ರಾಹುಲ್ ದ್ರಾವಿಡ್ ಅವರ ಅಸಾಮಾನ್ಯ ಪ್ರತಿಭಾ ಶೋಧನೆಯನ್ನು ಈ ಲೇಖನ ವಿವರಿಸುತ್ತದೆ. 13 ವರ್ಷದ ವೈಭವ್ ಸೂರ್ಯವಂಶಿ ಮತ್ತು 41 ವರ್ಷದ ಪ್ರವೀಣ್ ತಾಂಬೆ ಅವರಂತಹ ವಯಸ್ಸಿನ ಹಂಗಿಲ್ಲದೆ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡಿದ ಅವರ ನಿರ್ಧಾರಗಳ ಹಿಂದಿನ ಕಥೆಯನ್ನು ಇದು ತೆರೆದಿಡುತ್ತದೆ.
- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್
ಅಲ್ಲಿದ್ದ ಜನ ನಕ್ಕಿದ್ದರು ಆ ದಿನ. ಇದೇನು ಮಾಡಲು ಹೊರಟಿದ್ದಾರೆ ದ್ರಾವಿಡ್..? 13 ವರ್ಷದ ಹುಡುಗನನ್ನು ಐಪಿಎಲ್’ನಲ್ಲಿ ಆಡಿಸುವ ನಿರ್ಧಾರ..?
ವಯಸ್ಸಿನಲ್ಲಿ ದ್ರಾವಿಡ್ ಅವರ ಸಣ್ಣ ಮಗನಿಗಿಂತಲೂ ಅವನು ಚಿಕ್ಕವನು. ಇನ್ನೂ SSLC ಮೆಟ್ಟಿಲು ಹತ್ತಿಲ್ಲ ಆಗಲೇ ಐಪಿಎಲ್..? ‘ಇದೆಂಥಾ ಹುಚ್ಚಾಟ’ ಎಂದು ಕುತೂಹಲದ ಕಣ್ಣುಗಳಿಂದ ದ್ರಾವಿಡ್ ಅವರತ್ತ ನೋಡುತ್ತಿದ್ದಂತೆ, 1 ಕೋಟಿ 10 ಲಕ್ಷಕ್ಕೆ ಹುಡುಗನನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ದ್ರಾವಿಡ್ ಖರೀದಿ ಮಾಡಿಯಾಗಿತ್ತು. ಅದೇ ಐಪಿಎಲ್ ಇತಿಹಾಸದ best bid ಆಗಲಿದೆ ಎಂಬ ಸಣ್ಣ ಸುಳಿವೂ ದ್ರಾವಿಡ್ ಅವರಿಗೆ ಇರಲಿಲ್ಲ.
ಹಾಲುಗಲ್ಲದ ಹುಡುಗನನ್ನು ಕರೆತಂದ ರಾಹುಲ್ ದ್ರಾವಿಡ್
‘ಇವನು ಸಾಮಾನ್ಯ ಹುಡುಗನಲ್ಲ’ ಎಂಬುದಂತೂ ದ್ರಾವಿಡ್ ಅವರಿಗೆ ಗೊತ್ತಾಗಿತ್ತು. ಐಪಿಎಲ್ ಹರಾಜಿಗೂ ಮುನ್ನ ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ಸ್ ತಂಡದ ಟ್ರಯಲ್ಸ್'ಗೆ ಕರೆಸಿದ್ದರು ದ್ರಾವಿಡ್. ಎದುರಿಸಿದ ಮೊದಲ ಎಸೆತವನ್ನೇ ಮೈದಾನದಿಂದ ಮಾರುದ್ದ ದೂರ ಬಾರಿಸಿದ್ದ. ಅದು ಸೀದಾ ಹೋಗಿ ಬಿದ್ದದ್ದು ರಾಜಸ್ಥಾನ ತಂಡದ ಬಾಗಿಲಿಗೆ. ಬಾಗಿಲು ತೆರೆದಿತ್ತು. ಬಾಗಿಲಲ್ಲಿ ನಿಂತಿದ್ದ ಕೋಚ್ ರಾಹುಲ್ ದ್ರಾವಿಡ್ ಹಾಲುಗಲ್ಲದ ಹುಡುಗನನ್ನು ರಾಯಲ್ಸ್ ಕುಟುಂಬಕ್ಕೆ ಬರಮಾಡಿಕೊಂಡಿದ್ದರು.
ಅಲ್ಲಿಂದ ಒಂದೂವರೆ ವರ್ಷದಲ್ಲಿ ವೈಭವ್ ಸೂರ್ಯವಂಶಿ ಎಲ್ಲಿ ನಿಂತಿದ್ದಾನೆ ನೋಡಿ. ಈ ವರ್ಷದ ಐಪಿಎಲ್'ನಲ್ಲಿ 680 ರನ್. ಇದರಲ್ಲಿ 610 ರನ್'ಗಳು ಬಂದಿರುವುದು ಕೇವಲ 120 ಎಸೆತಗಳಲ್ಲಿ. ಅಂದರೆ ಬೌಂಡರಿ+ಸಿಕ್ಸರ್'ಗಳಿಂದಲೇ (220+390) 600+ ರನ್. 15 ಪಂದ್ಯಗಳ ಅಂತ್ಯಕ್ಕೆ 243 ಸ್ಟ್ರೈಕ್'ರೇಟ್.
Unreal consistency ಇದು. ಅತಿರಥ ಮಹಾರಥಿಗಳನ್ನೆಲ್ಲಾ ಮೀರಿಸಿ ಆರೆಂಜ್ ಕ್ಯಾಪ್'ಗೆ ಈ ಹುಡುಗನೇ ಒಡೆಯ. 15 ಪಂದ್ಯಗಳಲ್ಲಿ ಒಮ್ಮೆಯೂ ವೈಭವ್ ಸೂರ್ಯವಂಶಿ 15 ಓವರ್'ವರೆಗೆ ಆಡಿಯೇ ಇಲ್ಲ. 10 ಓವರ್'ಗಳಿಗಿಂತ ಹೆಚ್ಚು ಕ್ರೀಸ್'ನಲ್ಲಿ ನಿಂತದ್ದು ಎರಡು ಬಾರಿ ಅಷ್ಟೇ. ಉಳಿದ 13 ಪಂದ್ಯಗಳಲ್ಲಿ 8 ಓವರ್'ಗಳ ಒಳಗೇ ಮುಗಿದಿದೆ ಅವನ ಆಟ. ಅಷ್ಟರಲ್ಲಿ ಇಡೀ ಕ್ರೀಡಾಂಗಣವನ್ನೇ ನಡುಗಿಸಿ ಬಿಟ್ಟಿದ್ದಾನೆ. ಇವನೇನಾದರೂ ಪೂರ್ತಿ 20 ಓವರ್ ಆಡಿ ಬಿಟ್ಟರೆ ಕಥೆಯೇನು? ಅವನು ಟಿ20 ಇನ್ನಿಂಗ್ಸ್’ನಲ್ಲಿ 200 ರನ್ ಮೇಲೆ ಗುರಿ ಇಟ್ಟಿದ್ದಾನೆ. ಖಂಡಿತಾ ಗುರಿ ಮುಟ್ಟುತ್ತಾನೆ.
ರಾಹುಲ್ ದ್ರಾವಿಡ್ ಅವರ ನಿರ್ಧಾರ ಸರಿಯಿದೆ. ಹುಡುಗನೆಂದು ನೋಡದೆ ಅವರು ಸಮರ್ಥನನ್ನೇ ಬೆನ್ನು ತಟ್ಟಿದ್ದರು. ಕಳೆದ ವರ್ಷ ಐಪಿಎಲ್ ಶತಕ ಬಾರಿಸಿದ ನಂತರ ಸೂರ್ಯವಂಶಿಗೆ ದ್ರಾವಿಡ್ ಒಂದು ಮಾತು ಹೇಳುತ್ತಾರೆ. ‘‘ಈ ಬಾರಿ ಶತಕ ಹೊಡೆದಿದ್ದೀಯಾ..? ಆದರೆ ನಿನ್ನಿಂದ ಸಿಕ್ಸರ್’ಗಳನ್ನು ಚಚ್ಚಿಸಿಕೊಂಡ ಬೌಲರ್’ಗಳು ಮುಂದಿನ ವರ್ಷ ತಯಾರಿ ಮಾಡಿಯೇ ಬರುತ್ತಾರೆ.. ನಿನ್ನ ತಯಾರಿ ಅವರಿಗಿಂತ ಒಂದು ಹೆಜ್ಜೆ ಮುಂದಿರಬೇಕು’’ ಅದು ರಾಹುಲ್ ದ್ರಾವಿಡ್ ಅವರ ಅನುಭವದ ಮಾತು.
ದಿಗ್ಗಜ ದ್ರಾವಿಡ್ ಮಾತನ್ನು ಹುಡುಗ ಅದೆಷ್ಟು ಗಂಭೀರವಾಗಿ ತೆಗೆದುಕೊಂಡನೆಂದರೆ ಬೌಲರ್’ಗಳಿಗಿಂತ ಒಂದಲ್ಲ, 10 ಹೆಜ್ಜೆ ಮುಂದಿದ್ದಾನೆ ಸೂರ್ಯವಂಶಿ.
ತಮ್ಮ ಇಬ್ಬರು ಗಂಡು ಮಕ್ಕಳಿಗಿಂತಲೂ ಚಿಕ್ಕವನಾದ ವೈಭವ್ ಸೂರ್ಯವಂಶಿಯ ಮೇಲೆ ರಾಹುಲ್ ದ್ರಾವಿಡ್ ಅವರಿಗೆ ವಿಶೇಷ ಕಾಳಜಿ. ಕಾರಣ, ಐಪಿಎಲ್’ನಲ್ಲಿ ಅವರೇ ಬೆಳಕಿಗೆ ತಂದ ಪ್ರತಿಭೆಯವನು.
ವೈಭವ್ ಸೂರ್ಯವಂಶಿ ಬಗೆಗಿನ ಶುದ್ದ ಸುಳ್ಳು
ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದನ್ನು ನೋಡಿದೆ. ‘‘ಸೂರ್ಯವಂಶಿಯ ಆಟವನ್ನು ದ್ರಾವಿಡ್ ಅವರ ಮಗ ನೋಡಿದ್ದನಂತೆ.. ಅದನ್ನು ತಂದೆಗೆ ಹೇಳಿದ್ದನಂತೆ. ಆ ನಂತರ ಸೂರ್ಯವಂಶಿಯ ಮೇಲೆ ದ್ರಾವಿಡ್ ಅವರ ಕಣ್ಣು ಬಿತ್ತಂತೆ..’’ ಶುದ್ಧಸುಳ್ಳು.
ವೈಭವ್ ಸೂರ್ಯವಂಶಿಯ ಬಗ್ಗೆ ದ್ರಾವಿಡ್ ಅವರಿಗೆ ಮೊದಲ ಬಾರಿ ಹೇಳಿದವರು ವಿವಿಎಸ್ ಲಕ್ಷ್ಮಣ್. ಎರಡು ವರ್ಷಗಳ ಹಿಂದೆ. ಭಾರತ ಜ್ಯೂನಿಯರ್ ತಂಡ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂಡರ್-19 one-day Challenger tournament ಆಡುತ್ತಿತ್ತು. ಭಾರತ ಪರ ಆಟಕ್ಕಿಳಿದ ಹದಿಮೂರರ ಹುಡುಗ ಸೂರ್ಯವಂಶಿ 58 ಎಸೆತಗಳಲ್ಲಿ ಶತಕ ಬಾರಿಸಿ ಬಿಟ್ಟ. ಆತ ಬಾರಿಸಿದ ಒಂದೊಂದು ಸಿಕ್ಸರ್’ಗಳನ್ನು ನೋಡಿ ಹುಬ್ಬೇರಿಸಿ ಬಿಟ್ಟರು ವಿವಿಎಸ್ ಲಕ್ಷ್ಮಣ್. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್, ಆಗ ಭಾರತ ಅಂಡರ್-19 ತಂಡದ ಜೊತೆಗಿದ್ದರು.
‘ಇವನು ಪೋರನಲ್ಲ, ಪ್ರಚಂಡ ಪೋರ’ ಎಂದುಕೊಂಡವರೇ ಪಂದ್ಯ ಮುಗಿದ ನಂತರ ರಾಹುಲ್ ದ್ರಾವಿಡ್ ಅವರಿಗೆ ಕರೆ ಮಾಡುತ್ತಾರೆ. ಆಗ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಹೆಡ್ ಕೋಚ್. ‘‘ಹೀಗೊಬ್ಬ ಹುಡುಗನಿದ್ದಾನೆ, ನೋಡು’’ ಎನ್ನುತ್ತಾರೆ ಲಕ್ಷ್ಮಣ್. ಹೊಸ ಹುಡುಗರನ್ನು ಸದಾ ಬೆರಗುಗಣ್ಣುಗಳಿಂದ ನೋಡುವ ಮಹಾಗುರು ದ್ರಾವಿಡ್ ತಡಮಾಡದೆ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ಶಿಬಿರಕ್ಕೆ ಕರೆಸುತ್ತಾರೆ. ಅವನ ಪ್ರವೇಶ ಹೇಗಿತ್ತು ಎಂದರೆ ಮೊದಲ ಎಸೆತವನ್ನೇ ಕ್ರೀಡಾಂಗಣದಿಂದ ಹೊರಗೆ ಅಟ್ಟಿ ಬಿಡುತ್ತಾನೆ. ಹುಡುಗ ರೆಡಿ ಇದ್ದ.. 2025ರ ಐಪಿಎಲ್ ಟೂರ್ನಿಯಲ್ಲಿ ಸೂರ್ಯವಂಶಿಯನ್ನು ಐಪಿಎಲ್ ಅಖಾಡಕ್ಕೆ ಇಳಿಸಿಯೇ ಬಿಡುತ್ತಾರೆ ದ್ರಾವಿಡ್. ಸಣ್ಣವನ ಕಣ್ಣುಗಳಲ್ಲಿದ್ದ ಧೈರ್ಯ ದೊಡ್ಡದು. ಅದು ‘ಯಾರೇ ಎದುರು ನಿಂತರೂ ಸಿಕ್ಸರ್ ಬಾರಿಸಿ ಬಿಡುವೆ’ ಎಂಬ ಹುಂಬ ಧೈರ್ಯ.. ಹಾಗೇ ಮಾಡಿ ಬಿಟ್ಟ ಸೂರ್ಯವಂಶಿ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ. ಜೀವನದ ಮೊಟ್ಟ ಮೊದಲ ಐಪಿಎಲ್ ಮ್ಯಾಚ್. ಎದುರಲ್ಲಿದ್ದ ಬೌಲರ್ ಸ್ವಿಂಗ್ ಚತುರ ಶಾರ್ದೂಲ್ ಠಾಕೂರ್. ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್’ಗೆ ಅಟ್ಟಿ ಬಿಟ್ಟ. ಅದು ಭಾರತೀಯ ಕ್ರಿಕೆಟ್’ನಲ್ಲಿ ಹೊಸ ಪ್ರತಿಭೆಯೊಂದು ಉದಯಿಸಿದ ಕ್ಷಣ.
ಈಗ ವೈಭವ್ ಸೂರ್ಯವಂಶಿ ಮೈದಾನಕ್ಕಿಳಿಯುವಾಗ ಇಡೀ ಕ್ರೀಡಾಂಗಣಕ್ಕೆ ಕ್ರೀಡಾಂಗಣವೇ ತುದಿಗಾಲಲ್ಲಿ ನಿಂತಿರುತ್ತದೆ. ಔಟಾಗಿ ಮರಳುವಾಗ ಇಡೀ ಕ್ರೀಡಾಂಗಣದವೇ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿರುತ್ತದೆ. "ಶಹಬ್ಬಾಸ್ ಮಗನೇ" ಎನ್ನದವರಿಲ್ಲ. ಹೇಗಿದೆ ನೋಡಿ 15 ವರ್ಷದ ಹುಡುಗನ Aura..
ಇದು 15 ವರ್ಷದ ಹುಡುಗನ ಕಥೆಯಾದರೆ, 2013ರಲ್ಲಿ ಮುಂಬೈನಿಂದ 41 ವಯಸ್ಸಿನ ಹಿರಿಯನೊಬ್ಬನನ್ನು ಕರೆ ತಂದು ರಾಜಸ್ಥಾನ ರಾಯಲ್ಸ್ ಪರ ಆಡಿಸುತ್ತಾರೆ ದ್ರಾವಿಡ್. ಅಲ್ಲಿವರೆಗೆ ಮುಂಬೈನ ಮಹಾನುಭಾವರ ಕಣ್ಣಿಗೆ ಬೀಳದ ಪ್ರತಿಭೆ ದ್ರಾವಿಡ್ ಕಣ್ಣಿಗೆ ಬೀಳುತ್ತಿದ್ದಂತೆ 41ನೇ ವರ್ಷದಲ್ಲಿ ಐಪಿಎಲ್'ಗೆ ಪದಾರ್ಪಣೆ ಮಾಡುವ ಅವಕಾಶ. ಆ ಕ್ರಿಕೆಟಿಗ ಮರುವರ್ಷ ಮುಂಬೈ ಪರ ಚೊಚ್ಚಲ ರಣಜಿ ಪಂದ್ಯವಾಡುತ್ತಾನೆ. ಮುಂದೆ ಆತನ ಜೀವನ ಸಿನಿಮಾ ಆಗಿ ಬಿಡುತ್ತದೆ. ಆ ಕ್ರಿಕೆಟಿಗನ ಹೆಸರು ಪ್ರವೀಣ್ ತಾಂಬೆ.
ದ್ರಾವಿಡ್'ರಂಥಾ ಕೋಚ್'ಗಳ ಕೈಗೆ ಅಧಿಕಾರ ಸಿಕ್ಕಿದರೆ 14ನೇ ವಯಸ್ಸಿಗೆ ವೈಭವ್ ಸೂರ್ಯವಂಶಿಯೂ ಐಪಿಎಲ್ ಆಡುತ್ತಾನೆ.. 41ನೇ ವಯಸ್ಸಿಗೆ ಪ್ರವೀಣ್ ತಾಂಬೆಗೂ ಅದೃಷ್ಟ ಖುಲಾಯಿಸುತ್ತದೆ. ರಾಹುಲ್ ದ್ರಾವಿಡ್ ಶ್ರೇಷ್ಠರೆನಿಸಿಕೊಳ್ಳುವುದು ಇಂತಹ ಕಾರಣಗಳಿಗೆ.


