- Home
- Entertainment
- Cine World
- ಇಷ್ಟು ವರ್ಷ ಸೂಪರ್‌ಸ್ಟಾರ್ ಆಗಿ ಮಿಂಚಿದ್ದ ತಲೈವಾ ಇನ್ಮುಂದೆ ವಿಲನ್ ಆಗ್ತಾರಾ? ರಜನಿ ಬಗ್ಗೆ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಹೇಳಿಕೆ ವೈರಲ್
ಇಷ್ಟು ವರ್ಷ ಸೂಪರ್‌ಸ್ಟಾರ್ ಆಗಿ ಮಿಂಚಿದ್ದ ತಲೈವಾ ಇನ್ಮುಂದೆ ವಿಲನ್ ಆಗ್ತಾರಾ? ರಜನಿ ಬಗ್ಗೆ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಹೇಳಿಕೆ ವೈರಲ್
Karthik Subbaraj on Rajinikanth: ರಜನಿಕಾಂತ್ ವಿಲನ್ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಬಂದವರು. ಇದೀಗ ಅವರಿಗೆ ಹೀರೋಯಿಸಂ ಬೇಸರೇನಿಸಿದೆಯ? ತಾನು ಮತ್ತೊಮ್ಮೆ ವಿಲನ್ ಆಗಬೇಕು ಅಂತಾ ಆಸೆ ವ್ಯಕ್ತಪಡಿಸಿದ್ದಾರಂತೆ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ರಜನಿ ಆಸೆ ಬಗ್ಗೆ ಏನು ಹೇಳಿದ್ರು ನೋಡಿ.

ರಜನಿಗೆ ವಿಲನ್ ಆಗುವಾಸೆ: ಕಾರ್ತಿಕ್ ಸುಬ್ಬರಾಜ್
ಪಣಜಿ: ‘ನನಗೆ ಅತ್ಯಂತ ಪ್ರಿಯವಾದ ಖಳನಾಯಕ ಎಂದರೆ ತಲೈವರ್ (ರಜನಿಕಾಂತ್). ಅವರು ತಮ್ಮ ವೃತ್ತಿಜೀವನವನ್ನು ವಿಲನ್ ಆಗಿಯೇ ಆರಂಭಿಸಿದವರು. ಅವರು ಇತ್ತೀಚೆಗೆ ಡೊರೋಥಿ ಸಿನಿಮಾ ನೋಡಿ ಕರೆ ಮಾಡಿ, ಮಧುರೈ ಹಿನ್ನೆಲೆಯ ಒಂದು ಕಥೆ ಮಾಡೋಣ, ಆದರೆ ಈ ಬಾರಿ ನಾನು ಸಂಪೂರ್ಣ ವಿಲನ್ ಆಗಿರುವ ಪಾತ್ರ ಬರೆಯಬೇಕು ಎಂದು ಹೇಳಿದ್ದಾರೆ. ಯೋಚಿಸುತ್ತೇನೆ ಎಂದು ಹೇಳಿದ್ದೇನೆ’ ಎಂದು ‘ಡೊರೋಥಿ’, ‘ಜಿಗರ್‌ಥಂಡ’ ಖ್ಯಾತಿಯ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಹೇಳಿದ್ದಾರೆ.
ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 57ನೇ ಭಾರತೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು ತಮ್ಮ ಚಿತ್ರದ ಖಳನಾಯಕ ಪಾತ್ರಗಳ ಕುರಿತು ವಿವರಿಸಿದರು.
ಪ್ರತಿಯೊಬ್ಬ ಮನುಷ್ಯನ ಹೃದಯದ ಮೂಲ ಬಣ್ಣ ಗ್ರೇ
‘ನಾವು ಬಾಲ್ಯದಿಂದಲೂ ಒಳ್ಳೆಯವರು (ಬಿಳಿ) ಮತ್ತು ಕೆಟ್ಟವರು (ಕಪ್ಪು) ಎಂಬ ಎರಡೇ ವಿಭಾಗಗಳನ್ನು ನೋಡಿ ಬೆಳೆದಿರುತ್ತೇವೆ. ಆದರೆ ಪ್ರತಿಯೊಬ್ಬ ಮನುಷ್ಯನ ಹೃದಯದ ಮೂಲ ಬಣ್ಣ ಗ್ರೇ. ನಾವು ಸಿಲುಕುವ ಪರಿಸ್ಥಿತಿಗಳು ಮತ್ತು ಸಮಾಜ ನಮ್ಮನ್ನು ಒಳ್ಳೆಯವರು ಅಥವಾ ಕೆಟ್ಟವರನ್ನಾಗಿ ಮಾಡುತ್ತದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲೂ ಒಳ್ಳೆಯ ರಾಜರಲ್ಲಿ ಗ್ರೇ ಛಾಯೆ ಇರುತ್ತದೆ. ನೇರವಾಗಿ ಕೆಟ್ಟವರು ಎಂದು ಗುರುತಿಸಬಹುದಾದವರಿಗಿಂತ, ಪ್ರೀತಿಯ ಮುಸುಕಿನಲ್ಲಿ ಕೆಟ್ಟದ್ದನ್ನು ಮಾಡುವವರು ಹೆಚ್ಚು ಅಪಾಯಕಾರಿ’ ಎಂದರು.
‘ಡೊರೊಥಿ’ ಚಿತ್ರದ ಉದಾಹರಣೆ ನೀಡಿದ ಅವರು, ‘ನೇರವಾಗಿ ಕೆಟ್ಟವರು ಎಂದು ಗುರುತಿಸಬಹುದಾದ ವಿಸಿಲ್ ವೀರಯ್ಯನಂತಹ ಪಾತ್ರಗಳಿಗಿಂತ, ತಾವು ಒಳ್ಳೆಯವರು ಎಂದು ನಂಬಿಕೊಂಡು ಕೆಟ್ಟದ್ದನ್ನು ಮಾಡುವ ಪರೋಟಾ ಅಂಗಡಿ ಮಾಲೀಕನಂತಹ ಪಾತ್ರಗಳು ಹೆಚ್ಚು ಅಪಾಯಕಾರಿ’ ಎಂದು ಅಭಿಪ್ರಾಯಪಟ್ಟರು.
ಬರೆವಣಿಗೆ ಶೈಲಿ ಬಗ್ಗೆ ಕಾರ್ತಿಕ್ ಸುಬ್ಬರಾಜ್ ಹೇಳಿದ್ದೇನು?
ತಮ್ಮ ಬರವಣಿಗೆಯ ಶೈಲಿಯನ್ನು ವಿವರಿಸಿದ ಸುಬ್ಬರಾಜ್, ‘ನಾನು ಬರೆಯಲು ಕೂತಾಗ ಕೇವಲ ಶೇ.10 ರಿಂದ 15ರಷ್ಟು ಸಣ್ಣ ಕಲ್ಪನೆ ಮಾತ್ರ ತಲೆಯಲ್ಲಿರುತ್ತದೆ. ಬರೆಯುತ್ತಾ ಹೋದಂತೆ ಪಾತ್ರಗಳು ಮತ್ತು ಸನ್ನಿವೇಶಗಳೇ ನನಗೆ ದಾರಿ ತೋರಿಸುತ್ತವೆ. ನೇರವಾಗಿ ಸಂಭಾಷಣೆ ಬರೆಯುವ ಬದಲು ಮೊದಲಿಗೆ ಕಥೆಯ ಆರಂಭ, ಮಧ್ಯ ಮತ್ತು ಅಂತ್ಯವನ್ನು ಒಳಗೊಂಡ 20-30 ಪುಟಗಳ ‘ಟ್ರೀಟ್‌ಮೆಂಟ್ ನೋಟ್’ ಸಿದ್ಧಪಡಿಸಿ, ನಿರ್ದೇಶನ ತಂಡದೊಂದಿಗೆ ಚರ್ಚಿಸಿದ ನಂತರವಷ್ಟೇ ಪೂರ್ಣ ಚಿತ್ರಕಥೆಗೆ ಕೈಹಾಕುತ್ತೇನೆ’ ಎಂದರು. ‘ಡೊರೋಥಿ’ ಚಿತ್ರಕ್ಕಾಗಿ ತಮ್ಮ ಕಲ್ಪನೆಯನ್ನು ಕಾದಂಬರಿಕಾರ ಸರವಣನ್ ಚಂದ್ರನ್ ಅವರಿಗೆ ನೀಡಿ ಕಿರು ಕಾದಂಬರಿಯಂತೆ ಬರೆಸಿ, ನಂತರ ಅದನ್ನು ಚಿತ್ರಕಥೆಯಾಗಿಸಿದ್ದನ್ನು ಅವರು ತಿಳಿಸಿದರು.
‘ಡೊರೋಥಿ’ ಚಿತ್ರದ ಕಾರ್ತಿಕ್ ಸುಬ್ಬರಾಜ್ ಮಾತು
ತಮ್ಮ ಇತ್ತೀಚಿನ ಚಿತ್ರ ‘ಡೊರೋಥಿ’ ಕುರಿತು ಮಾತನಾಡಿದ ಅವರು, ‘90ರ ದಶಕದಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗಳಿಗೆ ಕಾನೂನು ಮಾನ್ಯತೆ ಇಲ್ಲದ ಕಾರಣ ತೃತೀಯಲಿಂಗಿಗಳು ಅನಧಿಕೃತವಾಗಿ ಆಪರೇಷನ್ ಮಾಡಿಸಿಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದ ನೈಜ ಘಟನೆಗಳೇ ಈ ಚಿತ್ರಕ್ಕೆ ಪ್ರೇರಣೆ. ಇಳಯರಾಜಾ ಅವರ ಸಂಗೀತ ಹಾಗೂ ಸನಂತ್, ರಿಷಿಕಾಂತ್ ಅವರ ಅಭಿನಯ ಚಿತ್ರವನ್ನು ಜನಸಾಮಾನ್ಯರಿಗೆ ತಲುಪಿಸಿತು. ‘ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಪುರುಷರು ಕಣ್ಣೀರು ಹಾಕಿ, ಅಲ್ಲಿದ್ದ ತೃತೀಯಲಿಂಗಿಗಳನ್ನು ಅಪ್ಪಿಕೊಂಡು ಕ್ಷಮೆ ಕೇಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ಚಿತ್ರದಿಂದ ಪ್ರೇರಿತವಾಗಿ ಶ್ರೀಲಂಕಾದ ನಿರಾಶ್ರಿತ ಮಹಿಳೆ ಶಾಲಿನಿ ಬರೆದ ಪತ್ರವನ್ನಾಧರಿಸಿ ಹೊರಬಂದಿರುವ ‘ಅನ್ಬುಳ್ಳ ಡೊರೊಥಿ’ ಪುಸ್ತಕ ನನಗೆ ಜಗತ್ತಿನ ಎಲ್ಲಾ ಪ್ರಶಸ್ತಿಗಳಿಗಿಂತ ದೊಡ್ಡದು’ ಎಂದು ಭಾವುಕರಾದರು. ಒಟಿಟಿ ಅಬ್ಬರದ ನಡುವೆಯೂ ತಾವು ಯಾವಾಗಲೂ ಚಿತ್ರಮಂದಿರಗಳ ಅನುಭವಕ್ಕಾಗಿಯೇ ಸಿನಿಮಾ ಮಾಡುವುದಾಗಿ ಅವರು ಸ್ಪಷ್ಟಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.











