ಸಂಗೀತ ಮಾಂತ್ರಿಕ ಇಳೆಯರಾಜಗೆ ರಾಷ್ಟ್ರ ಪ್ರಶಸ್ತಿ ತಪ್ಪಿದ್ದು ಒಂದೇ ವೋಟಿನಿಂದ, ಸಿಕ್ಕಿದ್ದು ರೆಹಮಾನ್‌ಗೆ!
ಪಲ್ಲವಿ ಅನುಪಲ್ಲವಿ, ಜೊತೆಯಲಿ ಜೊತೆ ಜೊತೆಯಲ್ಲಿ , ನಮ್ಮೂರ ಮಂದಾರ ಹೂವೇ ಮುಂತಾದ ಸೂಪರ್ ಹಿಟ್ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದ ಸಂಗೀತಾ ಮಾಂತ್ರಿಕ ಇಳಯರಾಜಾ ಕೇವಲ ಒಂದೇ ಒಂದು ಮತದ ಅಂತರದಿಂದ ರಾಷ್ಟ್ರ ಪ್ರಶಸ್ತಿಯಿಂದ ವಂಚಿತರಾಗಿದ್ದರು, ಇಳಯರಾಜಗೆ ಮಿಸ್ ಆಗಿದ್ದ ರಾಷ್ಟ್ರಪ್ರಶಸ್ತಿ ನಂತರ ಎ.ಆರ್ ರೆಹಮಾನ್ ಅವರಿಗೆ ಸಿಕ್ಕಿತ್ತು. ಏನಿದು ಟ್ವಿಸ್ಟ್?
ಸಿನಿಮಾ ಕಲಾವಿದರಿಗೆ ಪ್ರಶಸ್ತಿಗಳೇ ಗುರುತಿಸುವಿಕೆ. ಅದರಲ್ಲೂ ರಾಷ್ಟ್ರ ಮಟ್ಟದಲ್ಲಿ ಪ್ರತಿಯೊಬ್ಬ ಸಿನಿಮಾ ತಾರೆಯೂ ರಾಷ್ಟ್ರ ಪ್ರಶಸ್ತಿ ಪಡೆಯಲು ಬಯಸುತ್ತಾರೆ. ಕೇಂದ್ರ ಸರ್ಕಾರ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿವರ್ಷವೂ ನಡೆಯುತ್ತದೆ. ಇದರಲ್ಲಿ ಪ್ರತಿಯೊಂದೂ ಭಾಷೆಯಲ್ಲೂ ಅತ್ಯುತ್ತಮ ಚಿತ್ರಗಳನ್ನು ಆರಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹೀಗೆ ಗೌರವಯುತವಾದ ಉನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗುವ ರಾಷ್ಟ್ರ ಪ್ರಶಸ್ತಿಯನ್ನು ಒಮ್ಮೆಯೂ ಪಡೆಯದ ಸಿನಿ ತಾರೆಯರೂ ಇಲ್ಲಿದ್ದಾರೆ.
ತಮಿಳು ಚಿತ್ರರಂಗದ ವಿಜಯ್, ಅಜಿತ್, ರಜನಿಕಾಂತ್ ಮುಂತಾದ ದಿಗ್ಗಜ ನಟರಿಗೆ ಇಲ್ಲೀವರೆಗೂ ರಾಷ್ಟ್ರ ಪ್ರಶಸ್ತಿ ಸಿಕ್ಕಿಲ್ಲ.ಸಂಗೀತ ನಿರ್ದೇಶಕರೂ ಇದೇ ಸಾಲಿಗೆ ಸೇರುತ್ತಾರೆ. ಅನಿರುದ್ಧ್, ಯುವನ್ ಶಂಕರ್ ರಾಜಾ, ವಿದ್ಯಾಸಾಗರ್ ಮುಂತಾದ ಪ್ರಸಿದ್ಧ ಸಂಗೀತ ನಿರ್ದೇಶಕರು ಕೂದಲೆಳೆ ಅಂತರದಲ್ಲಿ ರಾಷ್ಟ್ರ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಇಲ್ಲಿಯವರೆಗೆ ಕಾಲಿವುಡ್‌ನಿಂದ ಹೆಚ್ಚು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಸಂಗೀತ ನಿರ್ದೇಶಕರೆಂದರೆ ಇಳಯರಾಜ ಮತ್ತು ಎ.ಆರ್.ರೆಹಮಾನ್.
ಎ.ಆರ್. ರೆಹಮಾನ್ vs ಇಳಯರಾಜ
ಸಂಗೀತ ಮಾಂತ್ರಿಕ ಇಳಯರಾಜ ಇಲ್ಲಿಯವರೆಗೆ 5 ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1983 ರಲ್ಲಿ ಬಿಡುಗಡೆಯಾದ ಸಾಗರ ಸಂಗಮಂ, 1985 ರಲ್ಲಿ ಬಿಡುಗಡೆಯಾದ ಸಿಂಧು ಭೈರವಿ, 1988ರ ರುದ್ರವೀಣಾ, 2009 ರ ಪಳಶಿರಾಜ, 2016 ರ ತಾರೈ ತಪ್ಪಟ್ಟೈ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಕೇಳದೇ ನಿಮಗೀಗ ಸಂಗೀತ ನಿರ್ದೇಶಕ. ಅವರಿಗಿಂತ ಸಂಗೀತ ಚಂಡಮಾರುತ ಎ.ಆರ್.ರೆಹಮಾನ್ ಹೆಚ್ಚು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಎ.ಆರ್. ರೆಹಮಾನ್
ಸಂಗೀತ ಚಂಡಮಾರುತ ಎ.ಆರ್.ರೆಹಮಾನ್, 1992 ರ ರೋಜಾ, 1996 ರ ಮಿನ್ಸಾರ ಕನವು, 2001ರಲ್ಲಿ ಬಿಡುಗಡೆಯಾದ ಲಗಾನ್, 2002 ರಲ್ಲಿ ಕನ್ನತಿಲ್ ಮುತ್ತಮಿಟ್ಟಾಲ್, 2017 ರಲ್ಲಿ ಕಾಟ್ರು ವೆಳಿಯಿಡೈ ಮತ್ತು ಮಮ್, 2022 ರಲ್ಲಿ ಪೊನ್ನಿಯಿನ್ ಸೆಲ್ವನ್ ಹೀಗೆ ಒಟ್ಟು 7 ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ ಎ.ಆರ್.ರೆಹಮಾನ್ ಪಡೆದ ಮೊದಲ ರಾಷ್ಟ್ರ ಪ್ರಶಸ್ತಿ ಹಿಂದೆ ಒಂದು ಕುತೂಹಲಕಾರಿ ಕಥೆಯೂ ಇದೆ.
ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ ಮೊದಲ ಚಿತ್ರ ರೋಜಾ, ಈ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರು. ಈ ಚಿತ್ರಕ್ಕಾಗಿ ರೆಹಮಾನ್ ಸಂಯೋಜಿಸಿದ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆದವು. ಅಲ್ಲಿವರೆಗೆ ಇಳಯರಾಜ ಅವರನ್ನೇ ನಂಬಿದ್ದ ತಮಿಳು ಚಿತ್ರರಂಗಕ್ಕೆ ಹೊಸಬ್ಬ ನಾನಿದ್ದೇನೆ ಎಂದು ತೋರಿಸಿಕೊಟ್ಟವರು ರೆಹಮಾನ್.
ರೋಜಾ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ನಾಮನಿರ್ದೇಶನದಲ್ಲಿ ಎ.ಆರ್.ರೆಹಮಾನ್ ಇದ್ದಾಗ, ಇಳಯರಾಜ ಸಂಗೀತ ಸಂಯೋಜಿಸಿದ ಮಾಸ್ಟರ್ ಪೀಸ್ ಚಿತ್ರವಾದ ತೇವರ್ ಮಗನ್ ಕೂಡ ಸ್ಪರ್ಧೆಯಲ್ಲಿತ್ತು. ಇದರಲ್ಲಿ ತೀರ್ಪುಗಾರರು ಮತ ಚಲಾಯಿಸಿದಾಗ ಎರಡೂ ಚಿತ್ರಗಳಿಗೆ ತಲಾ 6 ಮತಗಳು ಬಂದಿದ್ದವಂತೆ. ಕೊನೆಯದಾಗಿ ಗೆಲುವು ಯಾರೆಂದು ನಿರ್ಧರಿಸುವ ವ್ಯಕ್ತಿಯಾಗಿ ಆಗ ಜೂರಿ ಮೆಂಬರ್ ಆಗಿದ್ದ ಬಾಲು ಮಹೇಂದ್ರ ಇದ್ದರು. ಅವರ ಮತ ಯಾರಿಗೆ ಹೋಗುತ್ತದೆಯೋ ಅವರೇ ವಿಜೇತರು ಎಂಬ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ ಅವರು ಎ.ಆರ್.ರೆಹಮಾನ್‌ಗೆ ಮತ ಚಲಾಯಿಸಿದ್ದರಿಂದ ರಾಷ್ಟ್ರ ಪ್ರಶಸ್ತಿಯನ್ನು ಕಳೆದುಕೊಂಡರು ಇಳಯರಾಜ. ಇದನ್ನು ಬಾಲು ಮಹೇಂದ್ರ ಅವರೇ ಒಂದು ಸಂದರ್ಶನದಲ್ಲಿ ಬಹಿರಂಗವಾಗಿ ಹೇಳಿದ್ದಾರೆ.