- Home
- Sports
- Cricket
- ವೈಭವ್ ಸೂರ್ಯವಂಶಿ ಎನ್ನುವ ವಜ್ರವನ್ನು ಹುಡುಕಿದ್ದು ದ್ರಾವಿಡ್ ಅಲ್ಲ, ಲಕ್ಷ್ಮಣ್ ಕೂಡಾ ಅಲ್ಲ! ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಕಥೆ ಗೊತ್ತಾ?
ವೈಭವ್ ಸೂರ್ಯವಂಶಿ ಎನ್ನುವ ವಜ್ರವನ್ನು ಹುಡುಕಿದ್ದು ದ್ರಾವಿಡ್ ಅಲ್ಲ, ಲಕ್ಷ್ಮಣ್ ಕೂಡಾ ಅಲ್ಲ! ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಕಥೆ ಗೊತ್ತಾ?
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 13 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 1.10 ಕೋಟಿ ರುಪಾಯಿಗೆ ಖರೀದಿಸಿತ್ತು. ಇಂದು ವೈಭವ್ ಸೂರ್ಯವಂಶಿ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ವೈಭವ್ ಎನ್ನುವ ವಜ್ರವನ್ನು ಹುಡುಕಿದ್ದು ಯಾರು ಗೊತ್ತಾ?

ವೈಭವ್ ಸೂರ್ಯವಂಶಿ ಐಪಿಎಲ್‌ಗೆ ಸೆಲೆಕ್ಟ್ ಆಗಿದ್ದು ಹೇಗೆ?
2025ರ ಐಪಿಎಲ್ ಮೆಗಾ ಹರಾಜಿನಲ್ಲಿ 13 ವರ್ಷದ ಯುವ ಆಟಗಾರನಾಗಿದ್ದ ವೈಭವ್ ಸೂರ್ಯವಂಶಿಯನ್ನು ಬರೋಬ್ಬರಿ 1.10 ಕೋಟಿ ರುಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ವೈಭವ್ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವಾದರೂ, ಕೊನೆಗೂ ವೈಭವ್, ರಾಯಲ್ಸ್ ಪಾಲಾದರು.
ವೈಭವ್ ಸೂರ್ಯವಂಶಿ ಹುಡುಕಿದ್ದು ರಾಹುಲ್ ದ್ರಾವಿಡ್ ಅಲ್ಲ
ಕಳೆದೆರಡು ಸೀಸನ್‌ನಲ್ಲಿ ವೈಭವ್ ಸೂರ್ಯವಂಶಿ ಆಡುತ್ತಿರುವ ನಿರ್ಭೀತ ಬ್ಯಾಟಿಂಗ್ ಕಂಡ ಉಳಿದ ಫ್ರಾಂಚೈಸಿಗಳು ನಾವು ಆ ಹುಡುಗನನ್ನು ಖರೀದಿಸದೇ ಎಂತ ದೊಡ್ಡ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಡುತ್ತಿವೆ. ಆದರೆ ವೈಭವ್ ಸೂರ್ಯವಂಶಿಯನ್ನು 1.10 ಕೋಟಿಗೆ ಖರೀದಿಸಲು ಆಗಿನ ರಾಜಸ್ಥಾನ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್, ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಕಾರಣ ಎಂದೆಲ್ಲ ವರದಿಯಾಗಿತ್ತು. ಆದರೆ ಅದು ಸಂಪೂರ್ಣ ನಿಜವಲ್ಲ. ವೈಭವ್ ಆಯ್ಕೆಯ ಹಿಂದೆ ಸಮರ್ ಖಾದ್ರಿ ಎನ್ನುವವರ ಪಾತ್ರವಿತ್ತು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.
ಯಾರು ಈ ಸಮರ್ ಖಾದ್ರಿ?
ಬಿಹಾರ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಆಗಿದ್ದ ಸಮರ್ ಖಾದ್ರಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜಸ್ಥಾನ ರಾಯಲ್ಸ್ ತಂಡದ ಟ್ಯಾಲೆಂಟ್ & ಸ್ಕೌಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮರ್ ಖಾದ್ರಿ ಕೆಲಸ ಸಣ್ಣ ಸಣ್ಣ ನಗರಗಳಿಗೆ ಹೋಗಿ ರಾಜಸ್ಥಾನ ತಂಡಕ್ಕಾಗಿ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವುದಾಗಿತ್ತು. ವೈಭವ್ ಸೂರ್ಯವಂಶಿಯನ್ನು ಹುಡುಕಿದ್ದು ಮಾತ್ರವಲ್ಲದೇ ಆತನನ್ನು ಖರೀದಿಸಲೇಬೇಕು ಎಂದು ಪಟ್ಟು ಫ್ರಾಂಚೈಸಿ ಬಳಿ ಪಟ್ಟು ಹಿಡಿದಿದ್ದೇ ಈ ಸಮರ್ ಖಾದ್ರಿ.
ದೇಶಿ ಕ್ರಿಕೆಟ್‌ನಲ್ಲಿ ಬಿಹಾರ & ಜಾರ್ಖಂಡ್ ಪ್ರತಿನಿಧಿಸಿರುವ ಸಮರ್ ಖಾದ್ರಿ
ಸಮರ್ ಖಾದ್ರಿ ದೇಶಿ ಕ್ರಿಕೆಟ್‌ನಲ್ಲಿ ಜಾರ್ಖಂಡ್ ಹಾಗೂ ಬಿಹಾರ ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 45 ಪಂದ್ಯಗಳನ್ನಾಡಿದ್ದಾರೆ. ಇದಷ್ಟೇ ಅಲ್ಲದೇ ಲಿಸ್ಟ್ 'ಎ'ನಲ್ಲಿ 18 ಹಾಗೂ 17 ಟಿ20 ಪಂದ್ಯಗಳನ್ನೂ ಆಡಿದ್ದಾರೆ. 2009ರಲ್ಲಿ ಸಮರ್ ಖಾದ್ರಿ ಜಾರ್ಖಂಡ್ ಪರ ಮೊದಲ ಪಂದ್ಯವನ್ನಾಡಿದ್ದರು.
ವೈಭವ್ ಅವರನ್ನು ಸಮರ್ ಖಾದ್ರಿ ಹುಡುಕಿದ್ದು ಹೇಗೆ?
ಸಂದರ್ಶನವೊಂದರಲ್ಲಿ ರಾಜಸ್ಥಾನ ರಾಯಲ್ಸ್ ಸ್ಕೌಟ್ ಟೀಂ ಸದಸ್ಯರಾಗಿರುವ ಸಮರ್ ಖಾದ್ರಿ ಈ ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ವೈಭವ್ ಸುಮಾರು 11-12 ವರ್ಷದವರಿದ್ದಾಗ ಆತನ ಹೆಸರನ್ನು ಮೊದಲ ಬಾರಿಗೆ ತಾವು ಕೇಳಿದ್ದಾಗಿ ಹೇಳಿದ್ದಾರೆ. ಪಟನಾದಲ್ಲಿ ನಡೆದ ಒಂದು ಲೋಕಲ್ ಮ್ಯಾಚ್‌ನಲ್ಲಿ ವೈಭವ್ 50 ಎಸೆತಗಳಲ್ಲಿ ಆಗ ಶತಕ ಸಿಡಿಸಿದ್ದರು. ಇನ್ನು ಇಂಟ್ರೆಸ್ಟಿಂಗ್ ವಿಚಾರವೆಂದರೆ ಸಮರ್ ಖಾದ್ರಿ ಎದುರು ವೈಭವ್ ಆಗಲೇ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರಂತೆ.
ರಾಹುಲ್ ದ್ರಾವಿಡ್- ಸಂಜು ಸ್ಯಾಮ್ಸನ್‌ಗೂ ಇಷ್ಟವಾದ ವೈಭವ್ ಸೂರ್ಯವಂಶಿ:
ಇದಾದ ಬಳಿಕ ಸಮರ್ ಖಾದ್ರಿ, ರಾಜಸ್ಥಾನ ರಾಯಲ್ಸ್ ತಂಡದ ಹೈ ಫರ್ಫಾಮೆನ್ಸ್ ಡೈರೆಕ್ಟರ್ ಜುಬೀನ್ ಬರೋಚ್ ಅವರಿಗೆ ವೈಭವ್ ಸೂರ್ಯವಂಶಿಯ ಬಗ್ಗೆ ಹೇಳಿದರು. ಇದಾದ ಬಳಿಕ ಸೂರ್ಯವಂಶಿಯನ್ನು ರಾಯಲ್ಸ್ ಫ್ರಾಂಚೈಸಿ ಟ್ರಯಲ್ಸ್‌ಗೆ ಕರೆಸಲಾಯಿತು. ಟ್ರಯಲ್ಸ್‌ನಲ್ಲಿ ವೈಭವ್ ಸೂರ್ಯವಂಶಿ ವೇಗದ ಬೌಲಿಂಗ್‌ಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಗಮನ ಸೆಳೆದರು. ಇದು ಆಗಿನ ರಾಜಸ್ಥಾನ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಸಂಜು ಸ್ಯಾಮ್ಸನ್‌ಗೂ ಇಷ್ಟವಾಯಿತು. ಇದೇ ಕಾರಣಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಕಳೆದ ಸೀಸನ್ ಐಪಿಎಲ್‌ನಲ್ಲಿ ವೈಭವ್‌ಗೆ ರಾಜಸ್ಥಾನ ರಾಯಲ್ಸ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

