ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಮುಂಬೈ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಕೇವಲ 21 ಎಸೆತಗಳಲ್ಲಿ 60 ರನ್ ಸಿಡಿಸಿ ಮಿಂಚಿದರು. ಪಂದ್ಯದ ಬಳಿಕ ಸರಳವಾಗಿ ಊಟ ಸವಿದು ಗಮನ ಸೆಳೆದರು.

ಬೆಂಗಳೂರು(ನ.15): ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಮುಂಬೈ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಸೂರ್ಯಕುಮಾರ್ ಯಾದವ್, ಪಂದ್ಯದ ಬಳಿಕ ದೇಶಿ ಶೈಲಿಯ ಊಟ ಸವಿದು ಗಮನ ಸೆಳೆದಿದ್ದಾರೆ. ತಾಜಾ ರೊಟ್ಟಿ, ಮಟನ್ ಕರಿ ಹಾಗೂ ಜೊತೆಗಿದ್ದ ಸಹ ಆಟಗಾರ ಸರಫರಾಜ್ ಖಾನ್ ಅವರೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ಸೂರ್ಯಕುಮಾರ್ ಅವರ ವಿಡಿಯೋ ಇದೀಗ ಗಮನ ಸೆಳೆಯುತ್ತಿದೆ.

ಶನಿವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮುಂಬೈ ತಂಡದ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯ ಕ್ಯಾಂಪಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ನೀಡಿದ್ದ 172 ರನ್‌ಗಳ ಗುರಿಯನ್ನು ಮುಂಬೈ ಸುಲಭವಾಗಿ ಬೆನ್ನಟ್ಟಿತ್ತು. ಈ ಗೆಲುವಿನ ಬಳಿಕ ಸೂರ್ಯಕುಮಾರ್ ಮೈದಾನದ ಹೊರಗೆ ಸರಳವಾಗಿ ಸಮಯ ಕಳೆಯುತ್ತಿರುವ ದೃಶ್ಯ ಅಭಿಮಾನಿಗಳ ಗಮನ ಸೆಳೆದಿದೆ. ಸೂರ್ಯಕುಮಾರ್ ಯಾದವ್ ಅವರ ಸಿಂಪ್ಲಿಸಿಟಿಗೆ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Scroll to load tweet…

21 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿದ ಸೂರ್ಯಕುಮಾರ್ ಯಾದವ್

ಹೈದರಾಬಾದ್ ನೀಡಿದ್ದ 173 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಪರ ಸೂರ್ಯಕುಮಾರ್ ಯಾದವ್ ಕೇವಲ 21 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿದರು. ಇದರಲ್ಲಿ ಆರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ಸೇರಿದ್ದವು. 285.71ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, ಕೇವಲ 15 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಸೂರ್ಯಕುಮಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ 13.1 ಓವರ್‌ಗಳಲ್ಲೇ ಮೂರು ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಈ ಮೂಲಕ ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇನ್ನೂ 41 ಎಸೆತಗಳು ಬಾಕಿ ಇರುವಾಗಲೇ ಮುಂಬೈ ಗುರಿ ತಲುಪಿದ್ದು ವಿಶೇಷ.

ಮುಂಬೈ ತಂಡದ ಪರ ಮುಶೀರ್ ಖಾನ್ ಕೂಡ ಅಬ್ಬರಿಸಿದರು. ಅವರು 24 ಎಸೆತಗಳಲ್ಲಿ 51 ರನ್ ಗಳಿಸಿದರೆ, ಅಂಗ್‌ಕೃಷ್ ರಘುವಂಶಿ 13 ಎಸೆತಗಳಲ್ಲಿ 27 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಹಾರ್ದಿಕ್ ತಮೋರ್ 22 ರನ್ ಕೊಡುಗೆ ನೀಡಿದರು. ಬಳಿಕ ಮುಶೀರ್ ಮತ್ತು ಸೂರ್ಯಕುಮಾರ್ 65 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವನ್ನು ಬಹುತೇಕ ಖಚಿತಪಡಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ 172 ರನ್ ಗಳಿಸಿತ್ತು. ಮುಂಬೈ ಪರ ಮ್ಯಾಕ್ಸ್‌ವೆಲ್ ಸ್ವಾಮಿನಾಥನ್ 23 ರನ್ ನೀಡಿ ಮೂರು ವಿಕೆಟ್ ಪಡೆದರು. ಹೈದರಾಬಾದ್ ಪರ ಅಭಿರಥ್ ರೆಡ್ಡಿ 35 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಭಾರತ ತಂಡದಿಂದ ಕೈಬಿಟ್ಟಿದ್ದಕ್ಕೆ ಬೇಸರವಾಗಿತ್ತು!

ಸೂರ್ಯಕುಮಾರ್ ಯಾದವ್ ಅವರ ಈ ಪ್ರದರ್ಶನದ ಹಿಂದೆ ಭಾರತ ತಂಡಕ್ಕೆ ಮರಳುವ ಹಂಬಲವೂ ಇದೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡದಿಂದ ಹೊರಗುಳಿದಿರುವ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆಲುವಿನ ಐತಿಹಾಸಿಕ ಅಭಿಯಾನದ ಭಾಗವಾಗಿದ್ದ ತಮಗೆ, ನಂತರದ ಸರಣಿಗಳಲ್ಲಿ ಅವಕಾಶ ಸಿಗದಿರುವುದು ನೋವುಂಟು ಮಾಡಿತ್ತು ಎಂದು ಹೇಳಿದ್ದಾರೆ.

ವಿಶ್ವಕಪ್ ಬಳಿಕವೂ ಭಾರತ ತಂಡದ ಪರ ಆಡಲು ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದ ಸೂರ್ಯಕುಮಾರ್‌ಗೆ ಆಯ್ಕೆಯಾಗದಿರುವುದು ನಿರಾಸೆ ಮೂಡಿಸಿತ್ತು. ಆಯ್ಕೆ ಸಮಿತಿಗೆ ತನ್ನದೇ ಆದ ಕಾರಣಗಳಿರಬಹುದು ಎಂಬುದನ್ನು ಒಪ್ಪಿಕೊಂಡ ಅವರು, ಆ ನೋವನ್ನೇ ಮತ್ತೆ ತಂಡಕ್ಕೆ ಮರಳುವ ಹಸಿವಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. “ಹೌದು, ನನಗೆ ನೋವಾಗಿತ್ತು. ನಿಮಗೆ ಬೇಸರವಾಗದಿದ್ದರೆ ಅಥವಾ ನೋವಾಗದಿದ್ದರೆ, ಅದನ್ನು ಉತ್ಸಾಹವಾಗಿ ಹೇಗೆ ಪರಿವರ್ತಿಸಿಕೊಳ್ಳುತ್ತೀರಿ? ಆ ಉತ್ಸಾಹದೊಂದಿಗೆ ಹೇಗೆ ಆಡುತ್ತೀರಿ? ಈಗ ನಾನು ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದೇನೆ” ಎಂದು ಮುಂಬೈ ಗೆಲುವಿನ ಬಳಿಕ ಹೇಳಿದ್ದಾರೆ.

ಮುಂಬೈ ನಾಯಕತ್ವದ ಜವಾಬ್ದಾರಿ

ಇತ್ತೀಚೆಗೆ ಮುಂಬೈ ತಂಡದ ನಾಯಕನಾಗಿ ನೇಮಕಗೊಂಡಿರುವ ಸೂರ್ಯಕುಮಾರ್, ಈ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದಾರೆ. ಕಠಿಣ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತು ನಾಯಕತ್ವದ ಜವಾಬ್ದಾರಿ ನೀಡಿದ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಜಿಂಕ್ಯ ನಾಯಕ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಬದಲಿಗೆ ಬೇರೆ ಆಟಗಾರರಿಗೂ ನಾಯಕತ್ವ ನೀಡುವ ಅವಕಾಶವಿತ್ತು. ಆದರೆ ಅಸೋಸಿಯೇಷನ್ ತಮ್ಮ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಬದಲಾಗುತ್ತಿರುವ ಟಿ20 ಕ್ರಿಕೆಟ್‌ನ ಸ್ವರೂಪದ ಬಗ್ಗೆಯೂ ಸೂರ್ಯಕುಮಾರ್ ಮಾತನಾಡಿದ್ದಾರೆ. ಪವರ್‌ಪ್ಲೇ ಮುಗಿದ ಬಳಿಕ ತಂಡಗಳು ರನ್ ಗಳಿಸುವ ವೇಗವನ್ನು ಕಡಿಮೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗ 250-260 ರನ್‌ಗಳ ಮೊತ್ತ ಗಳಿಸುವುದು ಸಾಧ್ಯವಾಗುತ್ತಿರುವುದರಿಂದ ಮಧ್ಯಮ ಓವರ್‌ಗಳಲ್ಲೂ ಆಕ್ರಮಣಕಾರಿ ಆಟ ಮುಂದುವರಿಸುವುದು ಅಗತ್ಯ ಎಂದು ಹೇಳಿದ್ದಾರೆ.

ಸದ್ಯಕ್ಕೆ ಮುಂಬೈ ತಂಡದ ಪರ ಉತ್ತಮ ಪ್ರದರ್ಶನ ನೀಡುವುದಷ್ಟೇ ತಮ್ಮ ಗುರಿ ಎಂದು ಸೂರ್ಯಕುಮಾರ್ ಸ್ಪಷ್ಟಪಡಿಸಿದ್ದಾರೆ. ಹೈದರಾಬಾದ್ ವಿರುದ್ಧದ ಸ್ಫೋಟಕ ಇನಿಂಗ್ಸ್ ಆಯ್ಕೆಗಾರರಿಗೆ ಸಂದೇಶ ನೀಡುವ ಉದ್ದೇಶದಿಂದ ಆಡಿದ್ದಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅನುಸರಿಸುತ್ತಿರುವ ಆಕ್ರಮಣಕಾರಿ ಆಟದ ಮುಂದುವರಿದ ಭಾಗವಷ್ಟೇ ಎಂದು ತಿಳಿಸಿದ್ದಾರೆ.

ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದ ಬಳಿಕ ಮಟನ್ ಕರಿ ಮತ್ತು ರೊಟ್ಟಿ ಸವಿದ ಸೂರ್ಯಕುಮಾರ್ ಅವರ ದಿನ ಸರಳವಾಗಿ ಮುಗಿದಿರಬಹುದು. ಆದರೆ ಭಾರತ ತಂಡಕ್ಕೆ ಮರಳುವ ಅವರ ಸಂಕಲ್ಪ ಮಾತ್ರ ಸ್ಪಷ್ಟವಾಗಿದೆ. ಮತ್ತೊಮ್ಮೆ ಟೀಂ ಇಂಡಿಯಾ ಜೆರ್ಸಿ ಧರಿಸಲು ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳ ಮೂಲಕವೇ ಉತ್ತರ ನೀಡಲು ಅವರು ಸಿದ್ಧರಾಗಿದ್ದಾರೆ.