ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್, ಗವಾಸ್ಕರ್ ಅಪರೂಪದ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್!
ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. ಈ ನಡುವೆ ಯಶಸ್ವಿ ಜೈಸ್ವಾಲ್ ದಿಗ್ಗಜ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಆತಿಥೇಯರ ಮೇಲೆ ಬಿಗಿಹಿಡಿತ ಸಾಧಿಸುವತ್ತ ದಾಪುಗಾಲಿಡುತ್ತಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಮುನ್ನಡೆ ಗಳಿಸಿದ ಟೀಂ ಇಂಡಿಯಾ, ಇದೀಗ ನಾಲ್ಕನೇ ದಿನದಾಟದ ಆರಂಭದಲ್ಲಿ ತನ್ನ ಮುನ್ನಡೆಯನ್ನು 300ಕ್ಕೆ ಹೆಚ್ಚಿಸಿಕೊಂಡಿದೆ.
ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 2000 ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ವಿರೇಂದ್ರ ಸೆಹ್ವಾಗ್ ಜತೆಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.
ಯಶಸ್ವಿ ಜೈಸ್ವಾಲ್ 21 ಟೆಸ್ಟ್ ಪಂದ್ಯದ 40 ಇನ್ನಿಂಗ್ಸ್‌ಗಳನ್ನಾಡಿ 2000 ಟೆಸ್ಟ್ ರನ್ ಪೂರೈಸುವಲ್ಲಿ ಯಶಸ್ವಿ ಜೈಸ್ವಾಲ್ ಸಫಲರಾಗಿದ್ದಾರೆ.
ಇದರ ಜತೆಗೆ ಯಶಸ್ವಿ ಜೈಸ್ವಾಲ್ ಭಾರತದ ಕ್ರಿಕೆಟ್ ದಿಗ್ಗಜರಾದ ವಿಜಯ್ ಹಜಾರೆ, ಗೌತಮ್ ಗಂಭೀರ್, ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್ ಅವರಂತಹ ಹೆಸರಿನಲ್ಲಿದ್ದ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
23 ವರ್ಷ 188 ದಿನದ ಯಶಸ್ವಿ ಜೈಸ್ವಾಲ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್ ಬಾರಿಸಿದ ಭಾರತದ ಎರಡನೇ ಅತಿಕಿರಿಯ ಬ್ಯಾಟರ್ ಎನ್ನುವ ಹಿರಿಮೆ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್ 20 ವರ್ಷ 330 ದಿನಗಳಿದ್ದಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.