- Home
- Entertainment
- Cine World
- ಲಿವಿನ್‌ಟುಗೆದರ್ ನಲ್ಲಿದ್ದ ನಿರ್ದೇಶಕನ ಮಕ್ಕಳಿಂದಲೇ ಕೊಲೆಯಾಗಿ ದುರಂತ ಅಂತ್ಯ ಕಂಡ ಸೂಪರ್‌ಸ್ಟಾರ್ ನಟಿ
ಲಿವಿನ್‌ಟುಗೆದರ್ ನಲ್ಲಿದ್ದ ನಿರ್ದೇಶಕನ ಮಕ್ಕಳಿಂದಲೇ ಕೊಲೆಯಾಗಿ ದುರಂತ ಅಂತ್ಯ ಕಂಡ ಸೂಪರ್‌ಸ್ಟಾರ್ ನಟಿ
ಬಾಲಿವುಡ್ ನ ಈ ನಟಿ 70 ರ ದಶಕದ ಸೂಪರ್‌ಸ್ಟಾರ್ ಆಗಿ ಮಿಂಚಿದ್ದರು. ಬಾಲ್ಯದಿಂದಲೂ ನಟನೆಯತ್ತ ಒಲವು ಹೊಂದಿದ್ದ ಈ ನಟಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ ಲಂಡನ್‌ನಲ್ಲಿ ನಟನೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕನ ಜೊತೆ ಕೆಲಸ ಮಾಡಿ ಆತನೊಂದಿಗೆ ಡೇಟಿಂಗ್‌ನಲ್ಲಿದ್ದರು. ಬಳಿಕ ಮದುವೆಯಾಗದೆ ಕೊನೆವರೆಗೂ ಲಿವ್‌ಇನ್ ಟುಗೆದರ್‌ನಲ್ಲಿದ್ದರು. ಆದರೆ ಕೊನೆಗೆ ಆ ಪ್ರಸಿದ್ಧ ನಿರ್ಮಾಪಕನ ಮಕ್ಕಳಿಂದಲೇ ಕೊಲೆಯಾಗಿ ದುರಂತ ಅಂತ್ಯಕಂಡರು.

ಡಿಸೆಂಬರ್ 30, 1936 ರಂದು ಜನಿಸಿದ ಪ್ರಿಯಾ ರಾಜವಂಶ್ ಅವರು 1970 ರ ದಶಕದಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್ ಆಗಿದ್ದರು. ಹೀರ್ ರಾಂಜಾ (1970) ಮತ್ತು ಹಂಸ್ಟೆ ಝಖ್ಮ್ (1973) ಸೇರಿದಂತೆ ಆ ಕಾಲದ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಿಯಾ ರಾಜವಂಶ್ ಅವರ ಮೂಲ ಹೆಸರು ವೀರ ಸುಂದರ್ ಸಿಂಗ್. ಅವರು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜನಿಸಿದರು.
ಪ್ರಿಯಾ ರಾಜವಂಶ್ ಅವರ ತಂದೆ ಅರಣ್ಯ ಇಲಾಖೆಯಲ್ಲಿ ಸಂರಕ್ಷಣಾಧಿಕಾರಿಯಾಗಿದ್ದರು. ಪ್ರಿಯಾ ರಾಜವಂಶ್ ಬಾಲ್ಯದಿಂದಲೂ ನಟನೆಯತ್ತ ಒಲವು ಹೊಂದಿದ್ದರು ಮತ್ತು ಅದಕ್ಕಾಗಿಯೇ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ ಯುಕೆ ಲಂಡನ್‌ನಲ್ಲಿರುವ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ (RADA) ಗೆ ಸೇರಿದರು.
ಬಾಲಿವುಡ್‌ನಲ್ಲಿ ಪ್ರಿಯಾ ರಾಜವಂಶ್ ಅವರ ಪ್ರವೇಶವು ಸಾಕಷ್ಟು ನಾಟಕೀಯವಾಗಿದೆ. ಏಕೆಂದರೆ ಅವರು ಲಂಡನ್‌ನಲ್ಲಿದ್ದಾಗ ಅವರ ಒಂದು ಫೋಟೋ ಆ ಕಾಲದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಾಗಿದ್ದ ಠಾಕೂರ್ ರಣವೀರ್ ಸಿಂಗ್ ಅವರ ಗಮನವನ್ನು ಸೆಳೆಯಿತು.
1962 ರಲ್ಲಿ, ರಣವೀರ್ ಸಿಂಗ್ ಅವರು ನಿರ್ಮಾಪಕ ಚೇತನ್ ಆನಂದ್, (ದೇವ್ ಆನಂದ್ ಮತ್ತು ವಿಜಯ್ ಆನಂದ್ ಅವರ ಸಹೋದರ) ಅವರನ್ನು ಭೇಟಿ ಮಾಡಲು ಪ್ರಿಯಾ ಅವರನ್ನು ಕರೆತಂದರು ಮತ್ತು ಚೇತನ್ ಆನಂದ್ ಅವರು ನಿರ್ಮಿಸಿದ ಹಕೀಕತ್ (1964) ಗೆ ಅವರು ನಟಿಸಿದರು. ಶೀಘ್ರದಲ್ಲೇ, ಚೇತನ್ ಆನಂದ್ ಮತ್ತು ಪ್ರಿಯಾ ರಾಜವಂಶ್ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಅವರು ಚೇತನ್ ಆನಂದ್ ಅವರ ಚಿತ್ರಗಳಲ್ಲಿ ಮಾತ್ರ ಕೆಲಸ ಮಾಡಲು ನಿರ್ಧರಿಸಿದರು.
ಪ್ರಿಯಾ ಅವರ ಅತ್ಯಂತ ಜನಪ್ರಿಯ ಚಿತ್ರ ಹೀರ್ ರಾಂಜಾ, ಇದು 1970 ರಲ್ಲಿ ಬಿಡುಗಡೆಯಾಯಿತು. ಹೀರ್ ರಾಂಜಾದಲ್ಲಿ, ಪ್ರಿಯಾ ರಾಜವಂಶ್ ಅವರಿಗೆ ಆಗಿನ ಬಾಲಿವುಡ್ ಸೂಪರ್‌ಸ್ಟಾರ್ ರಾಜ್ ಕುಮಾರ್ ಜೋಡಿಯಾಗಿದ್ದರು. ಚಿತ್ರವು ದೊಡ್ಡ ಹಿಟ್ ಆಯ್ತು, ಸಾಕಷ್ಟು ಹೆಸರು ತಂದುಕೊಟ್ಟಿತು.
ಆಕೆಯ ಇತರ ಪ್ರಸಿದ್ಧ ಚಿತ್ರಗಳೆಂದರೆ ಹಂಸ್ಟೆ ಝಖ್ಮ್, ಹಿಂದೂಸ್ತಾನ್ ಕಿ ಕಸಮ್ (1973), ಕುದ್ರತ್ (1981) ಮತ್ತು ಸಾಹೇಬ್ ಬಹದ್ದೂರ್. 1985 ರಲ್ಲಿ ಬಿಡುಗಡೆಯಾದ ಹಾಥೋನ್ ಕಿ ಲಕೆರೆನ್, ಪ್ರಿಯಾ ರಾಜವಂಶ್ ಅವರ ಕೊನೆಯ ಚಿತ್ರ. ಈ ಚಿತ್ರದ ನಂತರ ಪ್ರಿಯಾ ನಟನೆಗೆ ವಿದಾಯ ಹೇಳಿದರು
ಪ್ರಿಯಾ ರಾಜವಂಶ್ ಮತ್ತು ನಿರ್ಮಾಪಕ ಚೇತನ್ ಆನಂದ್ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇಬ್ಬರೂ ಮದುವೆಯಾಗಲಿಲ್ಲ. ಕೊನೆವರೆಗೂ ಲಿವಿನ್ ಟುಗೆದರ್‌ನಲ್ಲಿದ್ದರು. ಚೇತನ್ ಆನಂದ್ 1997 ರಲ್ಲಿ ಮರಣಹೊಂದಿದಾಗ, ತನ್ನ ಆಸ್ತಿಯ ಉಯಿಲಿನಲ್ಲಿ ಪ್ರಿಯಾ ರಾಜವಂಶ್ ಅವರಿಗೂ ಹಕ್ಕಿದೆ ಎಂದು ಬರೆದಿದ್ದರು.
ಹೀಗಾಗಿ ಪ್ರಿಯಾ ರಾಜವಂಶ್, ಚೇತನ್ ಆನಂದ್ ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಆಸ್ತಿಯಲ್ಲಿ ಭಾಗ ಪಡೆದರು. ಮಾರ್ಚ್ 27, 2000 ರಂದು ಮುಂಬೈನ ಚೇತನ್ ಆನಂದ್ ಅವರ ಬಂಗಲೆಯಲ್ಲಿ ಪ್ರಿಯಾ ಅವರನ್ನು ಕೊಲೆ ಮಾಡಲಾಯಿತು.
ಚೇತನ್ ಆನಂದ್ ಅವರ ಮಕ್ಕಳಾದ ಕೇತನ್ ಆನಂದ್ ಮತ್ತು ವಿವೇಕ್ ಆನಂದ್ ಅವರನ್ನು ಕೊಲೆಯ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಮಾತ್ರವಲ್ಲ ಜುಲೈ 2002 ರಲ್ಲಿ ವಿಚಾರಣಾ ನ್ಯಾಯಾಲಯವು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತು. ಎರಡು ವರ್ಷ ಇಬ್ಬರೂ ಜೈಲಿನಲ್ಲಿದ್ದರು. ಮನೆಯ ಕೆಲಸದಾಳುಗಳ ಜೊತೆ ಸೇರಿ ಪ್ರಿಯಾಳನ್ನು ಪುತ್ರರು ಕೊಲೆ ಮಾಡಿದ್ದರು.
ನಂತರ ಅವರಿಗೆ ನವೆಂಬರ್ 2002 ರಲ್ಲಿ ಷರತ್ತುಬದ್ಧ ಜಾಮೀನು ನೀಡಲಾಯಿತು ಮತ್ತು 2011 ರಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅವರ ಮೇಲ್ಮನವಿಯನ್ನು ವಿಚಾರಣೆ ಮಾಡಲು ಬಾಂಬೆ ಹೈಕೋರ್ಟ್ ಒಪ್ಪಿಕೊಂಡಿತು. ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ಇನ್ನೂ ವಿಚಾರಣೆ ಹಂತದಲ್ಲಿದೆ. ಪ್ರಿಯಾ ರಾಜವಂಶ್ ಅವರ ನಿಗೂಢ ಜೀವನವನ್ನು ತೆರೆಗೆ ತರುತ್ತಿದ್ದಾರೆ ಪ್ರದೀಪ್ ಸರ್ಕಾರ್. ಪ್ರಿಯಾ ಪಾತ್ರಕ್ಕೆ ಜಾಕ್ವಲೀನ್ ಫರ್ನಾಂಡಿಸ್ ಅವರನ್ನು ಆಯ್ಕೆ ಮಾಡಲಾಗಿದೆ.