ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ಜೇಮಿ ಸ್ಮಿತ್ ಭರ್ಜರಿ ಶತಕ ಸಿಡಿಸಿ 128 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅಜೇಯ 184 ರನ್ ಗಳಿಸಿದ ಸ್ಮಿತ್, ಕೆ.ಎಸ್. ರಣಜಿತ್‌ಸಿಂಗ್‌ಜೀ ಅವರ ದಾಖಲೆಯನ್ನು ಮುರಿದರು. 

ಬರ್ಮಿಂಗ್‌ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಇಲ್ಲಿನ ಎಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 587 ರನ್ ಗಳಿಸಿತು ಸರ್ವಪತನ ಕಂಡಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 407 ರನ್‌ಗಳಿಗೆ ಕುಸಿಯಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು. ಇದೆಲ್ಲದರ ಹೊರತಾಗಿ ಇಂಗ್ಲೆಂಡ್‌ನ ಬ್ಯಾಟರ್ ಜೇಮಿ ಸ್ಮಿತ್ ಒಂದು ಶತಮಾನದ ಹಿಂದಿನ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ಎದುರು ಭರ್ಜರಿ ಶತಕ ಸಿಡಿಸಿದ ಜೇಮಿ ಸ್ಮಿತ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 128 ವರ್ಷಗಳ ಹಳೆಯ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೇಮಿ ಸ್ಮಿತ್ ಹಾಗೂ ಹ್ಯಾರಿ ಬ್ರೂಕ್ ಆರನೇ ವಿಕೆಟ್‌ಗೆ 303 ರನ್‌ಗಳ ಅಮೂಲ್ಯ ಜತೆಯಾಟ ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡಿದ್ದು ಮಾತ್ರವಲ್ಲದೇ, ತಂಡದ ಮೊತ್ತವನ್ನು 400 ಗಡಿ ಡಾಟಿಸಲು ಅನುಕೂಲವಾಯಿತು.

ಜೇಮಿ ಸ್ಮಿತ್ 184 ರನ್‌ಗಳ ಅಜೇಯ ಇನ್ನಿಂಗ್ಸ್

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಮಿ ಸ್ಮಿತ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಕೊನೆಯವರೆಗೂ ಅಜೇಯರಾಗಿ ಉಳಿದರು. ಅವರು 207 ಎಸೆತಗಳಲ್ಲಿ 184 ರನ್ ಗಳಿಸಿದರು, ಇದರಲ್ಲಿ 21 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಸಿಡಿಸಿದರು. ಇದರೊಂದಿಗೆ ಅವರು ಇಂಗ್ಲೆಂಡ್ ಟೆಸ್ಟ್‌ನ 128 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಇದೀಗ ಜೇಮಿ ಸ್ಮಿತ್ ಇಂಗ್ಲೆಂಡ್ ಪರ ಏಳನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ತನ್ನದಾಗಿಸಿಕೊಂಡಿದ್ದಾರೆ

1897 ರಲ್ಲಿ ಕೆ.ಎಸ್.ರಣಜಿತ್‌ ಸಿಂಗ್‌ಜೀ ದಾಖಲೆ ಮುರಿದ ಸ್ಮಿತ್

ಜೇಮಿ ಸ್ಮಿತ್‌ಗಿಂತ ಮೊದಲು ಇಂಗ್ಲೆಂಡ್ ಪರ ಏಳನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಭಾರತದ ಕೆ ಎಸ್ ರಣಜಿತ್ ಸಿಂಗ್‌ಜೀ ಹೆಸರಿನಲ್ಲಿತ್ತು. 1897ರಲ್ಲಿ ಕೆ.ಎಸ್. ರಣಜಿತ್‌ಸಿಂಗ್‌ಜೀ ಆಸ್ಟ್ರೇಲಿಯಾ ವಿರುದ್ಧ 175 ರನ್ ಗಳಿಸಿದ್ದರು. ಈ ದಾಖಲೆ 128 ವರ್ಷಗಳ ಕಾಲ ಯಾರಿದಂಲೂ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಜೇಮಿ ಸ್ಮಿತ್ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಸ್ಥಿತಿ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಾಯಕ ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ದ್ವಿಶತಕ ಹಾಗೂ ಜೈಸ್ವಾಲ್ ಮತ್ತು ಜಡೇಜಾ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇನ್ನು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತದ ಹೊರತಾಗಿ ಆರನೇ ವಿಕೆಟ್‌ಗೆ ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ 303 ರನ್‌ಗಳ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬ್ರೂಕ್ 158 ರನ್ ಸಿಡಿಸಿದರೆ, ಸ್ಮಿತ್ 184 ರನ್ ಗಳಿಸಿ ಪೆವಿಲಿಯಬನ್ ಹಾದಿ ಹಿಡಿದರು. ಟೀಂ ಇಂಡಿಯಾ ಪರ ವೇಗಿ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ಮಿಂಚಿದರು. ಇಂಗ್ಲೆಂಡ್ 407 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು.

ಇದೀಗ ಎರಡನೇ ಇನ್ನಿಂಗ್ಸ್‌ ಅರಂಭಿಸಿರುವ ಟೀಂ ಇಂಡಿಯಾ, ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 64 ರನ್ ಬಾರಿಸಿದೆ. ಜೈಸ್ವಾಲ್ 28 ರನ್ ಗಳಿಸಿ ಜೋಶ್ ಟಂಗ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ 28 ಹಾಗೂ ಕರುಣ್ ನಾಯರ್ 7 ರನ್ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಒಂದು ವೇಳೆ ಇಂದು ಸ್ಪೋಟಕ ಬ್ಯಾಟಿಂಗ್ ನಡೆಸಿ 400+ ರನ್ ಟಾರ್ಗೆಟ್ ಕೊಟ್ಟರೇ, ಎಜ್‌ಬಾಸ್ಟನ್‌ನಲ್ಲಿ ಭಾರತ ಮೊದಲ ಗೆಲುವಿನ ರುಚಿ ನೋಡಬಹುದು.