ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫೈನಲ್ ಟಿಕೆಟ್‌ಗಾಗಿ ಸೆಣಸಲಿವೆ. ಎರಡೂ ತಂಡಗಳು ತಮ್ಮ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಅವಲಂಬಿತವಾಗಿದ್ದು, ಬಲಿಷ್ಠ ಬೌಲಿಂಗ್ ಪಡೆಗಳನ್ನು ಹೊಂದಿವೆ. ಈ ಪಂದ್ಯದ ವಿಜೇತರು ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದ್ದಾರೆ.
ಮುಲ್ಲಾನ್‌ಪುರ್: ಶುಕ್ರವಾರ ಸಂಜೆ, ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಐಪಿಎಲ್‌ನ ಕ್ವಾಲಿಫೈಯರ್-2 ಪಂದ್ಯಕ್ಕೆ ವೇದಿಕೆ ಒದಗಿಸಲಿದ್ದು, ಸಮಬಲರ ನಡುವೆ ಫೈನಲ್ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ನಡೆಯಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ ಸೋತ ಗುಜರಾತ್ ಟೈಟಾನ್ಸ್ ಹಾಗೂ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ವಿರುದ್ಧ ಗೆದ್ದ ರಾಜಸ್ಥಾನ ರಾಯಲ್ಸ್, ಪರಸ್ಪರ ಮುಖಾಮುಖಿಯಾಗಲಿವೆ.
ಇತ್ತಂಡಗಳಲ್ಲಿ ಹಲವು ಸಾಮ್ಯತೆಗಳಿವೆ. ಎರಡೂ ತಂಡಗಳು ತಮ್ಮ ಅಗ್ರ-3 ಬ್ಯಾಟರ್‌ಗಳ ಮೇಲೆ ಹೆಚ್ಚು ಅವಲಂಬಿತಗೊಂಡಿವೆ. ಎರಡೂ ತಂಡಗಳ ಮಧ್ಯಮ ಕ್ರಮಾಂಕ ಅಷ್ಟೇನೂ ಬಲಿಷ್ಠವಾಗಿಲ್ಲ. ಎರಡೂ ಕಡೆಗಳಲ್ಲಿ ಪ್ರಚಂಡ ವೇಗಿಗಳಿದ್ದಾರೆ. ಆದರೂ, ಎರಡೂ ತಂಡಗಳು ಪಂದ್ಯವನ್ನು ನೋಡುವ ರೀತಿ ವಿಭಿನ್ನ.
ಸಾಯಿ ಸುದರ್ಶನ್- ಶುಭ್‌ಮನ್ ಗಿಲ್ ಜುಗಲ್ಬಂದಿ
ಹೊಡಿಬಡಿ ಯುಗದಲ್ಲೂ ಗುಜರಾತ್‌ನ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭ್‌ಮನ್ ಗಿಲ್, ರನ್ ಕಲೆಹಾಕಲು ಸುರಕ್ಷಿತ ಮಾರ್ಗಗಳನ್ನು ಅನುಸರಿಸುತ್ತಾರೆ. ಈ ಋತುವಿನಲ್ಲಿ ಪವರ್-ಪ್ಲೇನಲ್ಲಿ ಗುಜರಾತ್‌ನ ರನ್‌ರೇಟ್ 9.66 ಇದ್ದು, ಪ್ಲೇ-ಆಫ್‌ಗೇರಿದ ತಂಡಗಳ ಪೈಕಿ ಇದು ಕನಿಷ್ಠ. ಸುರಕ್ಷಿತ ಮೊತ್ತಕ್ಕೆ ತೃಪ್ತಿಪಡುವ ಗುಜರಾತ್, ತನ್ನ ಬೌಲರ್‌ಗಳ ಮೇಲೆ ಹೆಚ್ಚು ವಿಶ್ವಾಸವಿಟ್ಟು ಪಂದ್ಯ ಗೆಲ್ಲುತ್ತಾ ಬಂದಿದೆ.
ಆದರೆ, ರಾಜಸ್ಥಾನ ತಂಡದಲ್ಲಿ 15 ವರ್ಷದ ‘ರನ್ನಾಸುರ’ನೊಬ್ಬನಿದ್ದಾನೆ. ಆತನ ಹೆಸರು ವೈಭವ್ ಸೂರ್ಯವಂಶಿ. ಆತ ತಾನೆದುರಿಸುವ ಪ್ರತಿ ಎಸೆತವನ್ನೂ ಬೌಂಡರಿ, ಸಿಕ್ಸರ್‌ಗಟ್ಟಲು ಪ್ರಯತ್ನಿಸುತ್ತಾನೆ. ಈ ಆವೃತ್ತಿಯಲ್ಲಿ ಸುದರ್ಶನ್ ಹಾಗೂ ಗಿಲ್ ಸೇರಿ ಒಟ್ಟು 59 ಸಿಕ್ಸರ್ ಬಾರಿಸಿದ್ದಾರೆ. ವೈಭವ್ ಒಬ್ಬರೇ ದಾಖಲೆಯ 65 ಸಿಕ್ಸರ್ ಚಚ್ಚಿದ್ದಾರೆ.
ವೈಭವ್‌ರ ಆರಂಭಿಕ ಜೊತೆಗಾರ ಯಶಸ್ವಿ ಜೈಸ್ವಾಲ್ ಲಯದಲ್ಲಿ ಇಲ್ಲದಿದ್ದರೂ ರಾಜಸ್ಥಾನ ಮೊದಲ 6 ಓವರಲ್ಲಿ 11.66ರ ರನ್‌ರೇಟ್ ಹೊಂದಿದೆ. ಇದು ಈ ಆವೃತ್ತಿಯಲ್ಲಿ ಗರಿಷ್ಠ.
ಬೌಲಿಂಗ್ ವಿಭಾಗದಲ್ಲಿ ಗುಜರಾತ್, ಕಗಿಸೋ ರಬಾಡ ಹಾಗೂ ಮೊಹಮದ್ ಸಿರಾಜ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ರಬಾಡ ಪವರ್-ಪ್ಲೇನಲ್ಲೇ 3 ಓವರ್ ಹಾಕುತ್ತಿದ್ದಾರೆ. ರಶೀದ್ ಖಾನ್ ನಿರೀಕ್ಷಿತ ಪ್ರದರ್ಶನ ತೋರದೆ ಇರುವುದು, ತಂಡಕ್ಕೆ ದೊಡ್ಡ ಹಿನ್ನಡೆ ಆಗಿ ಪರಿಣಮಿಸಿದೆ. ಕುಲ್ವಂತ್‌ರನ್ನು ಹೊರಗಿಟ್ಟು, ಸ್ಪಿನ್ನರ್ ಮಾನವ್ ಸುಥಾರ್ ಅಥವಾ ಸಾಯಿ ಕಿಶೋರ್‌ರನ್ನು ಆಡಿಸಬಹುದು.
ಮತ್ತೊಂದೆಡೆ, ರಾಜಸ್ಥಾನ ಜೋಫ್ರಾ ಆರ್ಚರ್ ಮೇಲೆ ಸಂಪೂರ್ಣ ಭಾರ ಹಾಕಲಿದೆ. ಬ್ರಿಜೇಶ್ ಶರ್ಮಾ, ನ್ಯಾಂಡ್ರೆ ಬರ್ಗರ್, ಸುಶಾಂತ್ ಮಿಶ್ರಾ ಹಾಗೂ ಯಶ್ ಪೂಂಜಾ, ಆರ್ಚರ್‌ಗೆ ಉತ್ತಮ ಬೆಂಬಲ ನೀಡಬೇಕಿದೆ.
ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡುವ ನಿರೀಕ್ಷೆ ಇದ್ದು, ಫೈನಲ್‌ನಲ್ಲಿ ಆರ್‌ಸಿಬಿಗೆ ಎದುರಾಗುವ ತಂಡ ಯಾವುದು ಎನ್ನುವ ಕುತೂಹಲ ಅಭಿಮಾನಿಗಳದ್ದು.
ಪಿಚ್ ರಿಪೋರ್ಟ್
ಎಲಿಮಿನೇಟರ್ ಪಂದ್ಯಕ್ಕೆ ಬಳಸಿದ ಪಿಚ್ ಅನ್ನೇ ಈ ಪಂದ್ಯಕ್ಕೂ ಆಯ್ಕೆ ಮಾಡಲಾಗಿದೆ. ಹೀಗಾಗಿ ಮತ್ತೊಂದು ದೊಡ್ಡ ಸ್ಕೋರ್ ನಿರೀಕ್ಷೆ ಮಾಡಬಹುದು. 3 ದಿನಗಳಲ್ಲಿ 2ನೇ ಬಾರಿಗೆ ಪಿಚ್ ಬಳಕೆಯಾಗಲಿರುವ ಕಾರಣ, 2ನೇ ಇನ್ನಿಂಗ್ಸ್ ಹೊತ್ತಿಗೆ ಪಿಚ್ ಗುಣಮಟ್ಟ ಕಳೆದುಕೊಳ್ಳಬಹುದು. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡಿದರೆ ಅಚ್ಚರಿಯಿಲ್ಲ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಶದ್ ಖಾನ್/ಸಾಯಿ ಕಿಶೋರ್, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್(ವಿಕೆಟ್ ಕೀಪರ್), ರಿಯಾನ್ ಪರಾಗ್(ನಾಯಕ), ಡೊನೊವನ್ ಪೆರೆರಿಯಾ, ದಶುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಂದ್ರೆ ಬರ್ಗರ್, ಯಶ್ ರಾಜ್ ಪೂಂಜ, ಬ್ರಿಜೇಶ್ ಶರ್ಮಾ, ಸುಶಾಂತ್ ಮಿಶ್ರಾ/ತುಷಾರ್ ದೇಶಪಾಂಡೆ/ರವಿ ಬಿಷ್ಣೋಯಿ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್


