ವಿರಾಟ್ ಕೊಹ್ಲಿ ಯಾಕೆ ಐಪಿಎಲ್ ಹರಾಜಿಗೆ ಬರ್ತಿಲ್ಲ? ಅಷ್ಟಕ್ಕೂ ಆರ್‌ಸಿಬಿಗೂ, ಕೊಹ್ಲಿಗೂ ಏನು ಸಂಬಂಧ?
ಬೆಂಗಳೂರು: ವಿರಾಟ್ ಕೊಹ್ಲಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿಲ್ಲ: ಐಪಿಎಲ್ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ಯಾವಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ಆಟವಾಡಿದ್ದಾರೆ. 2025 ರ ಐಪಿಎಲ್ ಮೆಗಾ ಹರಾಜು ಸಮೀಪಿಸುತ್ತಿದ್ದಂತೆ, ಕೊಹ್ಲಿಯನ್ನು ಉಳಿಸಿಕೊಳ್ಳಲಾಗುತ್ತದೆಯೇ ಅಥವಾ ಹರಾಜಿನಲ್ಲಿ ಇರಿಸಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಐಪಿಎಲ್ ಟೂರ್ನಿಗಳಲ್ಲಿ ಪ್ರತಿ ತಂಡವು ಹರಾಜಿನ ಮೂಲಕ ಆಟಗಾರರನ್ನು ಆಯ್ಕೆ ಮಾಡಿಕೊಂಡು ತಮ್ಮ ತಂಡದಲ್ಲಿ ಆಡಲು ಅವಕಾಶ ನೀಡುತ್ತದೆ. ಇದು ಪ್ರತಿ ಬಾರಿಯೂ ನಡೆಯುತ್ತದೆ. ಆದರೆ, ಕೆಲವು ಆಟಗಾರರು ಮಾತ್ರ ಐಪಿಎಲ್ ಹರಾಜಿಗೆ ಬರುವುದಿಲ್ಲ. ಯಾಕೆ ಅಂತ ಯಾರಾದ್ರೂ ಯೋಚಿಸಿದ್ದೀರಾ? ಅವರಲ್ಲಿ ವಿರಾಟ್ ಕೊಹ್ಲಿ ಪ್ರಮುಖರು. ಕಳೆದ 17 ವರ್ಷಗಳಿಂದ ಒಂದೇ ತಂಡಕ್ಕೆ ಅದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ಆಟವಾಡುತ್ತಿದ್ದಾರೆ.
ಪ್ರತಿ ಬಾರಿ ಹರಾಜು ಬಂದಾಗ ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳಲಾಗುತ್ತದೆ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರಿಗಿಂತ ವಿರಾಟ್ ಕೊಹ್ಲಿಯ ಸಂಬಳ ತುಂಬಾ ಕಡಿಮೆ. ಹೀಗಿದ್ದೂ ವಿರಾಟ್ ಕೊಹ್ಲಿ ಆರ್‌ಸಿಬಿ ಪರವೇ ಆಡುತ್ತಾ ಬಂದಿದ್ದಾರೆ.
ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿಗೆ 2014 ರಲ್ಲಿ 12.50 ಕೋಟಿ, 2018 ರಿಂದ 21 ರವರೆಗೆ ರೂ.17 ಕೋಟಿ, 22 ಮತ್ತು 23 ರಲ್ಲಿ ರೂ.15 ಕೋಟಿ ನೀಡಿದೆ. ಈಗ ಇದೆಲ್ಲಾ ಯಾಕೆ ಹೇಳ್ತಿದ್ದೀವಿ ಅಂದ್ರೆ 2025 ರ ಐಪಿಎಲ್ ಮೆಗಾ ಹರಾಜು ಹತ್ತಿರ ಬರ್ತಿದೆ.
ಐಪಿಎಲ್ ಮೆಗಾ ಹರಾಜಿಗಾಗಿ ಈಗಾಗಲೇ ಸಿದ್ದತೆಗಳು ಆರಂಭವಾಗಿವೆ. ಈ ಹರಾಜಿನ ಮುನ್ನ ಯಾವ ಆಟಗಾರರನ್ನು ಉಳಿಸಿಕೊಳ್ಳಲಾಗುತ್ತದೆ, ಯಾರನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಕುತೂಹಲ ಎಲ್ಲರ ಮನದಲ್ಲೂ ಮೂಡಿದೆ.
ಪ್ರತಿ ಬಾರಿ ಐಪಿಎಲ್ ಹರಾಜು ಬಂದಾಗ ವಿರಾಟ್ ಕೊಹ್ಲಿ ಮಾತ್ರ ಹರಾಜಿಗೆ ಬರುವುದಿಲ್ಲ. ಇದಕ್ಕೆ ಕಾರಣ ಅವರ ಪ್ರತಿಭೆ ಮತ್ತು ಖ್ಯಾತಿ. ಅದನ್ನೂ ಮೀರಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗಿನ ಕೊಹ್ಲಿಯ ಸಂಬಂಧ. ವಿರಾಟ್ ಕೊಹ್ಲಿ ಕೊನೆಯವರೆಗೂ ಆರ್‌ಸಿಬಿ ಪರವೇ ಆಡಲು ನಿರ್ಧರಿಸಿದ್ದಾರೆ.
ಹೌದು, 2008 ರಲ್ಲಿ ಆರಂಭವಾದ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಯುವ ಮತ್ತು ಬೆಳೆಯುತ್ತಿರುವ ಆಟಗಾರನಾಗಿ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಸೇರಿದರು. ಆಗ ವಿರಾಟ್ ಕೊಹ್ಲಿ ವಿಶ್ವಕಪ್ ಗೆದ್ದಿದ್ದ ಭಾರತದ ಅಂಡರ್ 19 ತಂಡದಲ್ಲಿದ್ದರು. ಆರ್‌ಸಿಬಿ ಅವರನ್ನು ನೇರವಾಗಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
2008 ರ ಐಪಿಎಲ್ ಹರಾಜಿನಲ್ಲಿ ಅಂಡರ್ 19 ಆಟಗಾರರಿಗೆ ಅವಕಾಶ ನೀಡಿರಲಿಲ್ಲ. ಆದಾಗ್ಯೂ, ಮೊದಲ ಆವೃತ್ತಿಗೆ ಮುನ್ನ ವಿರಾಟ್ ಕೊಹ್ಲಿಯನ್ನು ಡ್ರಾಫ್ಟ್ ಮೂಲಕ ಆಯ್ಕೆ ಮಾಡಲಾಯಿತು. ಅಂಡರ್ 19 ವಿಶ್ವಕಪ್‌ನಲ್ಲಿ ಅವರ ಆಟವನ್ನು ನೋಡಿ ಮೆಚ್ಚಿದ ಆರ್‌ಸಿಬಿ, ಇತರ ತಂಡಗಳು ಆಯ್ಕೆ ಮಾಡಿಕೊಳ್ಳುವ ಮುನ್ನವೇ ಅವರನ್ನು ಕರೆಸಿಕೊಂಡಿತು.
ಆದರೆ, ಐಪಿಎಲ್‌ನ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿದರು. 2ನೇ ಪಂದ್ಯದಲ್ಲಿ 23 ರನ್, 3ನೇ ಪಂದ್ಯದಲ್ಲಿ 13 ರನ್ ಗಳಿಸಿ ಔಟಾದರು. 4ನೇ ಪಂದ್ಯದಲ್ಲಿ 12 ರನ್ ಗಳಿಸಿದರು. ಮೊದಲ ಆವೃತ್ತಿಯಿಂದ ಹಿಡಿದು 17ನೇ ಆವೃತ್ತಿಯವರೆಗೆ ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ತಂಡದಲ್ಲಿ ಉಳಿಸಿಕೊಂಡಿದೆ.
ಇದರಿಂದಾಗಿ ವಿರಾಟ್ ಕೊಹ್ಲಿ ಹರಾಜಿಗೆ ಬಂದಿಲ್ಲ. ಇದು ಕೊಹ್ಲಿ ಮತ್ತು ಆರ್‌ಸಿಬಿ ನಡುವಿನ ಸ್ನೇಹ ಮತ್ತು ಅವರಿಬ್ಬರ ನಡುವಿನ ನಂಬಿಕೆಯನ್ನು ತೋರಿಸುತ್ತದೆ. ಐಪಿಎಲ್‌ನಲ್ಲಿ ಪ್ರತಿ ಹರಾಜಿನ ಮುನ್ನವೂ ನಿರ್ದಿಷ್ಟ ಸಂಖ್ಯೆಯ ಆಟಗಾರರನ್ನು ಪ್ರತಿ ತಂಡವು ಉಳಿಸಿಕೊಳ್ಳಬಹುದು. ಅದೇ ರೀತಿ ಬಿಡುಗಡೆ ಮಾಡಬಹುದು.
ಪ್ರತಿ ಬಾರಿ ಐಪಿಎಲ್ ಹರಾಜಿನ ಮುನ್ನವೂ ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ಉಳಿಸಿಕೊಳ್ಳುತ್ತದೆ. ಅವರ ಮೇಲೆ ನಂಬಿಕೆ ಇಟ್ಟಿರುವ ಆರ್‌ಸಿಬಿ ಅವರನ್ನು ರೀಟೈನ್ ರೂಪದಲ್ಲಿ ಉಳಿಸಿಕೊಳ್ಳುತ್ತಿದೆ. 2025 ರ ಐಪಿಎಲ್ ಹರಾಜಿನ ಮುನ್ನವೂ ಕೊಹ್ಲಿಯನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈವರೆಗೆ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 252 ಪಂದ್ಯಗಳನ್ನು ಆಡಿ 8 ಶತಕಗಳು, 55 ಅರ್ಧಶತಕ ಸೇರಿದಂತೆ ಒಟ್ಟು 8004 ರನ್ ಗಳಿಸಿದ್ದಾರೆ. ಇದರಲ್ಲಿ ಗರಿಷ್ಠ 113* ರನ್‌ಗಳು ಸೇರಿವೆ.
ಒಂದು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅವರು 2016 ರ ಐಪಿಎಲ್‌ನಲ್ಲಿ 973 ರನ್ ಗಳಿಸಿದ್ದರು. ಕಳೆದ ಆವೃತ್ತಿಯಲ್ಲಿ ಕೊಹ್ಲಿ 15 ಪಂದ್ಯಗಳಲ್ಲಿ ಆಡಿ 741 ರನ್ ಗಳಿಸಿದ್ದರು ಎಂಬುದು ಗಮನಾರ್ಹ.
ಆರ್‌ಸಿಬಿ ಮೇಲಿನ ವಿರಾಟ್ ಕೊಹ್ಲಿಯ ಬದ್ಧತೆ ಮತ್ತು ಅಭಿಮಾನಿಗಳೊಂದಿಗಿನ ಅವರ ಪ್ರೀತಿ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಹರಾಜಾಗದಂತೆ ನೋಡಿಕೊಂಡಿದೆ.