ಪ್ರೀತಿ ಜಿಂಟಾ; ಹುತಾತ್ಮ ಸೈನಿಕರ ಹೆಂಡತಿ, ಮಕ್ಕಳಿಗೆ 1.10 ಕೋಟಿ ರೂ. ದೇಣಿಗೆ
ಬಾಲಿವುಡ್ ನಟಿ ಪ್ರೀತಿ ಜಿಂಟಾ ಹುತಾತ್ಮ ಸೈನಿಕರ ಪತ್ನಿಯರು ಮತ್ತು ಮಕ್ಕಳಿಗೆ 1.10 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ. ಈ ಹಣವನ್ನು ಪಂಜಾಬ್ ಕಿಂಗ್ಸ್ ಇಲೆವೆನ್‌ನ CSR ಉಪಕ್ರಮದಡಿಯಲ್ಲಿ ನೀಡಲಾಗಿದ್ದು, ಸೈನಿಕರ ತ್ಯಾಗಕ್ಕೆ ಎಂದಿಗೂ ಪರಿಹಾರವಿಲ್ಲ ಎಂದು ನಟಿ ಹೇಳಿದ್ದಾರೆ.

ಬಾಲಿವುಡ್ ನಟಿ ಮತ್ತು ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಇಲೆವೆನ್‌ನ ಮಾಲೀಕ ಪ್ರೀತಿ ಜಿಂಟಾ ತಮ್ಮ ಒಳ್ಳೆಯ ಕೆಲಸಗಳಿಂದ ಜನರ ಮನ ಗೆಲ್ಲುತ್ತಲೇ ಇದ್ದಾರೆ. ದೇಶದ ವಿಷಯ ಬಂದಾಗ ಎಂದೂ ಹಿಂದೆ ಸರಿದವರಲ್ಲ. ಈಗ ಮತ್ತೊಮ್ಮೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಪತ್ನಿಯರು ಮತ್ತು ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹುತಾತ್ಮ ಸೈನಿಕರ ಪತ್ನಿಯರು ಹಾಗೂ ಮಕ್ಕಳಿಗೆ ನೆರವಾಗಲೆಂದು 1.10 ಕೋಟಿ ರೂ. ಹಣವನ್ನು ನಿಡುತ್ತಿದ್ದಾರೆ. ಜೊತೆಗೆ, ಸೈನಿಕರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ನಟಿ ಹೇಳಿದ್ದಾರೆ.
ಪ್ರೀತಿ ಜಿಂಟಾರಿಂದ ಹುತಾತ್ಮ ಸೈನಿಕರ ಮಡದಿಯರಿಗೆ ದಾನ:
ವರದಿಗಳ ಪ್ರಕಾರ, ಪ್ರೀತಿ ಜಿಂಟಾ ಅವರು ಹುತಾತ್ಮ ಸೈನಿಕರ ಪತ್ನಿಯರು ಮತ್ತು ಅವರ ಮಕ್ಕಳಿಗೆ ಸುಮಾರು 1.10 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ. ಈ ಹಣವನ್ನು ತಮ್ಮ ತಂಡ ಪಂಜಾಬ್ ಕಿಂಗ್ಸ್ ಇಲೆವೆನ್‌ನ CSR (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಉಪಕ್ರಮದಡಿಯಲ್ಲಿ ಸೌತ್ ವೆಸ್ಟರ್ನ್ ಕಮಾಂಡ್‌ನ ಸೈನ್ಯದ ವಿಧವೆಯರ ಕಲ್ಯಾಣ ಸಂಘಕ್ಕೆ (AWWA) ನೀಡಿದ್ದಾರೆ. ಈ ಹಣವನ್ನು ಅವರು ಸಂಪೂರ್ಣವಾಗಿ ಜೀವನ ಮತ್ತು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿದ್ದಾರೆ.
ಸೈನಿಕರ ತ್ಯಾಗಕ್ಕೆ ಪರಿಹಾರವಿಲ್ಲ - ಪ್ರೀತಿ ಜಿಂಟಾ
ಈ ಕುರಿತು ಮಾತನಾಡಿದ ನಟಿ ಪ್ರೀತಿ ಜಿಂಟಾ, 'ನಮ್ಮ ಸಶಸ್ತ್ರ ಪಡೆಗಳ ಧೈರ್ಯಶಾಲಿ ಕುಟುಂಬಗಳಿಗೆ ಸಹಾಯ ಮಾಡುವುದು ಗೌರವ ಮತ್ತು ಜವಾಬ್ದಾರಿ ಆಗಿದೆ. ನಮ್ಮ ಸೈನಿಕರು ಮಾಡುವ ತ್ಯಾಗಕ್ಕೆ ಎಂದಿಗೂ ಪರಿಹಾರವಿಲ್ಲ. ಆದರೆ, ಅವರ ಕುಟುಂಬಗಳ ಜೊತೆ ನಿಂತು ಮುಂದೆ ಬರಲು ಸಹಾಯ ಮಾಡಬಹುದು. ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ದೇಶ ಮತ್ತು ಅದರ ಧೈರ್ಯಶಾಲಿ ರಕ್ಷಕರೊಂದಿಗೆ ನಾವು ನಿಲ್ಲುತ್ತೇವೆ' ಎಂದಿದ್ದಾರೆ.
ಫೌಜಿ ಮಗಳು ನಾನು - ಪ್ರೀತಿ ಜಿಂಟಾ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ನಡೆಸಿದಾಗ ಪ್ರೀತಿ ಜಿಂಟಾ ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಾವು ಫೌಜಿ ಮಗಳು ಎಂದು ಹೇಳಿಕೊಂಡಿದ್ದರು. 'ಕೆಲವೊಮ್ಮೆ ಫೌಜಿ ಕುಟುಂಬಗಳು ಸೈನಿಕರಿಗಿಂತ ಬಲಿಷ್ಠರು ಎಂದು ನನಗೆ ಅನಿಸುತ್ತದೆ.
ದೇಶಕ್ಕಾಗಿ ಮಗನನ್ನು ತ್ಯಾಗ ಮಾಡುವ ತಾಯಂದಿರನ್ನು ನೋಡಿದ್ದೇನೆ. ಪತಿಯನ್ನು ಮತ್ತೆ ನೋಡಲಾಗದ ಪತ್ನಿಯರನ್ನು ನೋಡಿದ್ದೇನೆ. ತಂದೆ ಅಥವಾ ತಾಯಿಯ ಮಾರ್ಗದರ್ಶನವಿಲ್ಲದೆ ಬೆಳೆಯುವ ಮಕ್ಕಳನ್ನು ನೋಡಿದ್ದೇನೆ. ಇದು ಅವರ ವಾಸ್ತವ. ಇತರರ ಅಭಿಪ್ರಾಯಗಳ ಹೊರತಾಗಿಯೂ ಇದು ಎಂದಿಗೂ ಬದಲಾಗುವುದಿಲ್ಲ. ಆದ್ದರಿಂದ ದೇವರು ಅವರ ಮೇಲೆ ಕೃಪೆ ತೋರಲಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರೀತಿ ಜಿಂಟಾ ಮುಂದೆ 'ಲಾಹೋರ್ 1947' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ನಾಯಕರಾಗಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.