ಟೀಂ ಇಂಡಿಯಾ ಕೋಚ್ ಆಗುವ ಮುನ್ನ ಬಿಸಿಸಿಐ ಮುಂದೆ 5 ಕಂಡೀಷನ್ ಹಾಕಿದ ಗಂಭೀರ್..!
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ಮುಂದಿನ ಹೆಡ್ ಕೋಚ್ ಆಗಿ ನೇಮಕವಾಗುವುದು ಬಹುತೇಕ ಖಚಿತ ಎನಿಸಿದೆ. ತಾವು ಟೀಂ ಇಂಡಿಯಾ ಹೆಡ್ ಕೋಚ್ ಆಗಲು ಒಪ್ಪಬೇಕೆಂದರೆ ಈ 5 ಕಂಡೀಷನ್ ಪೂರೈಸಬೇಕು ಎಂದು ಬಿಸಿಸಿಐಗೆ ಷರತ್ತು ವಿಧಿಸಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಏನು ಆ 5 ಕಂಡೀಷನ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಬಿಸಿಸಿಐ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಲಿದ್ದು, ಆ ಬಳಿಕ ಹೊಸ ಕೋಚ್ ನೇಮಕವಾಗಲಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಅಲ್ಲದೇ ಅದರಲ್ಲಿ ಕೆಲವರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನ ಕೂಡಾ ನಡೆಸಲಾಗಿದ್ದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗುವುದು ಬಹುತೇಕ ಖಚಿತ ಎನಿಸಿದೆ.
ಕಳೆದ ವಾರ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ನೂತನ ಕೋಚ್ ಆಗಲು ಬಯಸಿದವರ ಸಂದರ್ಶನ ನಡೆಸಿತು. ಈ ಸಂದರ್ಭದಲ್ಲಿ ತಾವು ಟೀಂ ಇಂಡಿಯಾ ಹೆಡ್ ಕೋಚ್ ಆಗಬೇಕಾದರೆ ನನ್ನ ಕೆಲವೊಂದು ಬೇಡಿಕೆಗಳನ್ನು ಪೂರೈಸಬೇಕು ಎಂದು ಗಂಭೀರ್ ಕಂಡೀಷನ್ ಹಾಕಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐ ನೇಮಿತ ಕ್ರಿಕೆಟ್ ಸಲಹಾ ಸಮಿತಿಯು ಗೌತಮ್ ಗಂಭೀರ್ ಅವರನ್ನು ಸಂದರ್ಶನ ಮಾಡುವ ಸಂದರ್ಭದಲ್ಲಿ ಈ ಸಮಿತಿಯ ಮುಂದೆ ಗಂಭೀರ್ 5 ಪ್ರಮುಖ ಡಿಮ್ಯಾಂಡ್ ಮುಂದಿಟ್ಟಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ. ಗಂಭೀರ್ 5 ಡಿಮ್ಯಾಂಡ್ ಯಾವುವು ಎನ್ನುವುದನ್ನು ನೋಡೋಣ ಬನ್ನಿ.
ಗೌತಮ್ ಗಂಭೀರ್ ಅವರ ಮೊದಲ ಬೇಡಿಕೆಯೆಂದರೆ, ಕ್ರಿಕೆಟ್ ನಿರ್ವಹಣೆಯಲ್ಲಿ ಸಂಪೂರ್ಣ ಕಂಟ್ರೋಲ್ ನನ್ನ ಬಳಿಯೇ ಇರಬೇಕು, ಬಿಸಿಸಿಐ ಈ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು.
ಎರಡನೇ ಡಿಮ್ಯಾಂಡ್, ಎರಡು ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಗಂಭೀರ್, ತಾವು ತಮಗೆ ಬೇಕಾದ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್ ಸೇರಿದಂತೆ ಸಹಾಯಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಪೂರ್ಣ ಸ್ವತಂತ್ರ ನೀಡಬೇಕು.
ಮೂರನೇ ಹಾಗೂ ಅತಿಮುಖ್ಯ ಬೇಡಿಕೆಯೆಂದರೆ, 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಅವರಿಗೆ ಕೊನೆಯ ಅವಕಾಶ ಎನಿಸಲಿದೆ
ಒಂದು ವೇಳೆ ಈ ಟೂರ್ನಿಯಲ್ಲಿ ಭಾರತ ಟ್ರೋಫಿ ಗೆಲ್ಲಲು ಸೂಕ್ತ ಪ್ರದರ್ಶನ ತೋರದೇ ಹೋದರೆ, ತಂಡದಿಂದ ಕೈಬಿಡಲಾಗುವುದು ಎನ್ನುವುದು ನೆನಪಿರಲಿ ಎಂದು ತಿಳಿಸಿದ್ದಾರೆ.
ಇನ್ನು ನಾಲ್ಕನೇ ಡಿಮ್ಯಾಂಡ್ ಎಂದರೆ, ಭಾರತ ತಂಡವು ಸೀಮಿತ ಓವರ್‌ಗಳಿಗೆ ಪ್ರತ್ಯೇಕ ತಂಡ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಪ್ರತ್ಯೇಕ ತಂಡವನ್ನು ನೇಮಕ ಮಾಡಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಇನ್ನು ಕೊನೆಯದಾಗಿ 2027ರ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲಲು ಈಗಿನಿಂದಲೇ ತಮ್ಮ ರೋಡ್‌ಮ್ಯಾಪ್ ಸಿದ್ದಪಡಿಸಿಕೊಳ್ಳಲು ತಾವು ತೆಗೆದುಕೊಳ್ಳುವ ನಿರ್ಧಾರವನ್ನು ಬಿಸಿಸಿಐ ಬೆಂಬಲಿಸಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ.
ಒಂದು ವೇಳೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ಗೆಲ್ಲದೇ ಹೋದರೆ ಹಿರಿಯ ಆಟಗಾರರನ್ನು ಸೀಮಿತ ಓವರ್‌ಗಳ ತಂಡದಿಂದ ಕೈಬಿಟ್ಟು ಟೆಸ್ಟ್ ಆಡಲು ಅವಕಾಶ ನೀಡುತ್ತಾರೋ ಅಥವಾ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಹಿರಿಯ ಆಟಗಾರರಿಗೆ ಗೇಟ್‌ಪಾಸ್ ನೀಡಲಾಗುತ್ತದೆಯೇ ಎನ್ನುವುದಕ್ಕೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.