- Home
- Entertainment
- Cine World
- ಗಂಡ, ಮಕ್ಕಳೇ ನನ್ನ ಉಡುಗೆ ತೊಡುಗೆ ಬಗ್ಗೆ ತಕರಾರು ಮಾಡಲ್ಲ: ಟ್ರೋಲರ್ಸ್‌ಗೆ ಖಡಕ್ ಉತ್ತರ ಕೊಟ್ಟ ಅನಸೂಯ
ಗಂಡ, ಮಕ್ಕಳೇ ನನ್ನ ಉಡುಗೆ ತೊಡುಗೆ ಬಗ್ಗೆ ತಕರಾರು ಮಾಡಲ್ಲ: ಟ್ರೋಲರ್ಸ್‌ಗೆ ಖಡಕ್ ಉತ್ತರ ಕೊಟ್ಟ ಅನಸೂಯ
ತಮ್ಮ ಉಡುಗೆ ತೊಡುಗೆ ಬಗ್ಗೆ ಟೀಕೆ ಮಾಡುವವರಿಗೆ ನಟಿ ಅನಸೂಯ ಭಾರಧ್ವಜ್ ತಿರುಗೇಟು ನೀಡಿದ್ದಾರೆ. ಗಂಡ, ಮಕ್ಕಳು ತಮ್ಮ ಉಡುಪಿನ ಬಗ್ಗೆ ಎಂದೂ ತಕರಾರು ಮಾಡಿಲ್ಲ ಎಂದು ಹೇಳಿದ್ದಾರೆ.

ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಆಗಾಗ್ಗೆ ಸುದ್ದಿ, ವಿವಾದಗಳಲ್ಲಿರುವುದು ಸಾಮಾನ್ಯ. ಸಾಮಾಜಿಕ ಜಾಲತಾಣಗಳಲ್ಲಿ ಅನಸೂಯ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಅನಸೂಯ ಕಿರುತೆರೆ ನಿರೂಪಕಿಯಾಗಿ, ರೂಪದರ್ಶಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ. ತಮ್ಮ ಗ್ಲಾಮರ್ ನಿಂದಲೂ ಅನಸೂಯ ಜನಪ್ರಿಯತೆ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನಸೂಯ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.
ಅದೇ ಸಮಯದಲ್ಲಿ ಅನಸೂಯ ವಿವಾದಗಳಲ್ಲಿ ಸಿಲುಕುತ್ತಲೇ ಇರುತ್ತಾರೆ. ಅವರ ಉಡುಗೆ ತೊಡುಗೆ ಬಗ್ಗೆ ಆಗಾಗ್ಗೆ ಟೀಕೆಗಳು ಕೇಳಿಬರುತ್ತವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ಕೆಲವು ಮಹಿಳೆಯರೇ ತಮ್ಮನ್ನು ಟಾರ್ಗೆಟ್ ಮಾಡಿ ಟೀಕಿಸುತ್ತಿದ್ದಾರೆ ಎಂದು ಅನಸೂಯ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು, ತಮ್ಮ ಉಡುಗೆ ತೊಡುಗೆಯನ್ನು ಟೀಕಿಸುವವರಿಗೆ ಅನಸೂಯ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡುವ ಪೋಸ್ಟ್ ಹಾಕಿದ್ದಾರೆ.
ಇತ್ತೀಚೆಗೆ ನನ್ನ ಮೇಲೆ ಯಾರು ಏನೇ ಕಾಮೆಂಟ್ ಮಾಡಿದರೂ ಸುಮ್ಮನಿದ್ದೆ. ಆದರೆ ನಾನು ಬದುಕುತ್ತಿರುವ ರೀತಿಯ ಬಗ್ಗೆ ಟೀಕೆಗಳು ಹೆಚ್ಚಾಗಿವೆ. ಹಾಗಾಗಿ ಪ್ರತಿಕ್ರಿಯಿಸಲೇಬೇಕಾಯಿತು. ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್ ನಲ್ಲಿ ಕೆಲವರು ನನ್ನನ್ನು ಟಾರ್ಗೆಟ್ ಮಾಡಿ ವಿಡಿಯೋ ಮಾಡುತ್ತಿದ್ದಾರೆ. ಕೆಲವು ಮಹಿಳೆಯರೇ ನನ್ನನ್ನು ಟೀಕಿಸುತ್ತಿದ್ದಾರೆ. ಅವರು ಯಾರೆಂದು ನನಗೆ ಗೊತ್ತಿಲ್ಲ. ಅವರ ಪರಿಚಯ ನನಗಿಲ್ಲ. ಆದರೂ ನನ್ನ ವ್ಯಕ್ತಿತ್ವದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ನಾನು ಧರಿಸುವ ಬಟ್ಟೆಗಳ ಆಧಾರದ ಮೇಲೆ ನನ್ನ ವ್ಯಕ್ತಿತ್ವದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಹೌದು, ನಾನು ಮಹಿಳೆ, ಹೆಂಡತಿ, ಇಬ್ಬರು ಮಕ್ಕಳ ತಾಯಿ. ನನ್ನ ಶೈಲಿಗೆ ತಕ್ಕಂತೆ ಬಟ್ಟೆ ಧರಿಸುವುದನ್ನು ನಾನು ಆನಂದಿಸುತ್ತೇನೆ. ಸೌಂದರ್ಯ, ಶೈಲಿ, ಆತ್ಮವಿಶ್ವಾಸಗಳು ನನ್ನ ಗುರುತಿನ ಭಾಗವಾಗಿವೆ. ನಾನು ಧರಿಸುವ ಬಟ್ಟೆಗಳ ಆಧಾರದ ಮೇಲೆ ನಾನು ತಾಯಿಯಂತೆ ವರ್ತಿಸುತ್ತಿಲ್ಲ ಎಂದು ಕೆಲವರು ಟೀಕಿಸುತ್ತಿದ್ದಾರೆ. ಅವರಿಗೆ ನನ್ನದೊಂದು ಪ್ರಶ್ನೆ. ತಾಯಿಯಾದರೆ ಬದುಕಿನಲ್ಲಿ ಉಳಿದೆಲ್ಲವನ್ನೂ ಬಿಟ್ಟುಬಿಡಬೇಕೆ?
ನನ್ನ ಗಂಡ, ಮಕ್ಕಳು ನನ್ನನ್ನು ಪ್ರೀತಿಸುತ್ತಾರೆ. ನನಗೆ ಬೆಂಬಲ ನೀಡುತ್ತಾರೆ. ಅವರು ಎಂದಿಗೂ ನನ್ನನ್ನು ಜಡ್ಜ್ ಮಾಡಿಲ್ಲ. ನನಗೆ ಇಷ್ಟವಾದ ಬಟ್ಟೆ ಧರಿಸುತ್ತೇನೆ ಎಂದರೆ ನಾನು ನನ್ನ ಮೌಲ್ಯಗಳನ್ನು ಕಳೆದುಕೊಂಡಿದ್ದೇನೆ ಎಂದರ್ಥವಲ್ಲ. ನಾನು ಯಾರಿಗೂ ನನ್ನಂತೆ ಇರಿ ಎಂದು ಹೇಳುವುದಿಲ್ಲ. ನನಗೆ ಇಷ್ಟಬಂದಂತೆ ಬದುಕುವ ಸ್ವಾತಂತ್ರ್ಯ ನನಗಿದೆ. ನಿಮಗೆ ಇಷ್ಟಬಂದಂತೆ ನೀವು ಇರಿ ಎಂದು ಅನಸೂಯ ಖಡಕ್ ಆಗಿ ಹೇಳಿದ್ದಾರೆ.