ಮಾನವಸಹಿತ ಗಗನಯಾನದ ಯಾತ್ರಿ ಪ್ರಶಾಂತ್ ನಾಯರ್ ಜೊತೆ 2ನೇ ವಿವಾಹ ಬಹಿರಂಗಪಡಿಸಿದ ಕೆಜಿಎಫ್‌ಗೆ ಧ್ವನಿ ನೀಡಿದ ನಟಿ
ಅಚ್ಚರಿಯ ಸುದ್ದಿಯೊಂದರಲ್ಲಿ, ಮಲೆಯಾಳಂ ನಟಿ ಲೀನಾ ಇಸ್ರೋ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮ - ಗಗನ್ ಯಾನ್‌ಗೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರಾದ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ತಾವು ಕಳೆದ ತಿಂಗಳು ವಿವಾಹವಾಗಿರುವುದಾಗಿ ಘೋಷಿಸಿದ್ದಾರೆ.
ಮಲೆಯಾಳಂ ನಟಿ ಲೀನಾ, ತಾವು ಗಗನಯಾನಕ್ಕೆ ಆಯ್ಕೆಗೊಂಡ ನಾಲ್ವರು ಗಗನಯಾತ್ರಿಗಳಲ್ಲೊಬ್ಬರಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ಕಳೆದ ತಿಂಗಳು ವಿವಾಹವಾಗಿರುವುದಾಗಿ ಬಹಿರಂಗಪಡಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮ - ಗಗನಯಾನಕ್ಕೆ ತರಬೇತಿ ಪಡೆಯುತ್ತಿರುವ ಪರೀಕ್ಷಾ ಪೈಲಟ್‌ಗಳಲ್ಲಿ ನಾಯರ್ ಕೂಡಾ ಒಬ್ಬರೆಂದು ಪ್ರಧಾನಿ ನರೇಂದ್ರ ಮೋದಿ ಹೆಸರಿಸಿದ ಕೆಲವೇ ಗಂಟೆಗಳ ನಂತರ ಲೀನಾ ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಮದುವೆಯನ್ನು ಘೋಷಿಸಿದ್ದಾರೆ.
ಈ ವರ್ಷ ಜನವರಿ 17ರಂದು ನಾಯರ್ ಅವರನ್ನು ವಿವಾಹವಾಗಿದ್ದಾಗಿ 42 ವರ್ಷದ ಲೀನಾ ತಮ್ಮ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.
'ಇಂದು, 27 ಫೆಬ್ರವರಿ 2024, ನಮ್ಮ ಪ್ರಧಾನಿ ಮೋದಿ ಜಿ ಅವರು ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರಿಗೆ ಮೊದಲ ಭಾರತೀಯ ಗಗನಯಾತ್ರಿ ರೆಕ್ಕೆಗಳನ್ನು ನೀಡಿದರು. ಇದು ನಮ್ಮ ದೇಶಕ್ಕೆ, ನಮ್ಮ ಕೇರಳ ರಾಜ್ಯಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ಹೆಮ್ಮೆಯ ಐತಿಹಾಸಿಕ ಕ್ಷಣವಾಗಿದೆ, ಎಂದು ಅವರು ಬರೆದಿದ್ದಾರೆ.
'ಅಧಿಕೃತವಾಗಿ ಈ ಪ್ರಕಟಣೆಯ ಘೋಷಣೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಿದ್ದಿದ್ದರಿಂದ ನಾನು 17 ಜನವರಿ, 2024 ರಂದು ಸಾಂಪ್ರದಾಯಿಕ ವಿವಾಹದ ಮೂಲಕ ಪ್ರಶಾಂತ್ ಅವರನ್ನು ವರಿಸಿದ ವಿಷಯ ಹೇಳಲು ಕಾಯುತ್ತಿದ್ದೆ' ಎಂದು ನಟಿ ಸೇರಿಸಿದ್ದಾರೆ. ಇದು ನಟಿಗೆ ಎರಡನೇ ವಿವಾಹವಾಗಿದೆ.
ನಾಯರ್ ಬಗ್ಗೆ..
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರು ಆಗಸ್ಟ್ 26, 1976 ರಂದು ಕೇರಳದ ತಿರುವಾಜಿಯಾಡ್‌ನಲ್ಲಿ ಜನಿಸಿದರು. ಎನ್‌ಡಿಎಯ ಹಳೆಯ ವಿದ್ಯಾರ್ಥಿ ಮತ್ತು ಏರ್ ಫೋರ್ಸ್ ಅಕಾಡೆಮಿಯಲ್ಲಿ ಸ್ವೋರ್ಡ್ ಆಫ್ ಆನರ್ ಪಡೆದಿರುವ ನಾಯ್ಡ್ ಅವರನ್ನು ಡಿಸೆಂಬರ್ 19, 1998 ರಂದು ಐಎಎಫ್‌ನ ಫೈಟರ್ ಸ್ಟ್ರೀಮ್‌ನಲ್ಲಿ ನಿಯೋಜಿಸಲಾಯಿತು. ಅವರು ಕ್ಯಾಟ್ ಎ ಫ್ಲೈಯಿಂಗ್ ಬೋಧಕರಾಗಿದ್ದಾರೆ ಮತ್ತು ಸುಮಾರು 3000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿರುವ ಟೆಸ್ಟ್ ಪೈಲಟ್ ಆಗಿದ್ದಾರೆ.
ಇನ್ನು ನಟಿ ಲೆನಾ ಭಾರತೀಯ ಚಲನಚಿತ್ರ ನಟಿಯಾಗಿದ್ದು, ಅವರು ಮಲಯಾಳಂ ಸಿನಿಮಾ ಮತ್ತು ತಮಿಳು ಸಿನಿಮಾಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಇಂಗ್ಲೀಷ್, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳ ಚಲನಚಿತ್ರಗಳ ಜೊತೆಗೆ ಮಲಯಾಳಂ ಚಿತ್ರರಂಗದಲ್ಲಿ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಹೊಂದಿದ್ದಾರೆ.
ಅವರು ಮಲಯಾಳಂನಲ್ಲಿ ಪ್ರಶಸ್ತಿ ವಿಜೇತ ದೂರದರ್ಶನ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅವರ ಕೆಲವು ಚಿತ್ರಗಳನ್ನು ಹೆಸರಿಸುವುದಾದರೆ 'ಕೂಟ್ಟು', 'ದೇ ಇಂಗೊಟ್ಟು ನೋಕ್ಕಿಯೇ', 'ಬಿಗ್ ಬಿ' ಮತ್ತು 'ಸ್ನೇಹಂ'.
ಅವರು ಕನ್ನಡ ಚಲನಚಿತ್ರ KGF 2 ರ ಮಲಯಾಳಂ ಆವೃತ್ತಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಲೀನಾ ಹಲವಾರು ಜಾಹೀರಾತುಗಳ ಮೂಲಕ ಕಿರುತೆರೆಯಲ್ಲೂ ಗಮನ ಸೆಳೆದಿದ್ದಾರೆ.