ಚಾಮರಾಜನಗರ: ಗಾಜನೂರಿಗೆ ಭೇಟಿ ನೀಡಿದ ಶಿವಣ್ಣ ದಂಪತಿ, ಸೋದರತ್ತೆಯ ಆಶೀರ್ವಾದ ಪಡೆದ ಹ್ಯಾಟ್ರಿಕ್ ಹೀರೋ!
ಚಾಮರಾಜನಗರ(ನ.02): ದೀಪಾವಳಿ ಸಡಗರ ಹಿನ್ನೆಲೆಯಲ್ಲಿ ತಮಿಳುನಾಡಿನ ತಾಳವಾಡಿ ಸಮೀಪ ಇರುವ ಗಾಜನೂರಿಗೆ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರೊಟ್ಟಿಗೆ ಇಂದು(ಶನಿವಾರ) ಭೇಟಿ ನೀಡಿದ್ದಾರೆ.
ಗಾಜನೂರಿನಲ್ಲಿರುವ ಮನೆಗೆ ಭೇಟಿ ಕೊಟ್ಟ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಡಾ.ರಾಜಕುಮಾರ್ ಸಹೋದರಿಯಾದ ಸೋದರತ್ತೆ ನಾಗಮ್ಮ ಅವರ ಆಶೀರ್ವಾದವನ್ನ ಪಡೆದಿದ್ದಾರೆ.
ಶಿವಣ್ಣನನ್ನು ಕಂಡ ನಾಗಮ್ಮ ಅಪ್ಪಿ ಆಶೀರ್ವಾದ ಮಾಡಿದರು. ಅಣ್ಣಾವ್ರು ಹುಟ್ಟಿದ ಹಳೇ ಮನೆ, ಮಂಟೇಸ್ವಾಮಿ ದೇಗುಲ ಸೇರಿದಂತೆ ಊರನ್ನು ಸುತ್ತಾಡಿದ್ದಾರೆ ಶಿವಣ್ಣ ದಂಪತಿ.
ಇದೇ ವೇಳೆ ಅಭಿಮಾನಿಯೊಬ್ಬರ ಕ್ಷೀರ ಕೇಂದ್ರಕ್ಕೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಭೇಟಿ ಕೊಟ್ಟು ಶುಭ ಹಾರೈಸಿ ಬಂದಿದ್ದಾರೆ.
ಇನ್ನು, ನೆಚ್ಚಿನ ನಟನನ್ನು ನೋಡಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳ ದಂಡೇ ಸೇರಿತ್ತು. ಫೋಟೋಗಾಗಿ ಮುಗಿಬಿದ್ದಿದ್ದರು.