ಟೀಂ ಇಂಡಿಯಾದ ಮೊದಲ ಟಿ20 ಕ್ಯಾಪ್ಟನ್ ಯಾರು ಗೊತ್ತಾ? ಧೋನಿಯಂತೂ ಅಲ್ಲವೇ ಅಲ್ಲ
ಭಾರತ ಪುರುಷರ ಕ್ರಿಕೆಟ್ ತಂಡವು ಟಿ20 ಮಾದರಿಯಲ್ಲಿ ಜಗತ್ತಿನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಮೂರು ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ಎನ್ನುವ ಹೆಗ್ಗಳಿಕೆ ಭಾರತಕ್ಕಿದೆ. ಅಂದಹಾಗೆ ಮೊದಲ ಬಾರಿಗೆ ಭಾರತ ಟಿ20 ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಯಾರು ಗೊತ್ತಾ?

ಮೂರು ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಭಾರತ
ಐಸಿಸಿ ಟಿ20 ವಿಶ್ವಕಪ್ ವಿಶ್ವಕಪ್ ಟೂರ್ನಿಯಲ್ಲಿ ಬರೋಬ್ಬರಿ ಮೂರು ಬಾರಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದಷ್ಟೇ ಅಲ್ಲದೇ ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ಎನ್ನು ಹೆಗ್ಗಳಿಕೆ ಟೀಂ ಇಂಡಿಯಾಗಿದೆ. ಭಾರತ ತಂಡವು 2007, 2024 ಹಾಗೂ 2026ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಭಾರತದ ಮೊದಲ ಟಿ20 ನಾಯಕ ಯಾರು?
ಇಂದು ಟಿ20 ಕ್ರಿಕೆಟ್‌ನ ಅತ್ಯಂತ ಬಲಿಷ್ಠ ತಂಡವಾಗಿ ಭಾರತ ಬೆಳೆದು ನಿಂತಿದೆ. ಐಪಿಎಲ್ ಟೂರ್ನಿಯು ಇದೀಗ ಜಾಗತಿಕ ಮಟ್ಟದಲ್ಲಿ ಒಂದು ಬೆಂಚ್ ಮಾರ್ಕ್ ಸೆಟ್ ಮಾಡಿದೆ. ಹೀಗಿರುವಾಗ, ಭಾರತ ಟಿ20 ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದ್ದು ಯಾರು ಎನ್ನುವ ಕುತೂಹಲ ನಿಮಗೂ ಇರಬಹುದು ಅಲ್ವಾ? ಆ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
2006ರಲ್ಲಿ ಟಿ20 ಕ್ರಿಕೆಟ್ ಅನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ
ಹೌದು, 2026ರಲ್ಲಿ ಭಾರತ ತಂಡವು ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ ಸುಮ್ಮನೆ ಕುತೂಹಲವಿರಲಿ ಎಂದು ಏಕೈಕ ಟಿ20 ಪಂದ್ಯವನ್ನು ಆಯೋಜಿಸಲು ಕೊನೆಯ ಕ್ಷಣದಲ್ಲಿ ತೀರ್ಮಾನಿಸಲಾಗಿತ್ತು. ಆಗ ಟಿ20 ಕ್ರಿಕೆಟ್ ಅಷ್ಟೊಂದು ಜನಪ್ರಿಯತೆ ಪಡೆದುಕೊಂಡಿರಲಿಲ್ಲ. ಅಷ್ಟೇ ಅಲ್ಲ ಆಗ ಟಿ20 ಕ್ರಿಕೆಟ್ ಅನ್ನು ಯಾರೂ ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.
2006ರಲ್ಲಿ ಮೊದಲ ಟಿ20 ಪಂದ್ಯವನ್ನಾಡಿದ ಭಾರತ
ಆಗ ಭಾರತ ಏಕದಿನ ತಂಡದ ನಾಯಕರಾಗಿದ್ದವರು ರಾಹುಲ್ ದ್ರಾವಿಡ್. ಆದರೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಏಕೈಕ ಟಿ20 ಪಂದ್ಯಕ್ಕೂ ಮೊದಲು ದ್ರಾವಿಡ್ ಗಾಯಗೊಂಡಿದ್ದರಿಂದ ಆ ಮ್ಯಾಚ್‌ಗೆ ಅಲಭ್ಯರಾದರು. ಹೀಗಾಗಿ ಹೊಸ ಫಾರ್ಮ್ಯಾಟ್‌ಗೆ ಹೊಂದಿಕೊಳ್ಳುವ ನಾಯಕನ ಹುಡುಕಾಟದಲ್ಲಿದ್ದಾಗ ಬಿಸಿಸಿಐಗೆ ಸಿಕ್ಕಿದ್ದು ವಿಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್.
ಭಾರತದ ಮೊದಲ ಟಿ20 ತಂಡದ ನಾಯಕ ವಿರೇಂದ್ರ ಸೆಹ್ವಾಗ್
ಭಾರತ ಆಡಿದ ಮೊದಲ ಟಿ20 ತಂಡದ ನಾಯಕರಾಗಿದ್ದು ವಿರೇಂದ್ರ ಸೆಹ್ವಾಗ್. ಮೊದಲ ಪಂದ್ಯದಲ್ಲೇ ವೀರೂ ಟಾಸ್ ಗೆಲ್ಲುವುದರ ಜತೆಗೆ ಮ್ಯಾಚ್ ಕೂಡಾ ಗೆದ್ದಿದ್ದರು. ಸೆಹ್ವಾಗ್ 29 ಎಸೆತಗಳಲ್ಲಿ 34 ರನ್ ಚಚ್ಚಿದ್ದರು. ಭಾರತ 127 ರನ್‌ಗಳ ಗುರಿಯನ್ನು ಕೊನೆಯ ಓವರ್‌ನಲ್ಲಿ ರೋಚಕವಾಗಿ ಚೇಸ್ ಮಾಡುವಲ್ಲಿ ಯಶಸ್ವಿಯಾಗಿತ್ತು.
ಸೆಹ್ವಾಗ್ ಹೆಸರಿನಲ್ಲಿದೆ ಅಪರೂಪದ ದಾಖಲೆ
ಅಂದಹಾಗೆ ವಿರೇಂದ್ರ ಸೆಹ್ವಾಗ್ ಇದಕ್ಕೂ ಮೊದಲು ಯಾವ ಮಾದರಿಯಲ್ಲೂ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿರಲಿಲ್ಲ. ಇದೀಗ ಸೆಹ್ವಾಗ್ ಭಾರತ ಟಿ20 ಕ್ರಿಕೆಟ್ ಇತಿಹಾಸದಲ್ಲಿ ನಾಯಕನಾದ ಮೊದಲ ಪಂದ್ಯವನ್ನೇ ಗೆದ್ದು ಒಳ್ಳೆಯ ಅಡಿಪಾಯ ಹಾಕಿಕೊಟ್ಟ ನಾಯಕ ಎನಿಸಿಕೊಂಡರು. ಇದಾದ ಬಳಿಕ 2007ರ ಟಿ20 ವಿಶ್ವಕಪ್‌ನಲ್ಲಿ ಧೋನಿ ನಾಯಕನಾಗಿ ತಾನಾಡಿದ ಮೊದಲ ಟಿ20 ವಿಶ್ವಕಪ್‌ನಲ್ಲೇ ಭಾರತಕ್ಕೆ ಕಪ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

