ಸಿನಿಮಾಗೆ ಬರಲು ಹಾತೊರೆಯುತ್ತಿರುವ ಮಗನಿಗೆ ನಟ ಪ್ರಭುದೇವ್ ಹೇಳಿದ್ದೇನು?
ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ನಟ, ನೃತ್ಯಗಾರ ಪ್ರಭುದೇವ ಅವರ ಮಗನಿಗೆ ಈಗ ನಟನಾಗುವ ಆಸೆ ಬಂದಿದ್ದು, ಸಿನಿಮಾ ರಂಗ ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವ ಮಗನಿಗೆ ಅವರು ಏನು ಹೇಳಿದ್ರು ಎಂಬುದನ್ನು ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸಕ್ಸಸ್ ಫುಲ್ ನಿರ್ದೇಶಕ ಪ್ರಭುದೇವ
ನೃತ್ಯ ನಿರ್ದೇಶಕ, ನಿರ್ಮಾಪಕ, ನಟ, ಚಿತ್ರ ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆ ಪ್ರಭುದೇವ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಅಸಂಖ್ಯಾತ ಚಿತ್ರಗಳಲ್ಲಿ ನಟಿಸಿದ್ದಾರೆ. 30 ವರ್ಷಗಳ ಸಿನಿಮಾ ಜೀವನದಲ್ಲಿ ತನ್ನದೇ ಆದ ಒಂದು ಒಂದು ಛಾಪು ಮೂಡಿಸಿದ್ದಾರೆ. ನಟನೆ ಜೊತೆಗೆ ಬಾಲಿವುಡ್‌ನಲ್ಲಿ ನಿರ್ದೇಶಕರಾಗಿಯೂ ಒಳ್ಳೆ ಹೆಸರು ಮಾಡಿದ್ದಾರೆ.
ಅದ್ಭುತ ನೃತ್ಯದ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿರುವ ಪ್ರಭುದೇವ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಭಿಮಾನಿಗಳು ಅವರನ್ನು ದಕ್ಷಿಣ ಭಾರತದ ಮೈಕೆಲ್ ಜಾಕ್ಸನ್ ಎಂದೂ ಕರೆಯುತ್ತಾರೆ. ನೃತ್ಯ ಕ್ಷೇತ್ರದಲ್ಲಿನ ಅವರ ಅತ್ಯುತ್ತಮ ಕೊಡುಗೆಗಾಗಿ 2019 ರಲ್ಲಿ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.
'ಇಂದು' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ ಪ್ರಭುದೇವ ಅವರಿಗೆ ಕಾದಲನ್, ಮಿಸ್ಟರ್ ರೋಮಿಯೋ, ವಿಕೆಐಪಿ, ವಾನತ್ತೈ ಪೋಲ, ಏಳೈಯಿನ್ ಸಿರಿಪ್ಪಿಲ್, ಪೆಣ್ಣಿನ್ ಮನದೈ ತೊಟ್ಟು ಚಿತ್ರಗಳು ತಿರುವು ನೀಡಿದವು. 1990 ಮತ್ತು 2000 ರ ದಶಕದಲ್ಲಿ ಅವರು ಅತ್ಯಂತ ಬ್ಯುಸಿ ನಟರಾಗಿದ್ದರು. ಕೆಲವು ವರ್ಷಗಳ ಕಾಲ ಬಾಲಿವುಡ್‌ನಲ್ಲಿ ನಿರ್ದೇಶನ ಮಾಡಲು ಹೋದ ಪ್ರಭುದೇವ, ಈಗ ಮತ್ತೆ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ತಮ್ಮ ಮಗನಿಗೂ ನಟನೆಯ ಮೇಲೆ ಆಸಕ್ತಿ ಮೂಡಿದೆ ಎಂದು ಪ್ರಭುದೇವ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹೌದು, ಅವರ ಮಗ ಬಸವರಾಜು ಸುಂದರಂ ಸಿನಿಮಾದಲ್ಲಿ ನಟಿಸಬೇಕೆಂದು ತಂದೆಯ ಬಳಿ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾನಂತೆ.
ಶಿಫಾರಸು ಮಾಡಲು ನಿರಾಕರಿಸಿದ ಪ್ರಭುದೇವ
ಅವನು ಹಾಗೆ ಹೇಳಿದ್ದು ನನಗೆ ಆಶ್ಚರ್ಯ ತಂದಿತು. ನನ್ನ ಮಗನಿಗೆ ಸಿನಿಮಾ ಅಂದ್ರೆ ಇಷ್ಟವಿರಲಿಲ್ಲ. ನಾನು ಡ್ಯಾನ್ಸ್ ರಿಹರ್ಸಲ್‌ಗೆ ಹೋಗುವಾಗ ಬಾ ಅಂದ್ರೂ ಬೇಡ ಅಪ್ಪ, ನೀವು ಡ್ಯಾನ್ಸ್ ಮಾಡೋದನ್ನ ನಾನು ನೋಡಬೇಕಾ ಅಂತ ಹೇಳ್ತಿದ್ದ. ಹಾಗೆ ಹೇಳ್ತಿದ್ದವನು ಈಗ ಸಿನಿಮಾದಲ್ಲಿ ನಟಿಸಬೇಕು ಅಂತ ಹೇಳ್ತಿದ್ದಾನೆ. ಅವನಿಗೆ ಏನು ಉತ್ತರ ಹೇಳಬೇಕು ಅಂತಲೇ ಗೊತ್ತಾಗಲಿಲ್ಲ. ಯಾಕಂದ್ರೆ ಸಿನಿಮಾ ತುಂಬಾ ಕಷ್ಟ. ಅವನೇ ಕಷ್ಟಪಟ್ಟು, ಶ್ರಮದಿಂದ ಸಿನಿಮಾಗೆ ಬರಬೇಕು ಅಂತ ನಾನು ಯಾವ ಶಿಫಾರಸನ್ನೂ ಮಾಡಲ್ಲ ಅಂತ ಹೇಳಿಬಿಟ್ಟೆ. ಅಪ್ಪನ ಶಿಫಾರಸು ಇಲ್ಲದೆ ಈಗ ಪ್ರಭುದೇವ ಪುತ್ರ ಸಿನಿಮಾದಲ್ಲಿ ಯಶಸ್ಸು ಗಳಿಸಲು ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.