ವಿಜಯ್ ಹಜಾರೆ ಟ್ರೋಫಿಯ ತನ್ನ ಎರಡನೇ ಪಂದ್ಯದಲ್ಲಿ ಕರ್ನಾಟಕವು ಬಲಿಷ್ಠ ಕೇರಳ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದರೂ, ಕರ್ನಾಟಕದ ಬೌಲಿಂಗ್ ವಿಭಾಗವು ಸುಧಾರಣೆ ಕಾಣಬೇಕಿದ್ದು, ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮತ್ತೊಂದು ರನ್ ಹೊಳೆ ನಿರೀಕ್ಷಿಸಲಾಗಿದೆ.
ಅಹಮದಾಬಾದ್: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ‘ಎ’ ಗುಂಪಿನಲ್ಲಿರುವ ಕರ್ನಾಟಕ, ತನ್ನ 2ನೇ ಪಂದ್ಯದಲ್ಲಿ ಶುಕ್ರವಾರ ಕೇರಳ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 413 ರನ್‌ಗಳ ದಾಖಲೆ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ಕರ್ನಾಟಕ, ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇದೀಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಇಲ್ಲಿನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮತ್ತೊಮ್ಮೆ ರನ್ ಹೊಳೆ ಹರಿಯುವ ನಿರೀಕ್ಷೆ ಇದ್ದು, ಕರ್ನಾಟಕದ ಬೌಲರ್‌ಗಳು ಈ ಪಂದ್ಯದಲ್ಲೂ ದುಬಾರಿ ಆಗುತ್ತಾರಾ? ಎನ್ನುವ ಪ್ರಶ್ನೆ ಕಾಡುತ್ತಿದೆ. ಅನುಭವಿಗಳಾದ ಶ್ರೇಯಸ್ ಗೋಪಾಲ್, ವೈಶಾಖ್ ವಿಜಯ್‌ಕುಮಾರ್ ಜೊತೆಗೆ ಯುವ ಪ್ರತಿಭೆಗಳಾದ ಅಭಿಲಾಶ್ ಶೆಟ್ಟಿ, ವಿದ್ಯಾಧರ್ ಪಾಟೀಲ್, ಧೃವ್ ಪ್ರಭಾಕರ್ ಸುಧಾರಿತ ಬೌಲಿಂಗ್ ಪ್ರದರ್ಶನ ತೋರಬೇಕಿದೆ.
ಇನ್ನು, ಬ್ಯಾಟಿಂಗ್ ವಿಭಾಗದಲ್ಲಿ ದೇವ್‌ದತ್ ಪಡಿಕ್ಕಲ್ ಅತ್ಯುತ್ತಮ ಲಯದಲ್ಲಿದ್ದು, ನಾಯಕ ಮಯಾಂಕ್ ಅಗರ್‌ವಾಲ್ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಕರುಣ್ ನಾಯರ್, ಕೆ.ಎಲ್.ಶ್ರೀಜಿತ್, ಆರ್.ಸ್ಮರಣ್, ಅಭಿನವ್ ಮನೋಹರ್‌ರಿಂದ ತಂಡ ದೊಡ್ಡ ಕೊಡುಗೆ ನಿರೀಕ್ಷೆ ಮಾಡುತ್ತಿದೆ. ಚೊಚ್ಚಲ ಪಂದ್ಯದಲ್ಲೇ ಆಲ್ರೌಂಡ್ ಪ್ರದರ್ಶನ ತೋರಿದ ಧೃವ್‌ರಿಂದ, ಕೆಳ ಕ್ರಮಾಂಕದಲ್ಲಿ ಮತ್ತಷ್ಟು ರನ್ ಕೊಡುಗೆ ಎದುರು ನೋಡಲಾಗುತ್ತಿದೆ.
ಮತ್ತೊಂದೆಡೆ ಕೇರಳ ಸಹ ತನ್ನ ಮೊದಲ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ದೊಡ್ಡ ಗೆಲುವು ಸಾಧಿಸಿ, ಮೊದಲ ಸುತ್ತಿನ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರೋಹನ್ ಕುನ್ನುಮಲ್, ಬಾಬಾ ಅಪರಾಜಿತ್, ವಿಷ್ಣು ವಿನೋದ್, ಮೊಹಮದ್ ಅಜರುದ್ದೀನ್‌ರಂತಹ ಅನುಭವಿಗಳ ಬಲ ತಂಡಕ್ಕಿದೆ. ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಆಡುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಇನ್ನು, ಬೌಲಿಂಗ್‌ನಲ್ಲೂ ಕೇರಳ ಬಲಿಷ್ಠವಾಗಿದ್ದು, ಕರ್ನಾಟಕ ಬ್ಯಾಟರ್‌ಗಳಿಗೆ ಪ್ರಬಲ ಪೈಪೋಟಿ ಎದುರಾಗಬಹುದು.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ
2ನೇ ಸುತ್ತಿನಲ್ಲೂ ಆಡ್ತಾರಾ ರೋಹಿತ್, ವಿರಾಟ್ ಕೊಹ್ಲಿ?
ವಿಜಯ್ ಹಜಾರೆ ಟೂರ್ನಿಯಲ್ಲಿ ಭಾರತ ತಂಡದಲ್ಲಿರುವ ಎಲ್ಲಾ ಆಟಗಾರರು ಆಡುವುದು ಕಡ್ಡಾಯ ಎನ್ನುವ ನಿಯಮವನ್ನು ಬಿಸಿಸಿಐ ಪ್ರಕಟಿಸಿದ ಕಾರಣ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸೇರಿ ಬಹುತೇಕ ತಾರಾ ಆಟಗಾರರು ಮೊದಲ ಸುತ್ತಿನಲ್ಲೇ ಕಣಕ್ಕಿಳಿದಿದ್ದರು. ಬಿಸಿಸಿಐ ಕನಿಷ್ಠ 2 ಪಂದ್ಯವನ್ನಾಡಬೇಕು ಎಂದು ಸೂಚಿಸಿದೆ. ರೋಹಿತ್ ಹಾಗೂ ಕೊಹ್ಲಿ ಕೇವಲ 2 ಪಂದ್ಯಗಳನ್ನು ಆಡುತ್ತಾರಾ? ಅಥವಾ ಇನ್ನೂ ಹೆಚ್ಚಿನ ಪಂದ್ಯಗಳಲ್ಲಿ ಭಾಗಿಯಾಗುತ್ತಾರಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
ಶುಕ್ರವಾರ ಮುಂಬೈ ತಂಡ ಉತ್ತರಾಖಂಡವನ್ನು ಎದುರಿಸಲಿದ್ದು, ದೆಹಲಿಗೆ ಗುಜರಾತ್ ವಿರುದ್ಧ ಪಂದ್ಯವಿದೆ. ರೋಹಿತ್, ಕೊಹ್ಲಿ ಕಣಕ್ಕಿಳಿದು ಮತ್ತೊಮ್ಮೆ ಅಬ್ಬರಿಸುತ್ತಾರಾ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.


