- Home
- Sports
- Cricket
- Cancer-Stricken Sister: ನನ್ನ ಅಕ್ಕಳಿಗೆ ಕ್ಯಾನ್ಸರ್ ಇದೆ: ಎಜ್‌ಬಾಸ್ಟನ್ ಗೆಲುವನ್ನು ಸಹೋದರಿಗೆ ಅರ್ಪಿಸಿದ ಆಕಾಶ್‌ದೀಪ್!
Cancer-Stricken Sister: ನನ್ನ ಅಕ್ಕಳಿಗೆ ಕ್ಯಾನ್ಸರ್ ಇದೆ: ಎಜ್‌ಬಾಸ್ಟನ್ ಗೆಲುವನ್ನು ಸಹೋದರಿಗೆ ಅರ್ಪಿಸಿದ ಆಕಾಶ್‌ದೀಪ್!
ಬರ್ಮಿಂಗ್‌ಹ್ಯಾಮ್: ಭಾರತ - ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಇನ್ನು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಕಾಶ್‌ದೀಪ್ ಈ ಗೆಲುವನ್ನು ಕ್ಯಾನ್ಸರ್‌ಗೆ ಒಳಗಾಗಿರುವ ತಮ್ಮ ಸಹೋದರಿಗೆ ಅರ್ಪಿಸಿದ್ದಾರೆ.

ಇಂಗ್ಲೆಂಡ್ ಎದುರಿನ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 336 ರನ್ ಭಾರೀ ಅಂತರದ ಗೆಲುವು ಸಾಧಿಸಿದೆ. ಇದು ಭಾರತದಾಚೆ ಟೀಂ ಇಂಡಿಯಾ ದಾಖಲಿಸಿದ ಅತಿದೊಡ್ಡ ಅಂತರದ ಗೆಲುವು ಎನಿಸಿಕೊಂಡಿತು.
ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ 10 ವಿಕೆಟ್ ಕಿತ್ತು ಮಿಂಚಿದ ಭಾರತದ ವೇಗಿ ಆಕಾಶ್‌ದೀಪ್, ಪಂದ್ಯದ ಗೆಲುವನ್ನು ಕ್ಯಾನ್ಸರ್‌ಗೆ ತುತ್ತಾಗಿರುವ ತಮ್ಮ ಸಹೋದರಿಗೆ ಅರ್ಪಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಅವರು, ‘2 ತಿಂಗಳ ಹಿಂದೆ ನನ್ನ ಸಹೋದರಿ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ನಾನು ಇದನ್ನು ಈವರೆಗೂ ಯಾರಿಗೂ ಹೇಳಿರಲಿಲ್ಲ. ನನ್ನ ಪ್ರದರ್ಶನ ನೋಡಿ ಅವಳು ಖಂಡಿತಾ ಖುಷಿ ಪಡುತ್ತಾಳೆ ಮತ್ತು ಅವಳ ಮುಖದಲ್ಲಿ ನಗು ಅರಳುತ್ತದೆ.
ಪ್ರತಿ ಬಾರಿ ನಾನು ಚೆಂಡು ಕೈಗೆತ್ತಿಕೊಂಡಾಗಲೂ ಅವಳ ಮುಖ ನನ್ನ ಮನದಲ್ಲಿ ಮೂಡುತ್ತದೆ. ಈ ಗೆಲುವನ್ನು ನಾನು ಅವಳಿಗೆ ಸಮರ್ಪಿಸುತ್ತೇನೆ. ಅವಳಿಗೆ ಒಂದೇ ಹೇಳಲಿಕ್ಕಿರುವುದು. ಸಹೋದರಿ, ನಾವೆಲ್ಲರೂ ನಿನ್ನ ಜೊತೆಗಿದ್ದೇವೆ’ ಎಂದು ಭಾವುಕರಾಗಿ ನುಡಿದಿದ್ದಾರೆ.
2024ರ ಫೆಬ್ರವರಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಆಕಾಶ್‌ದೀಪ್, ಎಜ್‌ಬಾಸ್ಟನ್ ಟೆಸ್ಟ್ ಪಂದ್ಯಕ್ಕೂ ಮುನ್ನ 7 ಪಂದ್ಯಗಳನ್ನಾಡಿದ್ದರು. ಆದರೆ ಕೇವಲ 15 ವಿಕೆಟ್ ಕಬಳಿಸಲಷ್ಟೇ ಶಕ್ತವಾಗಿದ್ದರು.
ಇದೀಗ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗ ಕೂಡಿಕೊಂಡ ಆಕಾಶ್‌ದೀಪ್ ಮೊದಲ ಇನ್ನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಗೆಲುವಿಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಮ್ಮ 23ನೇ ವಯಸ್ಸಿನಲ್ಲಿ ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾದರು. ಅವರ ತಂದೆ ಸಾವಿನ ಬಳಿಕ ಅವರ ಹಿರಿಯ ಅಣ್ಣ ಕೂಡಾ ಕೊನೆಯುಸಿರೆಳೆದುಬಿಟ್ಟರು.
ಇದಾದ ಬಳಿಕ ಕ್ರಿಕೆಟ್‌ನಿಂದ ಮೂರು ವರ್ಷ ಬ್ರೇಕ್ ತೆಗೆದುಕೊಂಡ ಆಕಾಶ್‌ದೀಪ್, ಇದೀಗ ಭಾರತದ ಭವಿಷ್ಯದ ಭರವಸೆಯ ವೇಗದ ಬೌಲರ್ ಆಗುವತ್ತ ದಿಟ್ಟ ಹೆಜ್ಜೆಹಾಕುತ್ತಿದ್ದಾರೆ.