ಶ್ರೀದೇವಿ ಸಾವಿಗೆ ಲೋ ಸಾಲ್ಟ್ ಡಯಟ್ ಕಾರಣ? ಕಡಿಮೆ ಉಪ್ಪು ತಿಂದರೇನಾಗುತ್ತೆ?
ಕಿಟೋ, ಲೋ ಕ್ಯಾಲರಿ, ಲೋ ಕಾರ್ಬೋಹೈಡ್ರೆಟ್, ನೋ ಶುಗರ್, ಲೋ ಸ್ಟಾಲ್ಟ್ ಡಯಟ್ ಹೀಗೆ ಹತ್ತು ಹಲವು ರೀತಿಯ ಡಯಟ್‌ಗಳು ತೂಕ ಇಳಿಸಿಕೊಳ್ಳಲು ಚಾಲ್ತಿಯಲ್ಲಿವೆ. ಆದರೆ ಬಾಲಿವುಡ್ ನಟಿ ಶ್ರೀದೇವಿ (Sridevi) ಅವರು ನೋ ಸಾಲ್ಟ್ ಡಯಟ್ ಕಾರಣದಿಂದ ಆಗಾಗ ಬ್ಲ್ಯಾಕ್‌ಔಟ್ ಆಗುತ್ತಿದ್ದರು ಎಂದು ಅವರ ಸಾವಿನ ಬಗ್ಗೆ ಪತಿ ಬೋನಿ ಕಪೂರ್ (Boney Kapoor) ಮಾತನಾಡಿದ್ದಾರೆ. ಹಾಗಾದರೆ ಏನಿದು ನೋ ಸಾಲ್ಟ್ ಡಯಟ್?
ಬಾಲಿವುಡ್‌ನ ಸೂಪರ್‌ಸ್ಟಾರ್ ಶ್ರೀದೇವಿ ಅವರು ಫೆಬ್ರವರಿ 24, 2018 ರಂದು ಆಕಸ್ಮಿಕವಾಗಿ ದುಬೈನ ಹೊಟೇಲ್ ರೂಮೊಂದರ ಬಾತ್ ಟಬ್ಬಲ್ಲಿ ಮುಳುಗಿ ಕೊನೆಯುಸಿರೆಳೆದರು. ಆದರೆ ಅವರ ಸಾವಿನ ಬಗ್ಗೆ ಹಲವು ವರದಿಗಳು ಹರಿದಾಡಿದ್ದವು.
ಆದರೆ ಈಗ ನಿರ್ಮಾಪಕ ಬೋನಿ ಕಪೂರ್ ತಮ್ಮ ಪತ್ನಿ ಸೂಪರ್ ಸ್ಟಾರ್ ಶ್ರೀದೇವಿ ಅವರ ದುರಂತ ಸಾವಿನ ಬಗ್ಗೆ ಕೊನೆಗೂ ತೆರೆದಿಟ್ಟಿದ್ದಾರೆ. ಅದು ಸಹಜವೋ, ಅಸಹಜವೋ ೆಂಬ ವಿಷಯದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.
ಸಂದರ್ಶನದಲ್ಲಿ, ಬೋನಿ ಕಪೂರ್ 54 ವರ್ಷದ ಶ್ರೀದೇವಿ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಿದ್ದರು ಎಂದು ತಿಳಿಸಿದ್ದಾರೆ. ತಮ್ಮ ಫಿಗರ್ ಮೆಂಟೈನ್ ಮಾಡಲು ಉಪವಾಸಗಳನ್ನು ಮಾಡುತ್ತಿದ್ದರೆಂದೂ ತಿಳಿಸಿದ್ದಾರೆ.
ಬೋನಿ ಕಪೂರ್ ಅವರು ಶ್ರೀದೇವಿ ಅವರು ಉಪ್ಪುರಹಿತ ಆಹಾರದ ಕಾರಣದಿಂದ ಬ್ಲ್ಯಾಕ್‌ಔಟ್‌ಗಳನ್ನು ಅನುಭವಿಸುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ. ಪದೆ ಪದೇ ಶ್ರೀದೇವಿ ತಲೆ ಸುತ್ತಿ ಬರುತ್ತಿದ್ದರು.
ಕಡಿಮೆ ರಕ್ತದೊತ್ತಡದ ಕಾರಣದಿಂದ ಶ್ರೀದೇವಿಯವರಿಗೆ ಕಡಿಮೆ ಉಪ್ಪು ಇರುವ ಆಹಾರವನ್ನು ಸೇವಿಸದಂತೆ ವೈದ್ಯರು ಸಲಹೆ ನೀಡಿದ್ದರೂ ಸಹ, ನಟಿ ಅದನ್ನು ಕಡೆಗಣಿಸಿದರು ಎಂದು ಬೋನಿ ಹೇಳಿದ್ದಾರೆ.
'ಆಕೆಗೆ ಯಾವಾಗಲೂ ತಾನು ಪರದೆಯಲ್ಲಿ ಸುಂದರವಾಗಿ ಕಾಣಬೇಕೆಂಬ ಅತೀವ ತುಡಿತವಿತ್ತು. ಅದನ್ನು ಸಾಧಿಸಲು ಆಕೆ ನಿರಂತರವಾಗಿ ಪಥ್ಯದಲ್ಲಿರುತ್ತಿದ್ದಳು. ಹಲವು ಬಾರಿ ಉಪವಾಸ ಮಾಡುತ್ತಿದ್ದಳು. ಇದರ ಪರಿಣಾಮವಾಗಿ ಆಕೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದಾಳೆ ಎಂದು ನಮ್ಮ ವೈದ್ಯರು ಕೂಡಾ ತಿಳಿಸಿದ್ದರು. ಎಂದು ಬೋನಿ ಕಪೂರ್ ಹೇಳಿದ್ದಾರೆ.
Image: Getty
'ಮದುವೆಯಾದ ಸಮಯದಿಂದ, ಅವಳು ಒಂದೆರಡು ಸಂದರ್ಭಗಳಲ್ಲಿ ಬ್ಲ್ಯಾಕ್ಔಟ್‌ಗಳನ್ನು ಹೊಂದಿದ್ದಳು. ನಿಮಗೆ ಕಡಿಮೆ ಬಿಪಿ ಸಮಸ್ಯೆ ಇದೆ, ಉಪ್ಪನ್ನು ತಪ್ಪಿಸುವ ತೀವ್ರವಾದ ಆಹಾರಕ್ರಮಕ್ಕೆ ಅಂಟಿಕೊಳ್ಳಬೇಡಿ ಎಂದು ವೈದ್ಯರು ಅವಳಿಗೆ ಹೇಳುತ್ತಲೇ ಇದ್ದರು. ಹೆಚ್ಚಿನ ಮಹಿಳೆಯರು ಉಪ್ಪು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅದಕ್ಕಾಗಿಯೇ ಮುಖ ಉಬ್ಬುತ್ತದೆ ಎಂದೇ ನಂಬಿದ್ದಳು. ಶ್ರೀ ಉಪ್ಪನ್ನು ತ್ಯಜಿಸಲು ಇದೂ ಒಂದು ಕಾರಣ. ಸಲಾಡ್ ತಿನ್ನುತ್ತಿದ್ದರೂ ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸು ಎಂದು ನಾವು ಅವಳಿಗೆ ಹೇಳುತ್ತಿದ್ದೆವು' ಎಂದು ಬೋನಿ ಕಪೂರ್ ಹೇಳಿದ್ದಾರೆ. ಹೊಟೇಲ್ ಗೆ ಹೋಗಿದ್ದರೂ ಉಪ್ಪಿಲ್ಲದ ಆಹಾರವನ್ನೇ ತಿನ್ನುತ್ತಿದ್ದರಂತೆ ಶ್ರೀದೇವಿ.
Image: Freepik
ಹಾಗಾದರೆ ಏನಿದು ಲೋ ಸೋಡಿಯಂ ಅಥವಾ ನೋ ಸಾಲ್ಟ್ ಡಯಟ್ ? ದೇಹಕ್ಕೆ ಅಗತ್ಯವಾದಷ್ಟು ಉಪ್ಪಿನಾಂಶ ದೊರೆಯದೆ ಹೋದರೆ ಉಂಟಾಗುವ ತೊಂದರೆಗಳೇನು ಗೊತ್ತಾ?
ಲೋ ಸೋಡಿಯಂ ಅಥವಾ ನೋ ಸಾಲ್ಟ್ ಡಯಟ್‌ನಲ್ಲಿ, ಜನರು ತಮ್ಮ ಆಹಾರದಲ್ಲಿ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡಲು ಅನುಸರಿಸಬಹುದು. ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಅಥವಾ ಯಕೃತ್ತಿನ ಕಾಯಿಲೆಯಂತಹ ಕೆಲವು ವೈದ್ಯಕೀಯ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡಲು ವೈದ್ಯರು ಕಡಿಮೆ ಸೋಡಿಯಂ ಆಹಾರವನ್ನು ಶಿಫಾರಸು ಮಾಡಬಹುದು.
Salt in curry
ಆದರೆ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನಿರ್ದಿಷ್ಟ ಪ್ರಮಾಣದ ಸೋಡಿಯಂ ಅಗತ್ಯವಿದೆ. ಸೋಡಿಯಂ ದೇಹದ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸ್ನಾಯು ಮತ್ತು ನರಗಳ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ರಕ್ತದಲ್ಲಿನ ಸೋಡಿಯಂ ಸಾಮಾನ್ಯ 135-145 mEq/L ಗಿಂತ ಕಡಿಮೆಯಾದಾಗ ಹೈಪೋನಾಟ್ರೀಮಿಯಾ ಎಂಬ ಸ್ಥಿತಿ ಉಂಟಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ದೇಹದಲ್ಲಿ ಕಡಿಮೆ ಸೋಡಿಯಂ ಮಟ್ಟವು ಸ್ನಾಯು ಸೆಳೆತ, ವಾಕರಿಕೆ, ವಾಂತಿ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಅಂತಿಮವಾಗಿ, ಉಪ್ಪಿನ ಕೊರತೆಯು ಆಘಾತ, ಕೋಮಾ ಮತ್ತು ಸಾವಿಗೆ ಕಾರಣವಾಗಬಹುದು.