ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತೀಯ ಮಹಿಳಾ ತಂಡ, 3ನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ತಂಡದ ಅಗ್ರ ಆಟಗಾರ್ತಿಯರ ಭರ್ಜರಿ ಫಾರ್ಮ್ ನಲ್ಲಿರುವ ಸ್ಪಿನ್ನರ್ ವೈಷ್ಣವಿ ಶರ್ಮಾ ಉತ್ತಮ ಪ್ರದರ್ಶನವು ಮುಂಬರುವ ವಿಶ್ವಕಪ್ ತಯಾರಿಗೆ ಬಲ ತುಂಬಿದೆ.
ತಿರುವನಂತಪುರಂ: ಎರಡು ಪಂದ್ಯ, ಎರಡು ದೊಡ್ಡ ಗೆಲುವು. ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಅಧಿಕಾರಯುತ ಗೆಲುವುಗಳೊಂದಿಗೆ 2-0 ಮುನ್ನಡೆ ಸಾಧಿಸಿದ್ದು, ಶುಕ್ರವಾರ ಇಲ್ಲಿನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಕಳೆದೆರಡು ಪಂದ್ಯಗಳಲ್ಲಿ ಪ್ರವಾಸಿ ತಂಡದ ವಿರುದ್ಧ ಆತಿಥೇಯರು ಎಲ್ಲಾ ಮೂರೂ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಪ್ರಚಂಡ ಬೌಲಿಂಗ್ ಮೂಲಕ ಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಭಾರತ, ತನ್ನ ಅಗ್ರಕ್ರಮಾಂಕದ ನಿರ್ಭೀತ ಬ್ಯಾಟಿಂಗ್‌ನ ನೆರವಿನಿಂದ ನಿರಾಯಾಸವಾಗಿ ಗೆಲುವುಗಳನ್ನು ದಾಖಲಿಸಿತು.
ಟಿ20 ವಿಶ್ವಕಪ್‌ಗೆ ಭಾರತ ಭರದ ಸಿದ್ದತೆ
ಮುಂದಿನ ವರ್ಷ ಜೂ.12ರಂದು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿರುವ ಭಾರತ, ಸದೃಢವಾಗಿ ಕಾಣುತ್ತಿದ್ದು, ತನ್ನ ಆಯುಧಗಳನ್ನು ಇನ್ನಷ್ಟು ಹರಿತಗೊಳಿಸಿಕೊಳ್ಳಲು ಈ ಸರಣಿ ಸೇರಿ ಮುಂಬರುವ ಎಲ್ಲಾ ಸರಣಿಗಳನ್ನು ಬಳಸಿಕೊಳ್ಳಲಿದೆ.
ತಂಡಕ್ಕೆ ವಾಪಸಾದ ಬಳಿಕ ಶಫಾಲಿ ವರ್ಮಾ ಓಟಕ್ಕೆ ತಡೆಯೇ ಇಲ್ಲದಂತಾಗಿದ್ದರೆ, ವೈಯಕ್ತಿಕ ಜೀವನದಲ್ಲಿ ಆದ ನೋವು ತಮ್ಮ ಆಟಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸುವಲ್ಲಿ ಸ್ಮೃತಿ ಮಂಧನಾ ಯಶಸ್ವಿಯಾಗಿದ್ದಾರೆ. ಜೆಮಿಮಾ ರೋಡ್ರಿಗ್ಸ್ ಅತ್ಯದ್ಭುತ ಲಯದಲ್ಲಿದ್ದು, ಹರ್ಮನ್‌ಪ್ರೀತ್, ದೀಪ್ತಿ ಶರ್ಮಾ, ರಿಚಾ ಘೋಷ್ ಸಹ ಸ್ಥಿರತೆ ಉಳಿಸಿಕೊಂಡರೆ, ಭಾರತವು ಅಪಾಯಕಾರಿ ತಂಡವಾಗಿ ವಿಶ್ವಕಪ್‌ಗೆ ಕಾಲಿಡುವುದರಲ್ಲಿ ಅನುಮಾನವಿಲ್ಲ.
ಗಮನ ಸೆಳೆಯುತ್ತಿರುವ ವೈಷ್ಣವಿ ಶರ್ಮಾ
ಸರಣಿಯಲ್ಲಿ ಎಲ್ಲರಿಗಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ಯುವ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ. ಮುಂದಿನ ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ವೈಷ್ಣವಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ್ತಿ ಜಿ.ಕಮಲಿನಿ ಸಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್


