿದರು. ವೀರ್ಯ ತಿಮಿಂಗಿಲದ ವಾಂತಿ ಅಂಬರ್ ಗ್ರೀಸ್ ಮಾರಾಟದ ಪ್ರಕರಣಗಳು ಬೆಂಗಳೂರು, ಉತ್ತರ ಕನ್ನಡ, ವಿಜಯನಗರದಿಂದ ವರದಿಯಾದವು.