ಹರ್ಷಿತ್ ರಾಣಾಗೆ ಪದೇ ಪದೇ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿರುವುದೇಕೆ? ಕೊನೆಗೂ ಬಯಲಾಯ್ತು ಸತ್ಯ
ಬೆಂಗಳೂರು: ಟೀಂ ಇಂಡಿಯಾ ಯುವ ವೇಗದ ಬೌಲರ್ ಹರ್ಷಿತ್ ರಾಣಾ, ಭಾರತದ ಮೂರು ಮಾದರಿಯ ತಂಡದಲ್ಲಿ ಪದೇ ಪದೇ ಸ್ಥಾನ ಪಡೆಯುತ್ತಿದ್ದಾರೆ. ಇದು ಹಲವು ಮಾಜಿ ಕ್ರಿಕೆಟಿಗರ ಟೀಕೆಗೂ ಕಾರಣವಾಗಿದೆ. ಆದರೆ ನಿಜಕ್ಕೂ ಹರ್ಷಿತ್ ರಾಣಾ ಸ್ಥಾನ ಪಡೆಯುತ್ತಿರೋದೇಕೆ ಎನ್ನುವುದು ಬಯಲಾಗಿದೆ.

ಆಸೀಸ್ ಸರಣಿಗೆ ಹರ್ಷಿತ್ ರಾಣಾಗೆ ಮಣೆ
ಹರ್ಷಿತ್ ರಾಣಾ, ಆಸ್ಟ್ರೇಲಿಯಾ ಎದುರಿನ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ವ್ಯಾಪಕ ಟೀಕೆಯ ಹೊರತಾಗಿಯೂ ಹರ್ಷಿತ್ ರಾಣಾ ಭಾರತದ ಮೂರು ಮಾದರಿಯ ತಂಡದಲ್ಲಿ ನಿರಂತರವಾಗಿ ಸ್ಥಾನ ಪಡೆಯುತ್ತಾ ಬಂದಿದ್ದಾರೆ.
ಗಂಭೀರ್ ನೀಲಿಗಣ್ಣಿನ ಹುಡುಗ ರಾಣಾ
ಹರ್ಷಿತ್ ರಾಣಾ 2024ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಸರ್ಸ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಗೌತಮ್ ಗಂಭೀರ್ ಅವರ ನೀಲಿಗಣ್ಣಿನ ಹುಡುಗ ಎಂದೇ ಬಿಂಬಿತವಾಗಿರುವುದರಿಂದಲೇ ಹರ್ಷಿತ್ ರಾಣಾಗೆ ಪದೇ ಪದೇ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
2024ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ
ಹರ್ಷಿತ್ ರಾಣಾ 2024ರ ನವೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ 2025ರ ಜನವರಿಯಲ್ಲಿ ಭಾರತ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದಾದ ನಂತರ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ರಾಣಾ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಭಾರತ ಪರ ಸಾಧಾರಣ ಪ್ರದರ್ಶನ ನೀಡಿರುವ ರಾಣಾ
ಹರ್ಷಿತ್ ರಾಣಾ ಇದುವರೆಗೂ ಭಾರತ ಪರ 2 ಟೆಸ್ಟ್‌ನಿಂದ 4 ವಿಕೆಟ್, ಮೂರು ಟಿ20 ಪಂದ್ಯಗಳಿಂದ 10ರ ಎಕನಮಿಯಲ್ಲಿ 5 ವಿಕೆಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿ 10 ವಿಕೆಟ್ ಕಬಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಾಣಾ ಟ್ರೋಲ್
ಹರ್ಷಿತ್ ರಾಣಾ ಅವರನ್ನು ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆ ಮಾಡುತ್ತಿದ್ದಂತೆಯೇ ಹಲವು ಮಾಜಿ ಕ್ರಿಕೆಟಿಗರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.
ರಾಣಾ ಆಯ್ಕೆ ಸಮರ್ಥಿಸಿಕೊಂಡ ಅಶ್ವಿನ್
ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ರವಿಚಂದ್ರನ್ ಅಶ್ವಿನ್ ಹಾಗೂ ಆಕಾಶ್ ಚೋಪ್ರಾ, ಹರ್ಷಿತ್ ರಾಣಾ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟುಕೊಂಡ ರಾಣಾಗೆ ಅವಕಾಶ
ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಹರ್ಷಿತ್ ರಾಣಾ ಅವರ ಸಾಮರ್ಥ್ಯ, ಬ್ಯಾಟಿಂಗ್ ಸ್ಕಿಲ್, ಅವರ ಎತ್ತರ ಹಾಗೂ ವೇಗದ ಬೌಲಿಂಗ್ ಎಲ್ಲವನ್ನು ಗಮನಿಸಿ ಅವರಿಗೆ ಹೆಚ್ಚು ಹೆಚ್ಚು ಅವಕಾಶ ನೀಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.