- Home
- Sports
- Cricket
- ಸೂರ್ಯಕುಮಾರ್ ಯಾದವ್‌ಗೆ ಭಾರತ ಟಿ20 ತಂಡದಿಂದ ಗೇಟ್‌ಪಾಸ್ ಬೆನ್ನಲ್ಲೇ ರೋಹಿತ್ ಶರ್ಮಾ ದಿಟ್ಟ ಮಾತು!
ಸೂರ್ಯಕುಮಾರ್ ಯಾದವ್‌ಗೆ ಭಾರತ ಟಿ20 ತಂಡದಿಂದ ಗೇಟ್‌ಪಾಸ್ ಬೆನ್ನಲ್ಲೇ ರೋಹಿತ್ ಶರ್ಮಾ ದಿಟ್ಟ ಮಾತು!
ಮುಂಬೈ: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಶ್ರೇಯಸ್ ಅಯ್ಯರ್‌ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ತಲೆದಂಡ, ಶ್ರೇಯಸ್ ಅಯ್ಯರ್ ನೂತನ ಕ್ಯಾಪ್ಟನ್
ಭಾರತದ ನೂತನ ಟಿ20 ತಂಡದ ನಾಯಕರಾಗಿ ಶ್ರೇಯಸ್ ಅಯ್ಯರ್ ನೇಮಕವಾಗಿದ್ದಾರೆ. ಇದರೊಂದಿಗೆ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ತಲೆದಂಡವಾಗಿದೆ. ಈ ಕುರಿತಂತೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೂರ್ಯಕುಮಾರ್ ಯಾದವ್ ಪರ ಹಿಟ್‌ಮ್ಯಾನ್ ಬ್ಯಾಟಿಂಗ್
30 ವರ್ಷಕ್ಕೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ, ನಾಯಕನಾಗಿ ಟಿ20 ವಿಶ್ವಕಪ್ ಗೆಲ್ಲುವವರೆಗಿನ ಸೂರ್ಯಕುಮಾರ್ ಯಾದವ್ ಅವರ ಭಾರತ ತಂಡದ ಜತೆಗಿನ ಜರ್ನಿ ಅಷ್ಟೊಂದು ಸುಲಭವಾಗಿರಲಿಲ್ಲ. ಒಂದಂತೂ ಸತ್ಯ, ಯಾವುದೂ ಸುಲಭವಾಗಿ ಸಿಗುವುದಿಲ್ಲ. ಅದರಲ್ಲೂ ಸೂರ್ಯಕುಮಾರ್ ಯಾದವ್ ವಿಚಾರದಲ್ಲಂತೂ ಇದು ಇನ್ನಷ್ಟು ಹೆಚ್ಚು ಎನ್ನಬಹುದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್‌ರನ್ನ ಕೊಂಡಾಡಿದ ರೋಹಿತ್ ಶರ್ಮಾ
ಸೂರ್ಯಕುಮಾರ್ ಯಾದವ್ 30-31ನೇ ವಯಸ್ಸಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಅದರರ್ಥ ಅಲ್ಲಿಯವರೆಗೂ ಅವರು ತಮ್ಮ ಹೋರಾಟವನ್ನು ಕೈಬಿಟ್ಟಿರಲಿಲ್ಲ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ನಿರಂತರವಾಗಿ ಹೋರಾಟ ಮಾಡಿದರು. ಅವಕಾಶ ಸಿಕ್ಕಾಗ ಅದನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಅವರು ಸಾಧನೆ ಮಾಡಿ ತೋರಿಸಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
2021ರಲ್ಲಿ ಟೀಂ ಇಂಡಿಯಾಗೆ ಸೂರ್ಯಕುಮಾರ್ ಯಾದವ್ ಪಾದಾರ್ಪಣೆ
2021ರ ಮಾರ್ಚ್‌ನಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್, ಭಾರತ ಪರ 113 ಟಿ20 ಪಂದ್ಯಗಳನ್ನಾಡಿ 36.35ರ ಸರಾಸರಿಯಲ್ಲಿ 25 ಅರ್ಧಶತಕ ಹಾಗೂ 4 ಅವಿಸ್ಮರಣೀಯ ಶತಕಗಳ ಸಹಿತ 3,272 ರನ್ ಸಿಡಿಸಿ ಮಿಂಚಿದ್ದಾರೆ. ಇದರ ಜತೆಗೆ ಆಧುನಿಕ ಟಿ20 ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಸೂರ್ಯಕುಮಾರ್ ಯಾದವ್ ಗುರುತಿಸಿಕೊಂಡಿದ್ದರು.
ರೋಹಿತ್ ಶರ್ಮಾ ಬಳಿಕ ಭಾರತ ಟಿ20 ತಂಡದ ನಾಯಕರಾದ ಸೂರ್ಯಕುಮಾರ್ ಯಾದವ್
2024ರಲ್ಲಿ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಜಯಿಸಿದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಸೂರ್ಯಕುಮಾರ್ ಯಾದವ್‌ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಯಿತು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಆಡಿದ ಎಲ್ಲಾ ಟಿ20 ಸರಣಿಗಳನ್ನು ಗೆದ್ದಿದೆ. ಇದರ ಜತೆಗೆ ಭಾರತ ತಂಡ 2026ರ ಟಿ20 ವಿಶ್ವಕಪ್ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು.
ಶ್ರೇಯಸ್ ಅಯ್ಯರ್‌ಗೆ ಶುಭ ಹಾರೈಸಿದ ರೋಹಿತ್ ಶರ್ಮಾ
ಇನ್ನು ಇದೇ ವೇಳೆ ಭಾರತದ ನೂತನ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ ರೋಹಿತ್ ಶರ್ಮಾ ಶುಭ ಹಾರೈಸಿದ್ದಾರೆ. ಈಗಾಗಲೇ ಐಪಿಎಲ್‌ನಲ್ಲಿ ನಾಯಕನಾಗಿ ಅಪಾರ ಅನುಭವ ಹೊಂದಿರುವ ಶ್ರೇಯಸ್ ಅಯ್ಯರ್, ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

