- Home
- Sports
- Cricket
- ಏಷ್ಯಾಕಪ್ ಟೂರ್ನಿಗೆ ಭಾರತ ಸಂಭಾವ್ಯ ತಂಡ: ಗೊಂದಲದಲ್ಲಿ ಆಯ್ಕೆ ಸಮಿತಿ, ಬದಲಾಗುತ್ತಾ ಟೀಮ್ ಕಾಂಬಿನೇಷನ್?
ಏಷ್ಯಾಕಪ್ ಟೂರ್ನಿಗೆ ಭಾರತ ಸಂಭಾವ್ಯ ತಂಡ: ಗೊಂದಲದಲ್ಲಿ ಆಯ್ಕೆ ಸಮಿತಿ, ಬದಲಾಗುತ್ತಾ ಟೀಮ್ ಕಾಂಬಿನೇಷನ್?
ನವದೆಹಲಿ: ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಆಯ್ಕೆ ಸಮಿತಿ ಇದೀಗ ಕೊಂಚ ಗೊಂದಲಕ್ಕೆ ಸಿಲುಕಿದೆ. ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.

ಏಷ್ಯಾಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳಲ್ಲಿ ಭಾರತ ತಂಡ ಪ್ರಕಟವಾಗಲಿದೆ. ಇದಕ್ಕೂ ಮೊದಲು ಆಯ್ಕೆ ಸಮಿತಿ ಕೊಂಚ ಗೊಂದಲಕ್ಕೆ ಸಿಲುಕಿದಂತೆ ಭಾಸವಾಗುತ್ತಿದೆ.
ಸೆಪ್ಟೆಂಬರ್ 9ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ, ಶುಭ್‌ಮನ್ ಗಿಲ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಜಸ್ಪ್ರೀತ್ ಬುಮ್ರಾರನ್ನು ಏಷ್ಯಾಕಪ್‌ನಲ್ಲಿ ಆಡಿಸಿ, ಬಳಿಕ ವಿಂಡೀಸ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸುತ್ತಿದೆ. ಅವರ ಜೊತೆ 3ನೇ ವೇಗಿ ಸ್ಥಾನಕ್ಕೆ ಪ್ರಸಿದ್ಧ್ ಅಥವಾ ಹರ್ಷಿತ್ ರಾಣಾ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.
ಇನ್ನು, ಐಪಿಎಲ್ ಹಾಗೂ ಇತ್ತೀಚೆಗೆ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶುಭ್‌ಮನ್ ಗಿಲ್‌ಗೂ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಯಾಕೆಂದರೆ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಈಗಾಗಲೇ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ವಿಸ್ಪೋಟಕ ಆರಂಭಿಕರಾಗಿ ಗುರುತಿಸಿಕೊಂಡಿದ್ದು, ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಸದ್ಯ ಭಾರತ ಟಿ20 ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಟಾಪ್ 5 ಬ್ಯಾಟಿಂಗ್ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಗಿಲ್ ಆಯ್ಕೆಯಾದರೆ ಮುಂದೇನು ಎನ್ನುವ ಚರ್ಚೆ ಜೋರಾಗಿದೆ.
ಅಭಿಷೇಕ್ ಶರ್ಮಾ ನಂ.1 ಟಿ20 ಬ್ಯಾಟರ್ ಆಗಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪರ್ ಆಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಸಂಜು ಸದ್ಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.
ಒಂದು ವೇಳೆ ಶುಭ್‌ಮನ್ ಗಿಲ್‌ಗೆ ಸ್ಥಾನ ಸಿಕ್ಕಿದರೆ, ಉಪನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗಿಲ್ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡವು ಇಂಗ್ಲೆಂಡ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿತ್ತು.
ಸಂಭವನೀಯ ತಂಡ: ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣಾ/ಪ್ರಸಿದ್ಧ್ ಕೃಷ್ಣ, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ/ಧ್ರುವ್ ಜುರೆಲ್