- Home
- Entertainment
- Cine World
- ಮದುವೆ ಬಳಿಕ ಬಾಲಿವುಡ್ ನ ಎರಡನೇ ಚಿತ್ರಕ್ಕೆ ಕೀರ್ತಿ ಸುರೇಶ್ ಸಹಿ, ರಾಜ್‌ಕುಮಾರ್ ರಾವ್ ಜತೆ ಒಪ್ಪಂದ!
ಮದುವೆ ಬಳಿಕ ಬಾಲಿವುಡ್ ನ ಎರಡನೇ ಚಿತ್ರಕ್ಕೆ ಕೀರ್ತಿ ಸುರೇಶ್ ಸಹಿ, ರಾಜ್‌ಕುಮಾರ್ ರಾವ್ ಜತೆ ಒಪ್ಪಂದ!
ಮದುವೆಯ ನಂತರ ಕೀರ್ತಿ ಸುರೇಶ್ ರಾಜ್‌ಕುಮಾರ್ ರಾವ್ ಜೊತೆಗೆ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರ ಭಾರತೀಯ ಶಿಕ್ಷಣ ವ್ಯವಸ್ಥೆಯ ವಾಣಿಜ್ಯೀಕರಣದ ಬಗ್ಗೆ ಹಾಸ್ಯಮಯ ರೀತಿಯಲ್ಲಿ ಬೆಳಕು ಚೆಲ್ಲಲಿದೆ. ಜೂನ್ 1 ರಿಂದ ಮುಂಬೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಮದುವೆಯ ನಂತರ ಕೀರ್ತಿ ಸುರೇಶ್ ಮೊದಲ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಮಾತ್ರವಲ್ಲ ಬಾಲಿವುಡ್ ಮೇರಿ ಜಾನ್ ಚಿತ್ರದಲ್ಲಿ ನಟಿಸಿದ ನಂತರ ತಮ್ಮ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರ ಭಾರತೀಯ ಶಿಕ್ಷಣ ವ್ಯವಸ್ಥೆಯ ಕುರಿತಾಗಿದ್ದು, ಕೀರ್ತಿ ಒಬ್ಬ ಶಿಕ್ಷಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕೀರ್ತಿ ಸುರೇಶ್ ಎರಡು ತೆಲುಗು ಚಿತ್ರಗಳಲ್ಲಿ ನಟಿಸಲು ಮಾತುಕತೆ ನಡೆಸುತ್ತಿದ್ದಾರೆ. ಅದರಲ್ಲಿ ಒಂದು ನಟ ಸೂರ್ಯ ನಟಿಸುತ್ತಿರುವ ಚಿತ್ರ. ಇದನ್ನು ವೆಂಕಿ ಅಟ್ಲುರಿ ನಿರ್ದೇಶಿಸುತ್ತಿದ್ದಾರೆ. ಕೀರ್ತಿ 'ಅಕ್ಕ' ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈ ಟೀಸರ್ ಬಿಡುಗಡೆಯಾಗಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಈ ವೆಬ್ ಸರಣಿಯಲ್ಲಿ ನಟಿ ರಾಧಿಕಾ ಆಪ್ಟೆ ಜೊತೆ ನಟಿಸಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಬಾಲಿವುಡ್‌ನ ಪ್ರಖ್ಯಾತ ಜೋಡಿ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ನಟನೆಯ ಜೊತೆಗೆ ನಿರ್ಮಾಣ ಕ್ಷೇತ್ರದಲ್ಲಿಯೂ ತಮ್ಮದೇ ಆದ ಮುದ್ರೆ ಒತ್ತುತ್ತಿದ್ದಾರೆ. ತಮ್ಮ ಮೊದಲ ನಿರ್ಮಾಣ ಚಿತ್ರವಾದ 'ಟೋಸ್ಟರ್' ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಈಗ ತಮ್ಮ ಎರಡನೇ ನಿರ್ಮಾಣ ಯೋಜನೆಗೆ ತಯಾರಾಗುತ್ತಿದ್ದಾರೆ. ಈ ಬಾರಿ ಚಿತ್ರದ ನಾಯಕಿಯಾಗಿ ನಟಿ ಕೀರ್ತಿ ಸುರೇಶ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಕೀರ್ತಿ ಸುರೇಶ್, ರಾಷ್ಟ್ರಪುರಸ್ಕೃತ ನಟಿಯಾಗಿ ಹೆಸರು ಗಳಿಸಿರುವುದು ಕೂಡ ಈ ಚಿತ್ರಕ್ಕೂ ನಿರೀಕ್ಷೆ ಹೆಚ್ಚಿಸಿದೆ.
ಹಾಸ್ಯಮಯ ರೀತಿಯಲ್ಲಿ ವಾಣಿಜ್ಯೀಕೃತ ಶಿಕ್ಷಣ ವ್ಯವಸ್ಥೆಯ ಸತ್ಯ
ಬಿಟೌನ್ ಮೂಲಗಳ ಪ್ರಕಾರ, ಈ ಚಿತ್ರವು ಇಂದಿನ ಶಿಕ್ಷಣದ ವಾಣಿಜ್ಯೀಕರಣದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲಿದೆ. ಶಿಕ್ಷಣವು ಜ್ಞಾನವನ್ನು ಹರಡುವ ಪವಿತ್ರ ಕ್ಷೇತ್ರವಾಗಿರುವ ಬದಲು, ಲಾಭಕಾಂಕ್ಷೆಯ ವ್ಯಾಪಾರವಾಗಿದೆ ಎಂಬ ಸತ್ಯವನ್ನು ಹಾಸ್ಯಭರಿತ ನಿರೂಪಣೆಯ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಪ್ರಮುಖ ಪಾತ್ರಧಾರಿಗಳು ಶಿಕ್ಷಕರ ಭೂಮಿಕೆಯಲ್ಲಿದ್ದಾರೆ. ಇದೊಂದು ಚಿಂತನೆಯನ್ನು ಹೆಚ್ಚಿಸುವ ಸಾಮಾಜಿಕ ಸಂದೇಶವಿರುವ ಚಿತ್ರವಾಗಲಿದೆ. ಇಂದಿನ ಸಮಾಜದ ನೈಜ ಚಿತ್ರಣ ನೀಡುವ ಉದ್ದೇಶದಿಂದ ಚಿತ್ರಕಥೆ ರೂಪುಗೊಂಡಿದ್ದು, ರಾಜ್ ಕುಮಾರ್ ರಾವ್ ದಂಪತಿಯ ಗಂಭೀರ ನಿಲುವು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಜೂನ್ 1ರಿಂದ ಮುಂಬೈನಲ್ಲಿ ಚಿತ್ರೀಕರಣ ಆರಂಭ
ಚಿತ್ರದ ಚಿತ್ರೀಕರಣ ಜೂನ್ 1ರಂದು ಮುಂಬೈನಲ್ಲಿ ಆರಂಭವಾಗಲಿದ್ದು, ಸುಮಾರು 45 ದಿನಗಳ ಕಟ್ಟುನಿಟ್ಟಾದ ಚಿತ್ರೀಕರಣ ವೇಳಾಪಟ್ಟಿ ರೂಪುಗೊಳಿಸಲಾಗಿದೆ. ನಿರ್ಮಾಪಕರಾಗಿ ಹೊಸಬರಾಗಿದ್ದರೂ, ರಾಜ್‌ಕುಮಾರ್ ಮತ್ತು ಪತ್ರಲೇಖಾ ಚಿತ್ರವನ್ನು ಸರಾಗವಾಗಿ ನಡೆಸಲು ಪೂರ್ಣಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, "ರಾಜ್‌ಕುಮಾರ್ ಮತ್ತು ಪತ್ರಲೇಖಾ ನಿರ್ಮಾಪಕರಾಗಿ ಸ್ಪಷ್ಟ ದೃಷ್ಟಿಕೋನ ಹೊಂದಿದ್ದಾರೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವಿರುವ ಪ್ರಸ್ತುತಕಾಲೀನ ಕಥೆಗಳಿಗೆ ಬೆಂಬಲ ನೀಡುವ ಉದ್ದೇಶವನ್ನು ಅವರು ಹೊಂದಿದ್ದಾರೆ," ಎಂದು ತಿಳಿದುಬಂದಿದೆ. ಈ ಚಿತ್ರವು ಮನರಂಜನೆ ಮತ್ತು ಸಮಾಜಮುಖಿ ಸಂದೇಶಗಳ ಸಮನ್ವಯ ಹೊಂದಿದ್ದು. ಪ್ರಸ್ತುತತೆಯಲ್ಲಿ ಸಮಸ್ಯೆಗಳನ್ನು ಚರ್ಚೆಗೆ ತರುವ, ಆಲೋಚನೆಗೆ ತೊಡಗಿಸುವ ಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಿರುವುದು ಸ್ಪಷ್ಟವಾಗಿದೆ.
'ಟೋಸ್ಟರ್' ಮೂಲಕ ಯಶಸ್ವಿ ಆರಂಭ
ಇವರ ಮೊದಲ ನಿರ್ಮಾಣ 'ಟೋಸ್ಟರ್'ನಲ್ಲಿ ಅಭಿಷೇಕ್ ಬ್ಯಾನರ್ಜಿ, ಸನ್ಯಾ ಮಲ್ಹೋತ್ರಾ, ಅರ್ಚನಾ ಪುರನ್ ಸಿಂಗ್, ಫರಾ ಖಾನ್, ಉಪೇಂದ್ರ ಲಿಮಾಯೆ, ಸೀಮಾ ಪಹ್ವಾ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ದಾಸ್ ಚೌಧರಿ ನಿರ್ದೇಶನದಲ್ಲಿ ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. 2021ರ ನವೆಂಬರ್ 15ರಂದು ಚಂಡೀಗಢದಲ್ಲಿ ವಿವಾಹವಾದ ಈ ದಂಪತಿ, ಸಿನಿಮಾರಂಗದಲ್ಲಿ ತಮ್ಮ ಅಭಿರುಚಿ ಮತ್ತು ಸಮಾಜಪರ ಕಾಳಜಿಯನ್ನು ತೋರಿಸುತ್ತಾ, ಸಿನಿಮಾದೊಂದಿಗೆ ಚಿಂತನೆ ಪ್ರೇರೇಪಿಸುವ ಪ್ರಭಾವವನ್ನೂ ಸೃಷ್ಟಿಸಲು ಮುಂದಾಗಿದ್ದಾರೆ.