ವಿಚ್ಚೇದನೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ನಾಗಚೈತನ್ಯ..!
- ಟಾಲಿವುಡ್ ಸೂಪರ್ ಜೋಡಿಯ ವಿಚ್ಚೇದನೆ ನಡೆಯೋದು ಹೌದಾ ?
- ವದಂತಿ ಆರಂಭವಾದ ಮೇಲೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ, ಸಮಂತಾ ಮೌನ
ಟಾಲಿವುಡ್ ನಟ ನಾಗ ಚೈತನ್ಯ ಅವರು ತಮ್ಮ ವೈಯಕ್ತಿಕ ಜೀವನದ ಕುರಿತ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಚ್ಚೇದನೆ ಸುದ್ದಿಯಾಗುತ್ತಿದ್ದಂತೆ ಇದೇ ಮೊದಲ ಬಾರಿಗೆ ಸ್ಟಾರ್ ಕಪಲ್ ಕಡೆಯಿಂದ ಒಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿನಿಮಾ ಪ್ರಚಾರ ಮಾಡುವಾಗ ಅವರ ಪತ್ನಿ ಸಮಂತಾ ಅಕ್ಕಿನೇನಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ವಾರಗಳಲ್ಲಿ ಸೌತ್ ಸ್ಟಾರ್ ಕಪಲ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂದು ವದಂತಿಗಳಿವೆ.
ಸಂದರ್ಶನವೊಂದರಲ್ಲಿ ನಾಗಚೈತನ್ಯ ಅವರಲ್ಲಿ ವಿಚ್ಚೇದನೆ ಸುದ್ದಿ ಮಧ್ಯೆ ಕೆಲಸದ ಸಮಯದಲ್ಲಿ ಹೇಗೆ ಗಮನವಿಟ್ಟು ನಿರ್ವಹಿಸುತ್ತೀರಿ ಎಂದು ಕೇಳಲಾಗಿದೆ. ಇದಕ್ಕೆ ನಟ ಉತ್ತರ ಕೊಟ್ಟಿದ್ದಾರೆ.
ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಿಂದ ವೃತ್ತಿ ಜೀವನವನ್ನು ವೈಯಕ್ತಿಕಜೀವನದಿಂದ ಬೇರ್ಪಡಿಸುವ ಅಭ್ಯಾಸವನ್ನು ಫಾಲೋ ಮಾಡಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.
ನನ್ನ ವೃತ್ತಿಜೀವನದ ಮೊದಲಿನಿಂದಲೂ, ನಾನು ನನ್ನ ವೈಯಕ್ತಿಕ ಜೀವನವನ್ನು ವೈಯಕ್ತಿಕವಾಗಿ ಮತ್ತು ನನ್ನ ವೃತ್ತಿಪರ ಜೀವನವನ್ನು ವೃತ್ತಿಪರವಾಗಿ ಇರಿಸಿಕೊಂಡಿದ್ದೇನೆ. ನಾನು ಎರಡನ್ನೂ ಮಿಕ್ಸ್ ಮಾಡುವುದೇ ಇಲ್ಲ ಎಂದಿದ್ದಾರೆ.
ತಂದೆ ಮನೆಗೆ ಬಂದ ನಾಗಚೈತನ್ಯ: ಬಾಲಿವುಡ್ ಕನಸಿನಲ್ಲಿ ಸಮಂತಾ ಮುಂಬೈಗೆ ಶಿಫ್ಟ್ ?
ನಾನು ಬೆಳೆಯುತ್ತಿರುವಾಗ ನನ್ನ ಹೆತ್ತವರಿಂದ ಕಲಿತ ಈ ಅಭ್ಯಾಸವನ್ನು ನಾನು ಯಾವಾಗಲೂ ಅನುಸರಿಸಿದ್ದೇನೆ. ಅವರು ಮನೆಗೆ ಬಂದ ಮೇಲೆ ಕೆಲಸದ ಬಗ್ಗೆ ಮಾತನಾಡುತ್ತಿರಲಿಲ್ಲ.
ಅವರು ಕೆಲಸಕ್ಕೆ ಹೋದಾಗ ಅವರ ವೈಯಕ್ತಿಕ ಜೀವನವು ಎಂದಿಗೂ ಕೆಲಸವನ್ನು ಬಾಧಿಸುತ್ತಿರಲಿಲ್ಲ. ಇದರ ಸಮತೋಲನವನ್ನು ಅವರು ನಿರ್ವಹಿಸುತ್ತಿದ್ದರು. ಅದನ್ನು ನಾನು ಯಾವಾಗಲೂ ಗಮನಿಸುತ್ತಿದ್ದೆ ಎಂದಿದ್ದಾರೆ.
ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್ ತನಗೆ ಸೋಷಿಯಲ್ ಮೀಡಿಯಾದಲ್ಲಿ ಆಸಕ್ತಿ ಇಲ್ಲ ಎಂದು ನಾಗಚೈತನ್ಯ ಹೇಳಿದ್ದಾರೆ. ಕಳೆದ ವರ್ಷ ಮೊದಲ ಲಾಕ್‌ಡೌನ್ ನಂತರ ತನ್ನ ಜೀವನದಲ್ಲಿ ಪರಿಚಯಿಸಿದ ಬದಲಾವಣೆ ಇದು ಎಂದಿದ್ದಾರೆ ಲವ್‌ಸ್ಟೋರಿ ನಟ.
ಅವರ ಜೀವನದ ನಿಮಿಷ-ನಿಮಿಷದ ಕವರೇಜ್ ನೋಯಿಸುವುದಿಲ್ಲವೇ ಎಂದು ಕೇಳಿದಾಗ ನಟ, ಆರಂಭದಲ್ಲಿ ನೋವಾಗುತ್ತಿದ್ದದ್ದು ಹೌದು. ಇದು ಸ್ವಲ್ಪ ನೋವಿನಿಂದ ಕೂಡಿದೆ. ಆದರೆ ಅದರ ನಂತರ ನಾನು ಕಲಿತದ್ದು ಏನೆಂದರೆ ಸುದ್ದಿಗಳು ಸುದ್ದಿಯನ್ನು ಬದಲಿಸುತ್ತವೆ ಎಂದಿದ್ದಾರೆ.
.ಇಂದು ಒಂದು ಸುದ್ದಿ ಇದೆ. ನಾಳೆ ಇನ್ನೊಂದು ಸುದ್ದಿ ಇದೆ. ಇಂದಿನ ಸುದ್ದಿ ಮರೆತುಹೋಗುತ್ತದೆ. ಆದರೆ ನನ್ನ ಅಜ್ಜನ ಕಾಲದಲ್ಲಿ, ನಿಯತಕಾಲಿಕೆಗಳು ಇದ್ದವು. ತಿಂಗಳಿಗೊಮ್ಮೆ ನಿಯತಕಾಲಿಕೆಗಳು ಬರುತ್ತಿದ್ದವು.
ಮುಂದಿನ ಸುದ್ದಿಯನ್ನು ನೀವು ಪಡೆಯುವವರೆಗೂ ಆ ಸುದ್ದಿಯು ಉಳಿಯುತ್ತದೆ. ಆದರೆ ಇಂದು ನೀವು ಮುಂದಿನ ಸೆಕೆಂಡ್ ಅಥವಾ ಮುಂದಿನ ನಿಮಿಷದಲ್ಲಿ ಹೊಸ ಸುದ್ದಿಯನ್ನು ಪಡೆಯುತ್ತೀರಿ. ಇದು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.
ನಿಜವಾದ ಸುದ್ದಿ, ಮುಖ್ಯವಾದ ಸುದ್ದಿ ಉಳಿಯುತ್ತದೆ. ಆದರೆ ಮೇಲ್ನೋಟದ ಸುದ್ದಿ, ಟಿಆರ್‌ಪಿಗಾಗಿ ಬಳಸುವ ಸುದ್ದಿ ಮರೆತುಹೋಗುತ್ತವೆ ಎಂದಿದ್ದಾರೆ. ಒಮ್ಮೆ ನಾನು ಈ ಅವಲೋಕನ ಮಾಡಿದ ನಂತರ ಎಂಥಹಾ ಗಾಸಿಪ್ ಸುದ್ದಿಗಳೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.