- Home
- Sports
- Cricket
- ವಿರೇಂದ್ರ ಸೆಹ್ವಾಗ್ ಬ್ಯಾಟಿಂಗ್‌ಗೆ ಪಾಕಿಸ್ತಾನವೇ ನಡುಗುತ್ತಿತ್ತು! ಪಾಕ್ ದಿಗ್ಗಜ ಇಂಜಮಾಮ್ ಉಲ್-ಹಕ್ ಹೇಳಿಕೆ ವೈರಲ್
ವಿರೇಂದ್ರ ಸೆಹ್ವಾಗ್ ಬ್ಯಾಟಿಂಗ್‌ಗೆ ಪಾಕಿಸ್ತಾನವೇ ನಡುಗುತ್ತಿತ್ತು! ಪಾಕ್ ದಿಗ್ಗಜ ಇಂಜಮಾಮ್ ಉಲ್-ಹಕ್ ಹೇಳಿಕೆ ವೈರಲ್
ಬೆಂಗಳೂರು: ವಿರೇಂದ್ರ ಸೆಹ್ವಾಗ್ ಭಾರತ ಕ್ರಿಕೆಟ್ ಕಂಡ ಅತ್ಯಂತ ಅಪಾಯಕಾರಿ ಆರಂಭಿಕ ಬ್ಯಾಟರ್‌ಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ವೀರೂ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಇಂಜಮಾಮ್ ಉಲ್-ಹಕ್ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟೀಂ ಇಂಡಿಯಾ ವಿಸ್ಪೋಟಕ ಆರಂಭಿಕ ಬ್ಯಾಟರ್ ಆಗಿದ್ದ ಸೆಹ್ವಾಗ್
ಮುಲ್ತಾನಿನ ಸುಲ್ತಾನ್ ಖ್ಯಾತಿಯ ವಿರೇಂದ್ರ ಸೆಹ್ವಾಗ್, ಮೈದಾನದಲ್ಲಿರುವಷ್ಟೂ ಕಾಲವೂ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಲೇ ಇದ್ದರು. ಬಾಲ್ ಇರುವುದೇ ದಂಡಿಸುವುದಕ್ಕೆ ಎನ್ನುವುದು ಸೆಹ್ವಾಗ್ ಬ್ಯಾಟಿಂಗ್ ಮಂತ್ರವಾಗಿತ್ತು. ಒಂದೂವರೆ ದಶಕಗಳ ಕಾಲ ಅಕ್ಷರಶಃ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಸೆಹ್ವಾಗ್, ಇಂದಿಗೂ ಹಲವು ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
ಪಾಕ್ ಎದುರೇ ಚೊಚ್ಚಲ ಟೆಸ್ಟ್ ತ್ರಿಶತಕ ಸಿಡಿಸಿದ್ದ ಸೆಹ್ವಾಗ್
ಇನ್ನು ಸೆಹ್ವಾಗ್ ಅವರಿಗೆ ಪಾಕಿಸ್ತಾನದ ಬೌಲರ್‌ಗಳನ್ನು ದಂಡಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಪಾಕಿಸ್ತಾನ ಎದುರು ಮುಲ್ತಾನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ತ್ರಿಶತಕ ಸಿಡಿಸಿ ಸಂಭ್ರಮಿಸಿದ್ದರು. ಅಂದಹಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ ಸಿಡಿಸಿದ ಭಾರತದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆ ಸೆಹ್ವಾಗ್ ಅವರದ್ದು.
ಸೆಹ್ವಾಗ್ ನಿರ್ಭೀತ ಬ್ಯಾಟಿಂಗ್ ಬಗ್ಗೆ ಇಂಜಿ ಮಾತು
ಇನ್ನು ವಿರೇಂದ್ರ ಸೆಹ್ವಾಗ್ ಅವರ ನಿರ್ಭೀತ ಬ್ಯಾಟಿಂಗ್ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಇಂಜಮಾನ್ ಉಲ್-ಹಕ್ ಅವರು ಆಡಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ವೈರಲ್ ಆಗಿವೆ. ಸೆಹ್ವಾಗ್ ಅವರನ್ನು ಕಟ್ಟಿ ಹಾಕುವುದು, ಅವರ ವಿರುದ್ದ ರಣತಂತ್ರ ಹೆಣೆಯುವುದು ಅಸಾಧ್ಯವಾದ ಮಾತಾಗಿತ್ತು ಎಂದು ಇಂಜಿ ಹೇಳಿದ್ದಾರೆ.
ಸೆಹ್ವಾಗ್ ಯಾವ ಬೌಲರ್‌ಗೂ ಮರ್ಯಾದೆ ಕೊಡುತ್ತಿರಲಿಲ್ಲ
ಸೆಹ್ವಾಗ್ ತಾವು ಯಾವುದೇ ಗೌರವ ಇಟ್ಟುಕೊಳ್ಳುತ್ತಿರಲಿಲ್ಲ, ಎದುರಾಳಿ ಬೌಲರ್‌ಗಳಿಗೂ ಮರ್ಯಾದೆ ಕೊಡುತ್ತಿರಲಿಲ್ಲ. ಅವರ ಎದುರು ನಾಯಕತ್ವ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು. ಯಾಕೆಂದರೆ ಟೆಸ್ಟ್ ಕ್ರಿಕೆಟ್‌ನ ಮೊದಲ ದಿನ ಮೊದಲ ಗಂಟೆಯಲ್ಲೇ ಐದು ಫೀಲ್ಡರ್‌ಗಳು ಮೈದಾನದ ಗಡಿ ಕಾಯುವಂತ ಪರಿಸ್ಥಿತಿಯನ್ನು ಸೆಹ್ವಾಗ್ ನಿರ್ಮಾಣ ಮಾಡುತ್ತಿದ್ದರು.
ತಮ್ಮ ನಾಯಕತ್ವದ ಬಗ್ಗೆಯೇ ಅನುಮಾನ ಶುರುವಾಗಿತ್ತು ಎಂದ ಇಂಜಿ
ಇದನ್ನೆಲ್ಲ ನೋಡುವಾಗ ನಾನೇ ಕ್ಯಾಪ್ಟನ್ನಾ ಎನ್ನುವ ಬಗ್ಗೆ ನನಗೆ ಅನುಮಾನ ಶುರುವಾಗುವಂತೆ ಅವರು ಬ್ಯಾಟ್ ಮಾಡುತ್ತಿದ್ದರು. ಮಿಡ್ ಆನ್ ಫೀಲ್ಡರ್ ಅನ್ನು ಬೌಂಡರಿ ಬಳಿ ಕಳಿಸಿ ಅಲ್ಲಿ ಸಿಕ್ಸರ್ ಬಾರಿಸೊಲ್ಲ ಅಂದುಕೊಂಡರೇ, ಅದೇ ಜಾಗದಲ್ಲಿ ವೀರೂ ಸಿಕ್ಸರ್ ಬಾರಿಸುತ್ತಿದ್ದರು. ನನ್ನ ನಿರ್ಧಾರ ಸರಿಯೋ ತಪ್ಪೋ ಎನ್ನುವುದು ನನಗೆ ಅನುಮಾನ ಶುರುವಾಗುತ್ತಿತ್ತು. ಸೆಹ್ವಾಗ್ ಅಷ್ಟು ಅಪಾಯಕಾರಿ ಬ್ಯಾಟರ್ ಆಗಿದ್ದರು ಎಂದು ಇಂಜಿ ಹೇಳಿದ್ದಾರೆ.
ಸೆಹ್ವಾಗ್ ಬ್ಯಾಟಿಂಗ್‌ಗೆ ಪಾಕಿಸ್ತಾನ ಕಂಗಾಲು!
ನಮ್ಮ ಪಾಕಿಸ್ತಾನ ತಂಡದ ಎದುರು ಸೆಹ್ವಾಗ್, ದ್ವಿಶತಕ, ತ್ರಿಶತಕಗಳನ್ನು ಅನಾಯಾಸವಾಗಿ ಬಾರಿಸುತ್ತಿದ್ದರು. ಹೀಗಾಗಿ ಸೆಹ್ವಾಗ್ ಅವರಿಗೆ ಫೀಲ್ಡಿಂಗ್ ಸೆಟ್ ಮಾಡುವುದು ನಾಯಕನಾಗಿ ನನಗೆ ತುಂಬಾ ಕಷ್ಟದ ಕೆಲಸವಾಗಿತ್ತು ಎಂದು ಆ ದಿನಗಳ ಸುಂದರ ಕ್ಷಣಗಳನ್ನು ಇಂಜಮಾಮ್ ಉಲ್-ಹಕ್ ಖಾಸಗಿ ಚಾನೆಲ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

