- Home
- Sports
- Cricket
- ಆಫ್ಘಾನ್ ವಿರುದ್ದ ಪಂದ್ಯದಲ್ಲಿ ಇತಿಹಾಸ ರಚಿಸಿದ ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟ್‌ನಲ್ಲಿ ಮೈಲಿಗಲ್ಲು
ಆಫ್ಘಾನ್ ವಿರುದ್ದ ಪಂದ್ಯದಲ್ಲಿ ಇತಿಹಾಸ ರಚಿಸಿದ ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟ್‌ನಲ್ಲಿ ಮೈಲಿಗಲ್ಲು
ಆಫ್ಘಾನಿಸ್ತಾನ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅಪರೂಪದ ಮೈಲಿಗಲ್ಲು ನಿರ್ಮಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಏನಿದು ರೋಹಿತ್ ಸಾಧನೆ

ಗೆಲುವಿನ ಜೊತೆಗೆ ಅಪರೂಪದ ದಾಖಲೆ
ಆಫ್ಘಾನಿಸ್ತಾನ ವಿರುದ್ದದ ಮೊದಲ ಏಕದಿನ ಪಂದ್ಯ ಮಳೆಯಿಂದ 25 ಓವರ್‌ಗೆ ಸೀಮಿತಗೊಂಡಿತ್ತು. ಈ ಪಂದ್ಯದಲ್ಲಿ ಭಾರತ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. 195 ರನ್ ಟಾರ್ಗೆಟನ್ನು ಭಾರತ 22.5 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲುವಿನ ಸಂಭ್ರಮ ಆಚರಿಸಿದೆ. ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಮೈಲಿಗಲ್ಲು
ಆಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಆಡಿದ ಅತ್ಯಂತ ಹಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವಾಗ ರೋಹಿತ್ ಅವರ ವಯಸ್ಸು 39 ವರ್ಷ 44 ದಿನಗಳು. 39ರ ಇಳಿವಯಸ್ಸಿನಲ್ಲೂ ರೋಹಿತ್ ಫಿಟ್ ಅಂಡ್ ಫೈನ್ ಆಗಿ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ.
ಮೋಹಿಂದರ್ ದಾಖಲೆ ಮುರಿದ ರೋಹಿತ್
ಭಾರತದ ಮಾಜಿ ಆಲ್‌ರೌಂಡರ್ ಹಾಗೂ 1983 ರ ವಿಶ್ವಕಪ್ ಹೀರೊ ಮೊಹಿಂದರ್ ಅಮರನಾಥ್ ಅವರ ಹೆಸರಲ್ಲಿದ್ದ ದಶಕಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.ಅಮರನಾಥ್ ಅವರು 1989 ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದಾಗ ಅವರಿಗೆ 39 ವರ್ಷ 36 ದಿನ ವಯಸ್ಸಾಗಿತ್ತು. ಕಳೆದ 37 ವರ್ಷಗಳಿಂದ ಯಾರೂ ಮುರಿಯದ ಈ ದಾಖಲೆಯನ್ನು ರೋಹಿತ್ ಇಂದು ಅಧಿಕೃತವಾಗಿ ತಮ್ಮದಾಗಿಸಿಕೊಂಡಿದ್ದಾರೆ.
ಭಾರತದ ಪರ ಕ್ರಿಕೆಟ್ ಆಡಿದ ಟಾಪ್ 5 ಹಿರಿಯ ಕ್ರಿಕೆಟಿಗರು
- ರೋಹಿತ್ ಶರ್ಮಾ 39 ವರ್ಷ 44 ದಿನಗಳು ( ಅಫ್ಘಾನಿಸ್ತಾನ ವಿರುದ್ಧ (2026)
- ಮೊಹಿಂದರ್ ಅಮರನಾಥ್ 39 ವರ್ಷ 36 ದಿನಗಳು (ವೆಸ್ಟ್ ಇಂಡೀಸ್ ವಿರುದ್ಧ (1989)
- ಸಚಿನ್ ತೆಂಡೂಲ್ಕರ್ 38 ವರ್ಷ 329 ದಿನಗಳು (ಪಾಕಿಸ್ತಾನ ವಿರುದ್ಧ (2012)
- ರಾಹುಲ್ ದ್ರಾವಿಡ್ 38 ವರ್ಷ 248 ದಿನಗಳು (ಇಂಗ್ಲೆಂಡ್ ವಿರುದ್ಧ (2011)
- ಸುನಿಲ್ ಗವಾಸ್ಕರ್ 38 ವರ್ಷ 118 ದಿನಗಳು (ಇಂಗ್ಲೆಂಡ್ ವಿರುದ್ಧ (1987)
40ರಲ್ಲಿ ಆಡ್ತಾರ 2027ರ ವಿಶ್ವಕಪ್
ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ಈಗಾಗಲೇ ದೂರ ಸರಿದಿರುವ ರೋಹಿತ್ ಶರ್ಮಾ, ಪ್ರಸ್ತುತ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ವರ್ಷ (2027) ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಇಚ್ಛೆಯನ್ನು ಅವರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರೋಹಿತ್ ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಆಡಿದ್ದೇ ಆದಲ್ಲಿ, ಭಾರತದ ಕ್ರಿಕೆಟ್ ಇತಿಹಾಸದಲ್ಲೇ 40 ವರ್ಷ ವಯಸ್ಸು ದಾಟಿದ ನಂತರವೂ ಒನ್‌ಡೇ ಕ್ರಿಕೆಟ್ ಆಡಿದ ಮೊದಲ ಭಾರತೀಯ ಪುರುಷ ಕ್ರಿಕೆಟಿಗ ಎಂಬ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

