52ಕ್ಕೆ ಕಾಲಿಟ್ಟ ಮಂದಿರಾ ಬೇಡಿ; ಈಕೆಯ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ ನೋಡಿ..
ನಟಿ, ಕ್ರಿಕೆಟ್ ಕಾಮೆಂಟೇಟರ್ ಮಂದಿರಾ ಬೇಡಿ 52 ವರ್ಷಕ್ಕೆ ಕಾಲಿಟ್ಟರೂ ಅವರ ದೇಹ ಇನ್ನೂ ಯುವತಿಯಂತೆ ಹುರಿಗಟ್ಟಿದೆ. ನಟಿಯ ಡಯಟ್ ಮತ್ತು ಫಿಟ್ನೆಸ್ ಸೀಕ್ರೆಟ್ ಇಲ್ಲಿವೆ..
ನಟಿ, ನಿರೂಪಕಿ, ಫ್ಯಾಶನ್ ಡಿಸೈನರ್ ಮಂದಿರಾ ಬೇಡಿ ಇಂದು(ಏ.15) 52 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅರ್ಧ ಶತಮಾನ ದಾಟಿದರೂ 25ರ ಯುವತಿಯಂತೆ ಹುರಿಗಟ್ಟಿದ ಮೈ ಪಡೆಯಲು ಮಂದಿರಾ ಫಿಟ್ನೆಸ್ ಫ್ರೀಕ್ ಆಗಿರುವುದೇ ಕಾರಣ.
ನಟಿ ಅನುಸರಿಸುವ ಫಿಟ್ನೆಸ್ ತಂತ್ರಗಳು, ಡಯಟ್ ಫ್ಲ್ಯಾನ್‌ಗಳು ಆರೋಗ್ಯಕರವಾಗಿ, ಸುಂದರವಾಗಿರಲು ಬಯಸುವ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿವೆ.
ಫಿಟ್‌ನೆಸ್ ಐಕಾನ್ ಆಗಿರುವ ನಟಿಯನ್ನು ಅನೇಕರು ನಿಜವಾಗಿಯೂ ಮೆಚ್ಚುತ್ತಾರೆ. ಉತ್ತಮ ವೈನ್‌ನಂತೆ ವಯಸ್ಸಾದಷ್ಟೂ ಸುಂದರವಾಗುತ್ತಿದ್ದಾರೆ. ಫಿಟ್ನೆಸನ್ನು ಮಂದಿರಾರಂತೆ ನೀವೂ ಜೀವನದ ಒಂದು ಭಾಗ ಮಾಡಿಕೊಂಡರೆ ಇಂಥ ದೇಹ ನಿಮ್ಮದೂ ಆಗಬಹುದು.
ಮಂದಿರಾ ಭಾನುವಾರ ಕೂಡಾ ತನ್ನ ವ್ಯಾಯಾಮಕ್ಕೆ ಬಿಡುವು ಕೊಡುವುದಿಲ್ಲ. ವಾರದ ಏಳೂ ದಿನಗಳು ವ್ಯಾಯಾಮಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ.
ಮಂದಿರಾಗೆ ವ್ಯಾಯಾಮ ಎಂದರೆ ಯೋಗ, ಜಿಮ್, ಸ್ಕ್ವಾಶ್, ಹೊರಾಂಗಣ ಓಡುವುದು, ವಾಕಿಂಗ್ ಎಲ್ಲವೂ ಆಗಿದೆ. ಇವುಗಳಲ್ಲಿ ಯಾವುದನ್ನೇ ಮಾಡಿದರೂ ಪೂರ್ಣ ಮನಸ್ಸಿಟ್ಟು ಮಾಡುತ್ತಾರೆ.
ಇನ್ನು, ವ್ಯಾಯಾಮವು ಫಿಟ್ನೆಸ್ ಪ್ರಯಾಣದ ಕೇವಲ ಶೇ.30 ಭಾಗವಾಗಿದೆ. ಉಳಿದ ಶೇ.70 ನಿಮ್ಮ ಆಹಾರವೇ ಫಿಟ್ನೆಸ್‌ಗೆ ಕಾರಣ ಎನ್ನುತ್ತಾರೆ ನಟಿ.
ಸುಸ್ಥಿರ ಆಹಾರವನ್ನು ಅಳವಡಿಸಿಕೊಳ್ಳಬೇಕು ಎಂಬುದು ಮಂದಿರಾ ಮಾತು. ಸ್ವಚ್ಛವಾಗಿ ತಿನ್ನುವುದು ಜೀವನ ವಿಧಾನವಾಗಿದೆ. ವರ್ಕೌಟ್ ಮಾಡುತ್ತೇವಲ್ಲ, ಏನು ಬೇಕಾದ್ರೂ ತಿನ್ನೋಣ ಎಂಬ ಮನಸ್ಥಿತಿ ಸರಿಯಲ್ಲವೇ ಅಲ್ಲ ಎನ್ನುತ್ತಾರೆ ನಟಿ.
ನೀವು ಇಷ್ಟಪಡುವ ಪೌಷ್ಟಿಕಾಂಶದ ಆಹಾರವನ್ನು ಹುಡುಕಿ ಮತ್ತು ಅವುಗಳಲ್ಲಿ ಹೆಚ್ಚು ತಿನ್ನಿರಿ. ಬಾಯಿಚಟಕ್ಕಾಗಿ ಜಂಕ್ ಮೊರೆ ಹೋಗಬೇಡಿ. ಚೀಟಿಂಗ್ ದಿನಗಳು ಕೂಡಾ ಬೇಡ. ಸದಾ ಉತ್ತಮವಾದ ಆಹಾರವನ್ನೇ ಕೊಟ್ಟರೆ ದೇಹ ಉತ್ತಮವಾಗೇ ಆಗುತ್ತದೆ ಎನ್ನುತ್ತಾರೆ ಮಂದಿರಾ.
ತನ್ನ ಆಹಾರ ಯೋಜನೆಯನ್ನು ವಿವರಿಸುತ್ತಾ, ನಟಿ ತಾನು ಮನೆಯಲ್ಲಿ ಬೇಯಿಸಿದ ಆಹಾರಕ್ಕೆ ಮಾತ್ರ ಅಂಟಿಕೊಳ್ಳುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.
ಅವರು ತಮ್ಮ ದಿನವನ್ನು ಕೋಲ್ಡ್ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ ಮತ್ತು ನಂತರ ಕೆಲಸ ಮಾಡುವ ಮೊದಲು ಬಾಳೆಹಣ್ಣು ಸೇವಿಸುತ್ತಾರೆ.
ಮಧ್ಯಾಹ್ನದ ಊಟಕ್ಕೆ ಚಪಾತಿ, ದಾಲ್ ಮತ್ತು ಸಬ್ಜಿ ಸೇವಿಸುವ ಮಂದಿರಾ, ರಾತ್ರಿಯ ಭೋಜನಕ್ಕೆ ಹಗುರ ಊಟ ಆಯ್ಕೆ ಮಾಡಿಕೊಳ್ಳುತ್ತಾರೆ. ಚಪಾತಿಯೊಂದಿಗೆ ಸಲಾಡ್ ಅಥವಾ ಮನೆಯಲ್ಲಿ ಬೇಯಿಸಿದ ಯಾವುದನ್ನಾದರೂ ಸೇವಿಸುತ್ತಾರಂತೆ.