U19 ಏಷ್ಯಾಕಪ್ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿ ಚಾಂಪಿಯನ್ ಆಗಿದೆ. ಗೆಲುವಿನ ಬಳಿಕ ಭಾರತದ ಆಟಗಾರರ ಸಂಭ್ರಮಾಚರಣೆಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಟೀಕಿಸಿದ್ದಾರೆ. ಅವರು ಈ ಬಗ್ಗೆ ಟ್ವೀಟ್ ಮಾಡಿ, ಸಚಿನ್ ತೆಂಡುಲ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ನಿನ್ನೆ U19 ಏಷ್ಯಾಕಪ್ ಫೈನಲ್ ಪಂದ್ಯ ನಡೆಯಿತು. ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಿದ್ದವು. ಈ ರಣ ರೋಚಕ ಪಂದ್ಯವನ್ನು ಗೆದ್ದು ಭಾರತ ಚಾಂಪಿಯನ್ ಆಯಿತು. ಬೆನ್ನಲ್ಲೇ, ಟೀಂ ಇಂಡಿಯಾದ ಹುಡುಗರು ಕುಣಿದು ಕುಪ್ಪಳಿಸಿದರು. ಗೆಲುವಿನ ಉತ್ಸಾಹದಲ್ಲಿ ಮೈದಾನದಲ್ಲಿ ಹೆಮ್ಮೆಯಿಂದ ಬೀಗಿದರು. ಇದು ಪಾಕಿಸ್ತಾನಿ ಮಾಜಿ ಕ್ರಿಕೆಟಿಗನ ಕೆಂಗಣ್ಣಿಗೆ ಕಾರಣವಾಗಿದೆ.
ಟೀಂ ಇಂಡಿಯಾದ ಹುಡುಗರು ಗೆಲುವನ್ನು ಸಂಭ್ರಮಿಸುತ್ತಿರುವ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಯೂಸುಫ್.. ನಮ್ಮ ಯುವ ಆಟಗಗಾರರನ್ನು ಭಾರತದ ಆಟಗಾರರು ಗೌರವದಿಂದ ನೋಡಿಕೊಳ್ಳಬೇಕಾಯಿತು ಎಂದು ಟೀಕಿಸಿದ್ದಾರೆ. ಅಲ್ಲದೇ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಹೆಸರನ್ನು ಎಳೆದು ತಂದಿದ್ದಾರೆ.
ಏನಂದ್ರು ಯೂಸುಫ್?
ಟ್ವೀಟ್ ಮಾಡಿರುವ ಯೂಸುಫ್.. #U19WorldCup ಅಂತ್ಯಗೊಂಡಿದೆ. ಮತ್ತು ಎಂದಿನಂತ ಭಾರತವು ಒತ್ತಡದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಇದು ಎರಡೂ ತಂಡಗಳಿಗೆ ಮತ್ತು ಭವಿಷ್ಯದ ತಾರೆಗಳಾಗುವ ಸಾಮರ್ಥ್ಯವಿರುವ ಆಟಗಾರರಿಗೆ ಉತ್ತಮ ಕಲಿಕೆಯ ವೇದಿಕೆಯಾಗಿತ್ತು. #INDU19vPAKU19.
ಇಲ್ಲಿ ನಾನು ಹೇಳಲು ಇಷ್ಟಪಡುವ ವಿಷಯ ಏನೆಂದರೆ.. ನೀವು ಕ್ರೀಡೆಗಳನ್ನ ಆಡುವಾಗ ನೀವು ನಿಮ್ಮ ದೇಶವನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಬದಲಾಗಿ ನೀವು ನಿಮ್ಮ ಪಾಲನೆ, ಮೌಲ್ಯಗಳು ಮತ್ತು ನಿಮ್ಮ ಪೋಷಕರು ಬಾಲ್ಯದಲ್ಲಿ ನಿಮಗೆ ಕಲಿಸಿದ ನೀತಿಗಳನ್ನು ಪ್ರತಿನಿಧಿಸುತ್ತೀರಿ.
ಆದ್ದರಿಂದ.. ಗೆಲುವು ಅಥವಾ ಸೋಲಿನಲ್ಲಿ ಗೌರವಯುತವಾಗಿ ಮತ್ತು ಸಂಯಮದಿಂದಿರಿ. ಫಲಿತಾಂಶ ಏನೇ ಇರಲಿ. ನೀವು ಹೇಗೆ ವರ್ತಿಸುತ್ತೀರಿ ಎಂಬುದರಲ್ಲಿ ನಿಜವಾದ ಕ್ರೀಡಾ ಮನೋಭಾವವು ಪ್ರತಿಫಲಿಸುತ್ತದೆ. ದಂತಕಥೆಗಳಾದ ಸಚಿನ್ ಮತ್ತು ಸಯೀದನ್ವರ್ ಇದಕ್ಕೆ ಮಾದರಿ ಎಂದಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೊದಲು ಪಾಕಿಸ್ತಾನ ಬ್ಯಾಟಿಂಗ್ ಮಾಡಿ 337 ರನ್ಗಳಿಸಿತ್ತು. 338 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡವು ಅಂತಿಮ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ 339/9 ತಲುಪಿತು. ಅಂತಿಮ ಓವರ್ನ ಅಂತಿಮ ಬಾಲ್ನಲ್ಲಿ ಟೀಂ ಇಂಡಿಯಾ ಸ್ಟಾರ್ ಮೋಹಿತ್ ಗೆಲುವಿನ ಬೌಂಡರಿ ಬಾರಿಸಿದರು. ಬೆನ್ನಲ್ಲೇ ಭಾರತೀಯ ಆಟಗಾರರು ಮೈದಾನಕ್ಕೆ ಧಾವಿಸಿದರು. ಕೆಲವರು ವಿಕೆಟ್ ಕೀಪರ್ ಹಮ್ಜಾ ಜಹೂರ್ ಸೇರಿದಂತೆ ಪಾಕಿಸ್ತಾನಿ ಆಟಗಾರರ ಕಡೆಗೆ ಅನುಚಿತ ಸನ್ನೆಗಳನ್ನು ಮಾಡಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತೀಯ ಸಹಾಯಕ ಸಿಬ್ಬಂದಿ ಸದಸ್ಯರು ಮಧ್ಯಪ್ರವೇಶಿಸಿದರು.
338 ರನ್ಗಳ ಗುರಿ ಬೆನ್ನಟ್ಟುತ್ತಿದ್ದ ಭಾರತ 42ನೇ ಓವರ್ನಲ್ಲಿ 252 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮನಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ 9ನೇ ವಿಕೆಟ್ಗೆ 57 ರನ್ಗಳ ಪಾಲುದಾರಿಕೆ ನೀಡಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಮನಾಲ್ 32 ಎಸೆತಗಳಲ್ಲಿ 47 ರನ್ ಗಳಿಸಿದರು. ಟೀಂ ಇಂಡಿಯಾ 302 ರನ್ಗಳಿಸಿದ್ದಾಗ ಭಾರತ ಮನಾಲ್ ವಿಕೆಟ್ ಕಳೆದುಕೊಳ್ತು. ಆಗ ಭಾರತದ ಗೆಲುವಿಗೆ 36 ರನ್ಗಳ ಅಗತ್ಯ ಇತ್ತು.
ಜೊತೆಗೆ ಟೀಂ ಇಂಡಿಯಾ ಬಳಿ ಒಂದು ವಿಕೆಟ್ ಮಾತ್ರ ಇತ್ತು. ಮನಾಲ್ ಔಟ್ ಆದ ಬಳಿಕ ಟೂರ್ನಿಯ ಮೊದಲ ಪಂದ್ಯವಾಡಿದ ಚಿಗುರುಪತಿ ವೆಂಕಟ 8 ಎಸೆತಗಳಲ್ಲಿ ಅಜೇಯ 11 ರನ್ ಗಳಿಸಿ ಮೋಹಿತ್ಗೆ ಬೆಂಬಲ ನೀಡಿದರು. ಭಾರತಕ್ಕೆ ಅಂತಿಮ ಓವರ್ನಲ್ಲಿ ಎಂಟು ರನ್ಗಳು ಬೇಕಾಗಿದ್ದವು. ಕೊನೆಯ ಎಸೆತದಲ್ಲಿ ಸಮೀಕರಣವು ಮೂರಕ್ಕೆ ಇಳಿಯಿತು. ಮೋಹಿತ್ ಲೆಗ್-ಸ್ಪಿನ್ನರ್ ಅಹ್ಮದ್ ಹುಸೇನ್ ಅವರ ಲಾಂಗ್-ಆಫ್ ಎಸೆತವನ್ನು ಬೌಂಡರಿಗೆ ಹೊಡೆದರು. ಆ ಮೂಲಕ ದೊಡ್ಡ ಗೆಲುವನ್ನು ತಂದುಕೊಟ್ಟರು.














