ಐಪಿಎಲ್ ಪಂದ್ಯದ ದಿನಗಳಲ್ಲಿ ಆಟಗಾರರು ಮತ್ತು ಸಿಬ್ಬಂದಿ ಸ್ಮಾರ್ಟ್ ಗ್ಲಾಸ್ ಬಳಸುವುದನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ ನಿಷೇಧಿಸಿದೆ. ಪಂದ್ಯದ ಪಾರದರ್ಶಕತೆ ಕಾಪಾಡಲು ಮತ್ತು ಲೈವ್ ಸ್ಟ್ರೀಮಿಂಗ್, ರೆಕಾರ್ಡಿಂಗ್‌ನಂತಹ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್‌ನಂತಹ ಪ್ರದೇಶಗಳಲ್ಲಿ ಇವುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಮುಂಬೈ: ಐಪಿಎಲ್ ಮ್ಯಾಚ್ ದಿನದಂದು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸ್ಮಾರ್ಟ್ ಗ್ಲಾಸ್‌ಗಳನ್ನು ಅಥವಾ ಯಾವುದೇ ರೀತಿಯ ಹೈಟೆಕ್ ಕನ್ನಡಕಗಳನ್ನು ಬಳಸಬಾರದು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಟೂರ್ನಿಯ ಪಾರದರ್ಶಕತೆ ಕಾಪಾಡಲು ಮತ್ತು ನಿಗದಿತ ಪ್ರದೇಶಗಳಲ್ಲಿ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಹಲವು ಟೆಕ್ ಕಂಪನಿಗಳು ಐಪಿಎಲ್ ಆಟಗಾರರು ಮತ್ತು ಫ್ರಾಂಚೈಸಿಗಳಿಗೆ ಸ್ಮಾರ್ಟ್ ಸನ್ ಗ್ಲಾಸ್‌ಗಳನ್ನು ಪ್ರಮೋಟ್ ಮಾಡುತ್ತಿರುವುದನ್ನು ಬಿಸಿಸಿಐ ಗಮನಿಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಡಲು ಸಾಮಾನ್ಯ ಕನ್ನಡಕದಂತೆ ಕಂಡರೂ, ಈ ಸ್ಮಾರ್ಟ್ ಗ್ಲಾಸ್‌ಗಳಲ್ಲಿರುವ ಫೀಚರ್‌ಗಳು ಟೂರ್ನಿ ಆಯೋಜಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಗ್ಲಾಸ್‌ಗಳನ್ನು ಬಳಸಿ ವಿಡಿಯೋ ರೆಕಾರ್ಡ್ ಮಾಡಬಹುದು, ಲೈವ್ ಸ್ಟ್ರೀಮ್ ಮಾಡಬಹುದು, ಮೆಸೇಜ್ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅಷ್ಟೇ ಅಲ್ಲ, ಮೊಬೈಲ್ ಡೇಟಾ ಅಥವಾ ವೈಫೈ ಮೂಲಕ ಆಡಿಯೋ-ವಿಡಿಯೋ ಕರೆಗಳನ್ನು ಕೂಡ ಮಾಡಬಹುದು. ಈ ಕಾರಣಗಳಿಂದ, ಐಪಿಎಲ್ ನಿಯಮಗಳ ಪ್ರಕಾರ ಈ ಗ್ಲಾಸ್‌ಗಳನ್ನು ಸಂವಹನ ಮತ್ತು ರೆಕಾರ್ಡಿಂಗ್ ಸಾಧನಗಳೆಂದು ಪರಿಗಣಿಸಲಾಗಿದೆ.

ಮ್ಯಾಚ್ ದಿನದಂದು ಹೊಸ ರೂಲ್ಸ್

ಹೊಸ ನಿಯಮದ ಪ್ರಕಾರ, ಮ್ಯಾಚ್ ದಿನದಂದು 'ಪ್ಲೇಯರ್ಸ್ & ಮ್ಯಾಚ್ ಆಫೀಶಿಯಲ್ಸ್ ಏರಿಯಾ' (PMOA) ದಲ್ಲಿ ಸ್ಮಾರ್ಟ್ ಗ್ಲಾಸ್ ಇಟ್ಟುಕೊಳ್ಳುವುದು ಅಥವಾ ಬಳಸುವುದು ಸಂಪೂರ್ಣ ನಿಷಿದ್ಧ. ಡ್ರೆಸ್ಸಿಂಗ್ ರೂಮ್, ಡಗೌಟ್ ಮತ್ತು ಆಟಗಾರರು ಕೂರುವ ಇತರೆ ಹೈ-ಸೆಕ್ಯುರಿಟಿ ಜಾಗಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಪಂದ್ಯದ ವೇಳೆ ಲೈವ್ ಮಾಹಿತಿ ರವಾನಿಸಲು ಅಥವಾ ಭದ್ರತಾ ಲೋಪ ಎಸಗಲು ಇಂತಹ ಸಾಧನಗಳನ್ನು ಬಳಸಬಹುದು ಎಂದು ಭದ್ರತಾ ವಿಭಾಗ ಆತಂಕ ವ್ಯಕ್ತಪಡಿಸಿದೆ.

ಈ ಅಪಾಯವನ್ನು ತಪ್ಪಿಸಲು, ಈಗಾಗಲೇ ನಿಷೇಧಿಸಲಾಗಿರುವ ಇತರ ಎಲೆಕ್ಟ್ರಾನಿಕ್ ಸಾಧನಗಳ ಸಾಲಿಗೆ ಸ್ಮಾರ್ಟ್ ಗ್ಲಾಸ್‌ಗಳನ್ನೂ ಸೇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸ್ಟೇಡಿಯಂಗೆ ಬಂದ ತಕ್ಷಣ ತಮ್ಮ ಸ್ಮಾರ್ಟ್ ಗ್ಲಾಸ್‌ಗಳನ್ನು 'ಸೆಕ್ಯುರಿಟಿ ಲೈಸೆನ್ ಆಫೀಸರ್' ಬಳಿ ಒಪ್ಪಿಸಬೇಕು. ಮೊಬೈಲ್ ಫೋನ್, ಸ್ಮಾರ್ಟ್ ವಾಚ್‌ಗಳ ಜೊತೆಗೆ ಈ ಗ್ಲಾಸ್‌ಗಳನ್ನು ಕೂಡ ನಿಗದಿತ ಪ್ರದೇಶಗಳಿಗೆ ಪ್ರವೇಶಿಸುವ ಮುನ್ನ ಡೆಪಾಸಿಟ್ ಮಾಡಬೇಕಾಗುತ್ತದೆ.