ಬಾಲಿವುಡ್ ಅಥವಾ ದಕ್ಷಿಣ ಸಿನಿಮಾ ಎಂಬ ಪ್ರತ್ಯೇಕತೆ ಇಲ್ಲ, ಎಲ್ಲಾ ಒಂದೇ ಎಂದ ರಶ್ಮಿಕಾ
ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ ಕೆರಿಯರ್‌ನ ಪಿಕ್‌ನಲ್ಲಿದ್ದಾರೆ. ರಶ್ಮಿಕಾ ಅವರು ಕೇವಲ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಮಾತ್ರ ಸಿಮೀತವಾಗಿರದೆ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಹೊರ ಹೊಮ್ಮಿದ್ದಾರೆ. ನಟಿ ಇತ್ತೀಚಿನ ಮಾತುಕಥೆಯಲ್ಲಿ ಉತ್ತರ ಮತ್ತು ದಕ್ಷಿಣ ಚಲನಚಿತ್ರೋದ್ಯಮ ಎಂಬ ಭೇದಭಾವದ ಬಗ್ಗೆ ಮಾತಾನಾಡಿದ್ದಾರೆ. ಆದರೆ ತಮಗಿದುಕೇವಲ ಭಾರತೀಯ ಚಲನಚಿತ್ರೋದ್ಯಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ತಮ್ಮ ವೃತ್ತಿಜೀವನದ ಅತ್ಯಂತ ಬ್ಯುಸಿ ಹಂತದಲ್ಲಿದ್ದಾರೆ. ಪ್ರಸ್ತುತ ಡಿಸೆಂಬರ್ 2023 ರಲ್ಲಿ ಅವರ ಕೊನೆಯ ಬಿಡುಗಡೆಯಾದ ಅನಿಮಲ್ ಸಿನಿಮಾದ ಯಶಸ್ಸಿನ ಖುಷಿಯ್ಲಲಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿಯಿಂದ ಸಿನಿ ಜರ್ನಿ ಶುರುಮಾಡಿದ ರಶ್ಮಿಕಾ ಅವರು 22 ನೇ ಚಿತ್ರವನ್ನು ಮುಗಿಸಿದ್ದಾರೆ ಹಾಗೂ ಅವರು ಇನ್ನೊಂದು ಚಿತ್ರದ ಚಿತ್ರೀಕರಣವನ್ನು ಸಹ ಮಾಡಿದ್ದಾರೆ. ಪುಷ್ಪಾ-2 ಶೂಟಿಂಗ್ ಸಹ ಮುಗಿದಿದೆ.
ಹೊಸ ಸಂದರ್ಶನವೊಂದರಲ್ಲಿ ಜನರು ಚಲನಚಿತ್ರಗಳನ್ನು 'ಹಿಂದಿ' ಅಥವಾ 'ದಕ್ಷಿಣ' ಎಂದು ಕರೆಯುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದು ನಟಿ ರಶ್ಮಿಕಾ ಮಂದಣ್ಣ ಅಭಿಪ್ರಾಯಪಟ್ಟಿದ್ದಾರೆ.
'ನಾನು ನನ್ನ 22ನೇ ಚಿತ್ರವನ್ನು ಮುಗಿಸಿದ್ದೇನೆ ಮತ್ತು ಇಂದು ಇಲ್ಲಿಗೆ ಬರಲು 22 ಚಿತ್ರಗಳನ್ನು ತೆಗೆದುಕೊಂಡಿದ್ದೇನೆ. ಆದ್ದರಿಂದ ಇದು ಸಾಕಷ್ಟು ಕಠಿಣ ಕೆಲಸ ಮತ್ತು ಪ್ರಯಾಣವಾಗಿದೆ, ಆದರೆ ಇಂದು ನಾನು ಜನರಿಗೆ ನನಗೆ ಕಥೆಗಳನ್ನು ಬರೆಯಲು ಹಾಗೂ ದೊಡ್ಡ ಚಲನಚಿತ್ರಗಳು ಮತ್ತು ಉತ್ತಮ ಕಥೆಗಳೊಂದಿಗೆ ನನ್ನ ಪ್ರತಿಭೆ ಪ್ರದರ್ಶಿಸಿದ್ದೇನೆ. ಇದು ನನ್ನ ಸಿನಿ ಪಯಣದ ಯಶಸ್ವಿ ಪಯಣವೆಂದು ನಾನು ಭಾವಿಸುತ್ತೇನೆ. ಈ ವಿಷಯದಲ್ಲಿ ನನಗೆ ದೇವರ ಆಶೀರ್ವಾದವೂ ಇದೆ. ನನಗೆ ಅತ್ಯಂತ ಆತ್ಮವಿಶ್ವಾಸ ಮತ್ತು ಒಂದು ರೀತಿಯ ಸಮಾಧಾನ ತಂದು ಕೊಟ್ಟ ವಿಷಯವಿದು, ನಟಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಅವರ ಮುಂದಿನ ಸಿನಿಮಾ ಪುಷ್ಪಾ 2 ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲ್ಲಿದ್ದು, ಈ ಸಿನಿಮಾದ ಚಿತ್ರೀಕರಣದ ಅನುಭವಗಳ ಬಗ್ಗೆ ಸಹ ನಟಿ ಮಾತಾನಾಡಿದ್ದಾರೆ.
'ಇದು ಉತ್ತಮವಾಗಿ ನಡೆಯುತ್ತಿದೆ. ನಾವು ಚಲನಚಿತ್ರದಲ್ಲಿ ಸುಮಾರು 50ಕ್ಕೂ ಹೆಚ್ಚು ದಿನಗಳನ್ನು ಮುಗಿಸಿದ್ದೇವೆ ಮತ್ತು ಇನ್ನೂ ಹೆಚ್ಚಿನದನ್ನು ಮಾಡಬೇಕು, ಆದರೆ ಇದು ಹಿಂದೆಂದಿಗಿಂತಲೂ ದೊಡ್ಡದಾಗಿರುತ್ತದೆ ಎಂದು ನಾನು ಯಾವಾಗಲೂ ನನ್ನ ಪ್ರೇಕ್ಷಕರಿಗೆ ಭರವಸೆ ನೀಡುತ್ತಿದ್ದೇನೆ. ಸಾಕಷ್ಟು ಕಠಿಣ ಪರಿಶ್ರಮವಿದೆ ಮತ್ತು ಹೆಚ್ಚಿನ ಗಮನ ಹರಿಸಿ ಸಿನಿಮಾ ಮಾಡಲಾಗಿದೆ. ಪ್ರತಿಯೊಂದೂ ಪಾತ್ರದ ಮೇಲೂ ಹೆಚ್ಚಿನ ಗಮನ ನೀಡುವಂತೆ ಕಾಳಜಿ ವಹಿಸಿದ್ದು, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ,' ಎಂದು ರಶ್ಮಿಕಾ ಪುಷ್ಪಾ 2 ಶೂಟಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ.
ಮಂದಣ್ಣ ಅವರು ಹಿಂದಿ ಮತ್ತು ದಕ್ಷಿಣದ ಎರಡೂ ಚಲನಚಿತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟಿ ಪ್ಯಾನ್ ಇಂಡಿಯನ್ ಅಂಶವನ್ನು ಹೇಳುವಾಗ, ಯಾವುದೂ ಮೇಲಲ್ಲ, ಕೀಳಲ್ಲ ಎಂಬುದನ್ನು ಪ್ರಬುದ್ಧವಾಗಿ ಮಾತನಾಡುವಂತೆ ಕಾಣಿಸುತ್ತದೆ.ಎರಡನ್ನೂ ಸಮಾನವಾಗಿ ತಕ್ಕಡಿ ಹಾಕಿ ತೂಗುವಲ್ಲಿ ಯಶಸ್ವಿಯಾದಂತೆ ರಶ್ಮಿಕಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
'ನಾವೆಲ್ಲರೂ ಮನರಂಜನಾ ಉದ್ಯಮದಲ್ಲಿದ್ದೇವೆ. ಒಂದೇ ದೇಶವಾಗಿರುವುದರಿಂದ ನಾವು ಉದ್ಯಮವನ್ನು ಭಾರತೀಯ ಚಲನಚಿತ್ರೋದ್ಯಮ ಎಂದು ಕರೆಯಲು ಪ್ರಾರಂಭಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ.ನಮ್ಮ ದೇಶದ ಎಲ್ಲಾ ಸಿನಿಮಾ ಇಂಡಸ್ಟ್ರಿಗಳು ಒಂದೇ ಎಂದು ನಾವು ಒಪ್ಪಿಕೊಳ್ಳಲು ಪ್ರಾರಂಭಿಸುವ ಸಮಯವಿದು. ಕೂಲ್ ಚಲನಚಿತ್ರಗಳನ್ನು ಮಾಡಲು ಮತ್ತು ಕೆಲವು ನಿಜವಾಗಿಯೂ ಕೂಲ್ ಕಥೆಗಳನ್ನು ಹೇಳಲು ನಾವೆಲ್ಲರೂ ಇಲ್ಲಿದ್ದೇವೆ. ಅಡೆತಡೆಗಳು ಕಡಿಮೆಯಾಗುತ್ತಿವೆ. ಜನರು ಎಲ್ಲಿಗೆ ಸೇರಿದವರಾಗಿದ್ದರೂ ವಿಭಿನ್ನ ಇಂಡಸ್ಟ್ರಿ ಮತ್ತು ವಿಭಿನ್ನ ಭಾಷೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ಇಷ್ಟಪಡುತ್ತೇನೆ. ಬದಲಾವಣೆಯ ಭಾಗವಾಗಬೇಕೆಂಬುವುದು ನನ್ನಾಸೆ. ಇದು ನಂಗೆ ನಿಜವಾಗಲೂ ಖುಷಿ ಕೊಟ್ಟಿದೆ,' ಎಂದು ರಶ್ಮಿಕಾ ತಮ್ಮ ಮಾತನ್ನು ಕೊನೆಗೊಳಿಸಿದ್ದಾರೆ,